ಆನಂದಪುರದಲ್ಲಿ ದೀಪಾವಳಿ ನೋನಿ ಪೂಜೆ ಸಂಪನ್ನ

KannadaprabhaNewsNetwork |  
Published : Nov 14, 2023, 01:15 AM IST
ಫೋಟೋ 13 ಎ, ಎನ್, ಪಿ 1 ಆನಂದಪುರ ಇಲ್ಲಿಗೆ ಸಮೀಪದ  ಚನ್ನಶೆಟ್ಟಿಕೊಪ್ಪ ಗ್ರಾಮದಲ್ಲಿ  ಸಂಭ್ರಮದ ನೋನಿ ಹಬ್ಬ ಆಚರಣೆ. | Kannada Prabha

ಸಾರಾಂಶ

ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಶೆಟ್ಟಿಕೊಪ್ಪ

ಕನ್ನಡಪ್ರಭ ವಾರ್ತೆ ಆನಂದಪುರ

ದೊಡ್ಡ ಹಬ್ಬ ಒಂದೇ ಪರಿಗಣಿಸಲ್ಪಟ್ಟ ದೀಪಾವಳಿ ಹಬ್ಬದ ಅಮಾವಾಸ್ಯೆಯಂದು ಒಂದೊಂದು ಗ್ರಾಮದಲ್ಲಿ ಒಂದೊಂದು ರೀತಿಯ ಆಚಾರ ವಿಚಾರ ಪದ್ಧತಿಯಿದ್ದು, ಸಂಪ್ರದಾಯದಂತೆ ಗ್ರಾಮದೇವರ ನೋನಿಹಬ್ಬ ಆಚರಿಸುತ್ತಾರೆ. ಅದರಂತೆ ಆನಂದಪುರ ಸಮೀಪದ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಶೆಟ್ಟಿಕೊಪ್ಪದಲ್ಲಿ ಭಾನುವಾರ ವಿಶೇಷ ನೋನಿ ಹಬ್ಬ ಆಚರಿಸಲಾಯಿತು.

ಗ್ರಾಮದಲ್ಲಿ ಪೂರ್ವಜರು ನಡೆಸಿಕೊಂಡು ಬಂದ ನೋನಿ ಹಬ್ಬ ಕಟ್ಟುನಿಟ್ಟಿನ ಆಚರಣೆ. ಸಂಪ್ರದಾಯದಂತೆ ಗ್ರಾಮದ ಶೀಲವಂತ ದೇವರಿಗೆ ಮೊದಲು ಪೂಜೆ ಸಲ್ಲಿಸಿದರು. ಗ್ರಾಮದ ಕೆರೆ ತುದಿಯಲ್ಲಿರುವ ಗ್ರಾಮ ದೇವರಿಗೆ ಪ್ರತ್ಯೇಕವಾದ ದೇವರ ಬನವಿದ್ದು, ಈ ಬನದಲ್ಲಿ ಗ್ರಾಮಸ್ಥರೆಲ್ಲ ಪೂಜೆ ಸಲ್ಲಿಸಿ, ಹಣ್ಣುಕಾಯಿ ನೈವೇದ್ಯ ಮಾಡಲಾಯಿತು.

48ಕ್ಕೂ ಹೆಚ್ಚು ದೇವತೆಗಳ ಬೆಳ್ಳಿ, ತಾಮ್ರ, ಹಿತ್ತಾಳೆ, ಕಂಚು ಇತ್ಯಾದಿ ಲೋಹದಿಂದ ತಯಾರಿಸಿದ್ದ ದೇವರ ವಿಗ್ರಹವನ್ನು ಅಕ್ಕಿ ರಾಶಿಯಲ್ಲಿಟ್ಟು ಪೂಜಿಸಿದರು.

ವಿವಿಧ ಲೋಹಗಳಿಂದ ತಯಾರಿಸಿದ ದೇವರ ವಿಗ್ರಹಗಳನ್ನು ಪ್ರತಿವರ್ಷ ದೀಪಾವಳಿ ಅಮಾವಾಸ್ಯೆ ದಿನ ಮಣ್ಣಿನ ಮಡಿಕೆಯಲ್ಲಿ ಮಣ್ಣಿನಡಿ ಹೂತ್ತಿಡುತ್ತಾರೆ. ಈ ವಿಗ್ರಹಗಳನ್ನು ಪುರೋಹಿತರ ಸಮ್ಮುಖ ಹೊರತೆಗೆದು ದೇವರನ್ನು ಶುದ್ಧೀಕರಿಸಿ, ಪೂಜೆ ಸಲ್ಲಿಸುತ್ತಾರೆ. ಈ ಸಮಯದಲ್ಲಿ ಗ್ರಾಮದ 150ಕ್ಕು ಹೆಚ್ಚು ಕುಟುಂಬದವರು ದೇವರ ಬನಕ್ಕೆ ತೆರಳಿ ಶ್ರದ್ಧಾ-ಭಕ್ತಿಯಿಂದ ಪೂಜೆ ಸಲ್ಲಿಸುವುದು ಈ ಗ್ರಾಮದ ವಿಶೇಷ ಪದ್ಧತಿ.

ಗ್ರಾಮದೇವರ ಪೂಜೆ ಮುಗಿದ ನಂತರ ದೇವರ ಎಲ್ಲ ವಿಗ್ರಹಗಳನ್ನು ಮಣ್ಣಿನ ಮಡಿಕೆಯಲ್ಲಿಟ್ಟು ಕಾಡಿನ ಮಧ್ಯದಲ್ಲಿ ಗುಂಡಿ ತೆಗೆದು ಮಣ್ಣಿನಲ್ಲಿ ಮುಚ್ಚಿಡಲಾಯಿತು. ಈ ವಿಗ್ರಹಕ್ಕೆ ಮತ್ತೆ ಪೂಜೆ ಆಗಬೇಕಾದರೆ ಮುಂದಿನ ವರ್ಷದ ದೀಪಾವಳಿವರೆಗೆ ಕಾಯಬೇಕಿದೆ.

ನೋನಿ ಹಬ್ಬದ ನಿಮಿತ್ತ ಚನ್ನಶೆಟ್ಟಿಕೊಪ್ಪ ಗ್ರಾಮದ ಮನೆಯ ಪ್ರತಿ ಕುಟುಂಬದ ಸದಸ್ಯರು ಉಪವಾಸವಿದ್ದು, ಸಂಜೆ ವೇಳೆಗೆ ಗ್ರಾಮದ ಪ್ರತಿ ಶೀಲವಂತ ದೇವರಿಗೂ ಹಣ್ಣು -ಕಾಯಿ ನೈವೇದ್ಯ ಮಾಡಿದರು. ನಂತರ ಗ್ರಾಮದ ಕೆರೆ ತುದಿಯಲ್ಲಿರುವ ಇನ್ನೊಂದು ದೇವರಿಗೆ ಪ್ರಾಣಿಬಲಿ ನೀಡಿ, ನೀರು ಆಹಾರ ಸೇವನೆ ಮಾಡಿದರು.

- - - -13ಎಎನ್‌ಪಿ1:

ಆನಂದಪುರ ಸಮೀಪದ ಚನ್ನಶೆಟ್ಟಿಕೊಪ್ಪದಲ್ಲಿ ನೋನಿ ಹಬ್ಬ ಆಚರಿಸಲಾಯಿತು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