ಅಪಪ್ರಚಾರ ಮುಂದುವರಿಸಿದರೆ ರವಿ ಗಣಿಗ ವಿರುದ್ಧ ಮಾನಹಾನಿ ಕೇಸ್‌ : ಕೇಂದ್ರ ಸಚಿವ ಪ್ರಹ್ಲಾದ ಜೋಶಿ

KannadaprabhaNewsNetwork | Updated : Aug 27 2024, 12:10 PM IST

ಸಾರಾಂಶ

ಕಾಂಗ್ರೆಸ್‌ ತನ್ನ ಹಗರಣವನ್ನು ಮುಚ್ಚಿಕೊಳ್ಳಲು ಶಾಸಕ ರವಿ ಗಣಿಗ ಮೂಲಕ ಕಾಂಗ್ರೆಸ್‌ ಶಾಸಕರಿಗೆ ಬಿಜೆಪಿ ಆಫರ್‌ ನೀಡಿದೆ ಎಂದು ಹೇಳಿಸುತ್ತಿದ್ದಾರೆ. ಇದು ಸುಳ್ಳು ಎಂದಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮುಡಾ ಹಾಗೂ ವಾಲ್ಮೀಕಿ ಹಗರಣಗಳ ದಾಖಲೆಯನ್ನು ನಮಗೆ ಕಾಂಗ್ರೆಸ್‌ನವರು ನೀಡಿದ್ದು ಹೇಳಿದ್ದಾರೆ.

ಹುಬ್ಬಳ್ಳಿ: ಕಾಂಗ್ರೆಸ್‌ ಶಾಸಕರಿಗೆ ಬಿಜೆಪಿ ₹ 50, ₹ 100 ಕೋಟಿ ಆಮಿಷವೊಡ್ಡುತ್ತಿದೆ ಎಂದು ಹಸಿ ಸುಳ್ಳು ಹೇಳುತ್ತಿರುವ ಶಾಸಕ ರವಿ ಗಣಿಗ ವಿರುದ್ಧ ಈಗಾಗಲೇ ದೂರು ದಾಖಲಿಸಲಾಗಿದೆ. ಹೀಗೆ ಅಪಪ್ರಚಾರ, ಆರೋಪ ಮುಂದುವರಿಸಿದರೆ ತಾವು ಮಾನಹಾನಿ ಕೇಸ್‌ ದಾಖಲಿಸಬೇಕಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಎಚ್ಚರಿಕೆ ನೀಡಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ತನ್ನ ಹಗರಣಗಳ ವಿಚಾರವನ್ನು ಡೈವರ್ಟ್ ಮಾಡಲು ಶಾಸಕರಿಂದ ಈ ರೀತಿ ಮಾತನಾಡಿಸುತ್ತಿದೆ. ಒಳ ಜಗಳದಿಂದ ಕಾಂಗ್ರೆಸ್ಸಿ​​ನವರು ಏನೇನೋ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಶಾಸಕ ರವಿ ಗಣಿಗ ವಿರುದ್ಧ ಪಕ್ಷ ದೂರು ಕೊಟ್ಟಿದ್ದು, ಪೊಲೀಸರು ಸರಿಯಾಗಿ ತನಿಖೆ ನಡೆಸಬೇಕು. ಹಿಟ್‌ ಆ್ಯಂಡ್‌ ರನ್ ರೀತಿ ಆಗಬಾರದು. ಒಂದು ವೇಳೆ ಯಾರಾದರೂ ಕರೆ ಮಾಡಿದ್ದರೆ ಅದರ ದಾಖಲೆ, ರೆಕಾರ್ಡ್ ನೀಡಬೇಕು ಎಂದು ಪೊಲೀಸ್ ಇಲಾಖೆಗೆ ಸಚಿವ ಜೋಶಿ ಆಗ್ರಹಿಸಿದರು.

ದಾಖಲೆ ಕೊಟ್ಟಿದ್ದು ಕಾಂಗ್ರೆಸ್‌:

ಮುಡಾ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣಗಳ ದಾಖಲೆಗಳನ್ನು ನಮಗೆ ಕಾಂಗ್ರೆಸ್​ ನಾಯಕರೇ ನೀಡಿದ್ದರು. ನಮಗೆ ದಾಖಲೆ ಕೊಟ್ಟವರು ಯಾರು ಎಂಬುದು ಸಿಎಂಗೂ ಗೊತ್ತಿದೆ ಎಂದ ಅವರು, ಸಿದ್ದರಾಮಯ್ಯ ಅವರು ಮನೆಗೆ ಹೋಗುವುದು ನಿಶ್ಚಿತ. ಕಾಂಗ್ರೆಸ್ ಹೈಕಮಾಂಡ್ ಸಿಎಂ ಪರವಾಗಿದ್ದರೆ ಸಿದ್ದರಾಮಯ್ಯ ಅವರೇಕೆ ಪದೇ ಪದೆ ದೆಹಲಿಗೆ ಹೋಗುತ್ತಿದ್ದರು? ಎಂದು ಪ್ರಶ್ನಿಸಿದ ಜೋಶಿ, ಹೊಸ ಸಿಎಂ ಚರ್ಚೆ ಕಾಂಗ್ರೆಸ್‌ನಲ್ಲಿ ನಡೆಯುತ್ತಿದೆ ಎಂದರು.

ಬ್ಲ್ಯಾಕ್‌ಮೇಲ್‌ ತಂತ್ರ:

ಮಾಜಿ ಸಿಎಂರೊಬ್ಬರ ಸೆಕ್ಸ್‌ ವಿಡಿಯೋ ಇದೆ ಎನ್ನುವುದು ಬ್ಲ್ಯಾಕ್‌ಮೇಲ್‌ ತಂತ್ರ. ಧೈರ್ಯ ಇದ್ದರೆ ಯಾವ ಮಾಜಿ ಮುಖ್ಯಮಂತ್ರಿ ಎನ್ನುವುದನ್ನು ಬಹಿರಂಗಪಡಿಸಲಿ. ಇದಕ್ಕೆ ಅರ್ಥವೇ ಇಲ್ಲ, ನಾವು ಏನು ಪ್ರತಿಕ್ರಿಯೆ ನೀಡಬೇಕು ಎಂದು ಜೋಶಿ, ಅವರ ಹತ್ತಿರ ಆ ತರಹ ಸಿಡಿ ಇದ್ದರೆ ದೂರು ಕೊಡಬೇಕಿತ್ತು. ಯಾಕೆ ಕೊಡಲಿಲ್ಲ ಎಂದು ಪ್ರಶ್ನಿಸಿದರು.

ಬಿಜೆಪಿಯವರು ಹೋರಾಟ ಮಾಡುತ್ತಿದ್ದೀರಿ. ಹೋರಾಟ ಮಾಡಿದರೆ ನಾವು ಸಿಡಿ ಬಿಡುಗಡೆ ಮಾಡುತ್ತೇವೆ ಎಂದು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರಷ್ಟೇ. ಧೈರ್ಯ ಇದ್ದರೆ ಯಾವ ಮಾಜಿ ಸಿಎಂ ಎಂದು ಹೇಳಲಿ ಎಂದು ಸವಾಲು ಹಾಕಿದರು.

Share this article