ಹುಬ್ಬಳ್ಳಿ:
ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಯಿಂದ ತಹಸೀಲ್ದಾರ್ ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ವಿವಿಧ ಸಂಘಟನೆಗಳ ಮುಖಂಡರು, ರವಿ ಹಂಜ್, ಕನ್ಹೇರಿ ಮಠದ ಶ್ರೀ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮನಗುಂಡಿಯ ಬಸವಾನಂದ ಶ್ರೀ, ಬಸವಣ್ಣನವರ ಕುರಿತು ಉದ್ದೇಶ ಪೂರ್ವಕವಾಗಿ ಸುಳ್ಳುಗಳನ್ನು ಹರಡುವ ಪ್ರಯತ್ನ ನಡೆದಿದೆ. ರವಿ ಹಂಜ್ ಬರೆದಿರುವ ಪುಸ್ತಕದಲ್ಲಿ ಸತ್ಯಕ್ಕೆ ದೂರವಾದ ವಿಚಾರಗಳನ್ನು ಉಲ್ಲೇಖಿಸಲಾಗಿದೆ. ಪುಸ್ತಕ ಓದುವ ಅಗತ್ಯವಿಲ್ಲ, ಅದರಲ್ಲಿರುವ ಉದ್ದೇಶವೇ ಬಸವಣ್ಣನವರ ವ್ಯಕ್ತಿತ್ವವನ್ನು ಕುಗ್ಗಿಸಿ, ಚೆನ್ನಬಸವಣ್ಣನವರನ್ನು ಎತ್ತಿಹಿಡಿಯುವುದಾಗಿದೆ ಎಂದು ಆರೋಪಿಸಿದರು.ರವಿ ಹಂಜ್ ಕಾರ್ಯನಿರ್ವಹಿಸುತ್ತಿದ್ದ ಕಂಪನಿಗೆ ಬಸವ ಭಕ್ತರು ಇ-ಮೇಲ್ ಮೂಲಕ ಅವರ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದ್ದರು. ಇದರ ಪರಿಣಾಮವಾಗಿ ಕಂಪನಿಯು ಅವರನ್ನು ಕೆಲಸದಿಂದ ವಜಾಗೊಳಿಸಿರುವುದಾಗಿ ಮಾಹಿತಿ ಬಂದಿದೆ. ನ್ಯಾಯಾಲಯ ಅಥವಾ ವ್ಯಕ್ತಿಗಳು ನೀಡಲಾಗದ ಶಿಕ್ಷೆಯನ್ನು ಕಂಪನಿಯೇ ನೀಡಿದೆ. ಬಸವಣ್ಣನವರ ಕುರಿತು ಅವಹೇಳನ ಮಾಡುವವರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕು. ಈ ವಿಚಾರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ವಿಶ್ವ ಹಿಂದೂ ಪರಿಷತ್ ತಮ್ಮ ನಿಲುವು ಸ್ಪಷ್ಟಪಡಿಸಿ, ಪುಸ್ತಕವನ್ನು ಖಂಡಿಸಬೇಕು. ಮೌನ ವಹಿಸುವುದರಿಂದ ಇಂತಹ ಕೃತ್ಯಗಳಿಗೆ ಬೆಂಬಲ ನೀಡಿದಂತಾಗುತ್ತದೆ ಎಂದು ಹೇಳಿದರು.
ಈ ವೇಳೆ ರುದ್ರಾಕ್ಷಿ ಮಠದ ಬಸವಲಿಂಗ ಶ್ರೀ, ಮುಳ್ಳೊಳ್ಳಿಯ ಶಿವಯೋಗಿ ಶ್ರೀ, ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಬಸವರಾಜ ಸೂಳಿಬಾವಿ, ಗುರುನಾಥ ಉಳ್ಳಿಕಾಶಿ, ಸದಾನಂದ ಡಂಗನವರ, ಬಾಬಾಜಾನ ಮುಧೋಳ, ಮಹೇಶ ಪತ್ತಾರ, ಶಿವಕುಮಾರ ಮೆಣಸಿನಕಾಯಿ, ಭಾಷಾಸಾಬ ತಳೆವಾಡ, ಲಿಂಗರಾಜ ಅಂಗಡಿ, ಅನ್ವರ್ ಮುಧೋಳ, ಮಂಜುನಾಥ ಉಳ್ಳಿಕಾಶಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರಿದ್ದರು.