ಸಾಲಿಗ್ರಾಮ ಪಪಂ ಆಗಿ ಮೇಲ್ದರ್ಜೆಗೆ

KannadaprabhaNewsNetwork |  
Published : Dec 01, 2025, 03:15 AM IST
57 | Kannada Prabha

ಸಾರಾಂಶ

ಸಾಲಿಗ್ರಾಮ ಗ್ರಾಪಂ ಪ್ರಸ್ತುತ 30 ಸದಸ್ಯ ಸ್ಥಾನಗಳನ್ನು ಹೊಂದಿದ್ದು ಪಟ್ಟಣದಲ್ಲಿ 16 ಸಾವಿರಕ್ಕಿಂತ ಅಧಿಕ ಜನ ಸಂಖ್ಯೆ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಕೆ.ಆರ್. ನಗರ ಕ್ಷೇತ್ರ ವ್ಯಾಪ್ತಿಗೆ ಒಳ ಪಡುವ ಸಾಲಿಗ್ರಾಮ ತಾಲೂಕು ಕೇಂದ್ರದ ಗ್ರಾಪಂ ಅನ್ನು ಪಪಂ ಅನ್ನಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ನಿರ್ಧಾರಿಸಿದ್ದು, ಪಟ್ಟಣದ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಶಾಸಕ ಡಿ. ರವಿಶಂಕರ್ ತಿಳಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಸತತ ಪ್ರಯತ್ನದ ಫಲವಾಗಿ ಸಾಲಿಗ್ರಾಮ ಗ್ರಾಪಂ ಪಪಂ ಆಗಿದ್ದು, ಇದು ಜನತೆಯ ದಶಕಗಳ ಕನಸನ್ನು ನನಸು ಮಾಡಿದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಸಾಲಿಗ್ರಾಮ ಗ್ರಾಪಂ ಪ್ರಸ್ತುತ 30 ಸದಸ್ಯ ಸ್ಥಾನಗಳನ್ನು ಹೊಂದಿದ್ದು ಪಟ್ಟಣದಲ್ಲಿ 16 ಸಾವಿರಕ್ಕಿಂತ ಅಧಿಕ ಜನ ಸಂಖ್ಯೆ ಇರುವುದರಿಂದ ಪ್ರಸ್ತುತ ಪಂಚಾಯಿತಿ ಆರ್ಥಿಕ ಸಂಕಷ್ಠದಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದ್ದರಿಂದ ಭವಿಷ್ಯದಲ್ಲಿ ನಾಗರೀಕರಿಗೆ ಅಗತ್ಯ ಮೂಲಭೂತ ಸವಲತ್ತು ಒದಗಿಸಲು ಸರ್ಕಾರದಿಂದ ಹೆಚ್ಚು ಅನುದಾನದ ಅಗತ್ಯವಿತ್ತು. ಅದಕ್ಕಾಗಿ ಗ್ರಾಪಂ ಅನ್ನು ಪಪಂ ಆಗಿ ಮೇಲ್ದರ್ಜೆಗೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪೌರಾಡಳಿತ ಸಚಿವ ರಹೀಂ ಖಾನ್, ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿದ್ದೆ ಎಂದರು.

ನನ್ನ ಮನವಿಯನ್ನು ಪುರಸ್ಕರಿಸಿದ ಸರ್ಕಾರ ಕಳೆದ ಗುರುವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಸಾಲಿಗ್ರಾಮ ಗ್ರಾಪಂ ಅನ್ನು ಪಪಂ ಆಗಿ ಮೇಲ್ದರ್ಜೆಗೇರಿಸುವ ಮಹತ್ವದ ನಿರ್ಣಯ ಕೈಗೊಂಡಿರುವುದು ಅತ್ಯಂತ ಖುಷಿಯ ವಿಚಾರ ಎಂದರು.

ಇದರಿಂದ ಮುಂದಿನ ದಿನಗಳಲ್ಲಿ ಸಾಲಿಗ್ರಾಮ ಪ್ರಮುಖ ಪಟ್ಟಣವಾಗಿ ಅಭಿವೃದ್ದಿ ಹೊಂದುವುದರ ಜತೆಗೆ ಸರ್ಕಾರದಿಂದ ವಾರ್ಷಿಕ ಕೋಟ್ಯಾಂತರ ರೂ. ಅನುದಾನ ಹರಿದು ಬಂದು ಜನತೆಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳು ದೊರಕಲಿವೆ ಎಂದು ಹೇಳಿದರು.

