ಅರಸೀಕೆರೆ: ತಾಲೂಕಿನ ಮಾಡಾಳು ಗ್ರಾಮದಲ್ಲಿರುವ ಮೂಲಸ್ಥಾನ ಮೂಗುತಿ ಸುಂದರಿ ಶ್ರೀ ಸ್ವರ್ಣ ಗೌರಮ್ಮ ದೇವಿ ದೇವಾಲಯದಲ್ಲಿ ಜಗದ್ಗುರು ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ದಿವ್ಯಸಾನ್ನಿಧ್ಯದಲ್ಲಿ 11 ಸಹಸ್ರ ದೀಪೋತ್ಸವ ಕಾರ್ಯಕ್ರಮ ಜರುಗಿತು.ಗ್ರಾಮದ ಹೊರಭಾಗದ ಶಿವ ಬಸವ ಕುಮಾರಾಶ್ರಮ ರಸ್ತೆಯ ಬಳಿಯಲ್ಲಿ ಭಕ್ತಿ ಲೌಕಿಕ ಕಲ್ಯಾಣಕ್ಕಾಗಿ 2ನೇ ವರ್ಷದ ದೀಪೋತ್ಸವ ಕಾರ್ಯಕ್ರಮವನ್ನು ಸ್ವಾಮೀಜಿಗಳು ದೀಪಬೆಳಗಿಸುವ ಮೂಲಕ ಚಾಲನೆ ನೀಡಿದರು. ಶ್ರೀಗಳು ಮೊದಲ ದೀಪ ಹಚ್ಚುತ್ತಿದ್ದಂತೆ ನೂರಾರು ಮಹಿಳೆಯರು, ಯುವಕರು, ಯುವತಿಯರು ಸರತಿ ಸಾಲಿನಲ್ಲಿ ಜೋಡಿಸಲ್ಪಟ್ಟ ದೀಪಗಳನ್ನು ಬೆಳಗಿಸಿದರು. ಸಾವಿರಾರು ದೀಪಗಳು ಒಂದೇ ಕ್ಷಣದಲ್ಲಿ ಹೊಳೆದು ಕಂಗೊಳಿಸಿದ ದೃಶ್ಯ ನಯನಮನೋಹರವಾಗಿ ಕಂಡಿತು.ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಕತ್ತಲೆಯನ್ನು ನಿವಾರಿಸಲು ಸೂರ್ಯ ಚಂದ್ರ ದೀಪ ಬೇಕಾದಂತೆ, ಮನುಷ್ಯನ ಮನದಲ್ಲಿರುವ ಅಜ್ಞಾನ ಮತ್ತು ಅಂಧಕಾರವನ್ನು ಓಡಿಸಲು ಗುರುಗಳ ಕಾರುಣ್ಯ ಅಗತ್ಯ ಎಂದು ಹೇಳಿ ಭಕ್ತರಿಗೆ ಆಶೀರ್ವಚನ ನೀಡಿದರು.ಭಕ್ತಾದಿಗಳಿಗೆ ಕೋಡಿಮಠ ಮಹಾಸಂಸ್ಥಾನದಿಂದ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ರಾಂಪುರದ ಶ್ರೀ ನಿರ್ಮಾಣ ಸಿದ್ದೇಶ್ವರ ಭಜನಾಮಂಡಳಿ ತಂಡದಿಂದ ಭಜನೆ ಹಾಗೂ ಕೀರ್ತನೆಗಳು ನಡೆಯಿತು.