ಸಾಲಿಗ್ರಾಮದಲ್ಲಿ ಈ ಹಿಂದೆ ಆರಂಭವಾಗಿದ್ದ ತಾಲೂಕು ಕಚೇರಿಯ ಜತೆಗೆ ತಾಪಂ ಇಒ ಮತ್ತು ಕಾರ್ಮಿಕ ಇಲಾಖೆ ಕಚೇರಿಗಳು ಹೊಸದಾಗಿ ಕಾರ್ಯಾರಂಭವಾಗಿದ್ದು, ಅಗ್ನಿ ಶಾಮಕ ಠಾಣೆ ನಿರ್ಮಾಣಕ್ಕೆ ಭೂಮಿಪೂಜೆ ಮಾಡಿ ಕಾಮಗಾರಿ ಆರಂಭಿಸಲಾಗಿದೆ. ಸಮುದಾಯ ಆರೋಗ್ಯ ಕೇಂದ್ರವನ್ನು ನೂರು ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಮುಂದಿನ ದಿನಗಳಲ್ಲಿ ಸಾಲಿಗ್ರಾಮ ತಾಲೂಕು ಕೇಂದ್ರದಲ್ಲಿ ತಾಲೂಕು ಮಟ್ಟದ ಎಲ್ಲಾ ಸರ್ಕಾರಿ ಕಚೇರಿಗಳು ಕಾರ್ಯಾಂಭವಾಗುವಂತೆ ಮಾಡುವುದರ ಜತೆಗೆ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ಯೋಜನೆ ಹಮ್ಮಿಕೊಳ್ಳುವುದಾಗಿ ಭರವಸೆ ನೀಡಿದರು.

ನನ್ನ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಸಾಲಿಗ್ರಾಮವನ್ನು ಪಪಂಗೆ ಮೇಲ್ದರ್ಜೆಗೇರಿಸಲು ಪ್ರಮುಖ ಕಾರಣರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಚಿವರಿಗೆ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಶಾಸಕರು ತಿಳಿಸಿದರು.

---

ಕೋಟ್

30ಎಂವೈಎಸ್ 59

ಸಾಲಿಗ್ರಾಮ ಗ್ರಾಪಂ ಅನ್ನು ಪಪಂ ಆಗಿ ಮೇಲ್ದರ್ಜೆಗೇರಿಸಲು ಕಾರಣರಾದ ಶಾಸಕ ಡಿ. ರವಿಶಂಕರ್ ಅವರ ಕೆಲಸ ನಮಗೆ ಹೆಮ್ಮೆ ತಂದಿದೆ. ಇದರಿಂದ ಭವಿಷ್ಯದಲ್ಲಿ ಸಾಲಿಗ್ರಾಮ ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಬೆಳೆಯುವುದರ ಜತೆಗೆ ಪಟ್ಟಣಕ್ಕೆ ಅಗತ್ಯ ಮೂಲ ಸವಲತ್ತು ಸರಾಗವಾಗಿ ದೊರಕಲಿವೆ.

- ಕಂಠಿ ಕುಮಾರ್, ಸಾಲಿಗ್ರಾಮ ತಾಲೂಕು ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ.

---

30ಎಂವೈಎಸ್ 60

ಸಾಲಿಗ್ರಾಮ ಗ್ರಾಪಂ ಅನ್ನು ಪಪಂ ಆಗಿ ಮೇಲ್ದರ್ಜೆಗೇರಿಸುವ ಮೂಲಕ ಜನರ ದಶಕದ ಕನಸನ್ನು ನನಸು ಮಾಡಿರುವ ಶಾಸಕ ಡಿ. ರವಿಶಂಕರ್ ಅವರ ಕಾರ್ಯ ಮತ್ತು ಯೋಚನೆ ಇತರರಿಗೆ ಮಾದರಿಯಾಗಿದ್ದು ಕ್ಷೇತ್ರದ ಜನತೆಯ ಪರವಾಗಿ ಅವರನ್ನು ಅಭಿನಂದಿಸುತ್ತೇನೆ.

- ಸೈಯದ್ ಜಾಬೀರ್, ಕ್ಷೇತ್ರದ ಕಾಂಗ್ರೆಸ್ ವಕ್ತಾರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರದಲ್ಲಿ ದಸರಾ ಮಾದರಿ ವಸ್ತು ಪ್ರದರ್ಶನ
ಚಿತ್ರಕಲೆ ಮಕ್ಕಳಲ್ಲಿ ಪರಿಸರ ಪ್ರೀತಿ ಬೆಳೆಸಲು ಸಹಕಾರಿ