ರಾಜ್ಯ ಸರ್ಕಾರವು ಇದೇ ಮೊದಲ ಬಾರಿಗೆ ವಿಭಾಗವಾರು ಆಯೋಜಿಸಲು ಉದ್ದೇಶಿಸಿರುವ ಸಂವಿಧಾನ ದಿನಾಚರಣೆಯ ರಾಜ್ಯಮಟ್ಟದ ಮೊದಲ ಕಾರ್ಯಕ್ರಮ ಮೈಸೂರಿನಲ್ಲಿ ಗುರುವಾರ ಅದ್ದೂರಿಯಾಗಿ ನಡೆಯಿತು.
ಕನ್ನಡಪ್ರಭ ವಾರ್ತೆ ಮೈಸೂರು:
ರಾಜ್ಯ ಸರ್ಕಾರವು ಇದೇ ಮೊದಲ ಬಾರಿಗೆ ವಿಭಾಗವಾರು ಆಯೋಜಿಸಲು ಉದ್ದೇಶಿಸಿರುವ ಸಂವಿಧಾನ ದಿನಾಚರಣೆಯ ರಾಜ್ಯಮಟ್ಟದ ಮೊದಲ ಕಾರ್ಯಕ್ರಮ ಮೈಸೂರಿನಲ್ಲಿ ಗುರುವಾರ ಅದ್ದೂರಿಯಾಗಿ ನಡೆಯಿತು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಡಾ। ಎಚ್.ಸಿ.ಮಹದೇವಪ್ಪ ಅವರ ವೈಯಕ್ತಿಕ ಪ್ರತಿಷ್ಠೆಯ ಕಾರ್ಯಕ್ರಮ ಎಂಬಂತೆ ಬಿಂಬಿತವಾಗಿದ್ದ ಸಂವಿಧಾನ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆದಿಯಾಗಿ ಸಚಿವ ಸಂಪುಟದ ಹಲವು ಸಚಿವರು, ಮೈಸೂರು ವಿಭಾಗದ ಕಾಂಗ್ರೆಸ್ ಶಾಸಕರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಬಲ ತುಂಬಿದರು.
ಬೆಳಗ್ಗೆ ನಗರದ ಪುರಭವನ ಆವರಣದ ಡಾ। ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿದರು. ಬಳಿಕ, ಜೆಎಸ್ ಎಸ್ ಮಹಾವಿದ್ಯಾಪೀಠದ ಬಳಿಗೆ ಆಗಮಿಸಿ ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ, ಗನ್ ಹೌಸ್ ವೃತ್ತದ ಬಳಿ ಅಲಂಕೃತ ಬೆಳ್ಳಿ ರಥದಲ್ಲಿ ಇರಿಸಲಾಗಿದ್ದ ಸಂವಿಧಾನ ಪೀಠಿಕೆಗೆ ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಮೆರವಣಿಗೆ ವರ್ಣರಂಜಿತವಾಗಿತ್ತು ಹಾಗೂ ಸರ್ಕಾರಿ ಕಾರ್ಯಕ್ರಮವೊಂದು ಕಡಿಮೆ ಅವಧಿಯಲ್ಲಿ ಇಷ್ಟೊಂದು ಅದ್ಧೂರಿಯಾಗಿ ನಡೆದ ಹಿನ್ನೆಲೆಯಲ್ಲಿ ಇತಿಹಾಸ ನಿರ್ಮಿಸಿತು.
ಮೆರವಣಿಗೆಯಲ್ಲಿ ಸಂವಿಧಾನದ ಆಶಯ ಮತ್ತು ಡಾ। ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಒಳಗೊಂಡ ಸ್ತಬ್ಧಚಿತ್ರಗಳು ಗಮನ ಸೆಳೆದವು. ಅಂಬೇಡ್ಕರ್ ಪರವಾದ ಜೈಕಾರದ ಘೋಷಣೆ, ರಾಷ್ಟ್ರಧ್ವಜದ ಜತೆಗೆ ಸರ್ಕಾರಿ ಕಾರ್ಯಕ್ರಮವಾದರೂ ಕಾಂಗ್ರೆಸ್ ಬಾವುಟಗಳು ರಾರಾಜಿಸಿದವು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಪೊಲೀಸ್ ವಾದ್ಯವೃಂದ, ಹುಲಿವೇಷ, ಚಂಡೆ, ನಗಾರಿ, ಮೂಲಭೂತ ಹಕ್ಕು ಪ್ರತಿಬಿಂಬಿಸುವ ಸ್ತಬ್ಧಚಿತ್ರ, ಗೊರವರ ಕುಣಿತ, ಲಂಬಾಣಿ ನೃತ್ಯ, ಸಂಪ್ರದಾಯ ವೃತ್ತಗಳು, ಸಾಮಾಜಿಕ ನ್ಯಾಯ ಬಿಂಬಿಸುವ ಸ್ತಬ್ಧಚಿತ್ರಗಳು ಪಾಲ್ಗೊಂಡವು.
ಮಹಾರಾಜ ಕಾಲೇಜು ಮೈದಾನದಲ್ಲಿ ನಿರ್ಮಿಸಿದ್ದ ಭವ್ಯ ವೇದಿಕೆಯಲ್ಲಿ ಒಂದೆಡೆ ಸಂವಿಧಾನದ ಪೀಠಿಕೆ, ಮತ್ತೊಂದೆಡೆ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಮ್ ಅವರ ಭಾವಚಿತ್ರಗಳನ್ನಿರಿಸಿ ಪುಷ್ಪಾರ್ಚನೆ ನೆರವೇರಿಸಲಾಯಿತು. ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಗಣ್ಯರು, ಬಳಿಕ ಹೊಂಬಾಳೆಯನ್ನು ತೆರೆದು ಸಂವಿಧಾನ ದಿನಾಚರಣೆಗೆ ಚಾಲನೆ ನೀಡಿದರು. ಬಳಿಕ ಸಚಿವ ಪಿ.ಎಂ.ನರೇಂದ್ರಸ್ವಾಮಿ ಅವರು ಸಂವಿಧಾನ ಪೀಠಿಕೆ ಬೋಧಿಸಿದರು. ನಂತರ ಗಣ್ಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಬಹುತೇಕ ನಾಯಕರು, ಸಂವಿಧಾನದ ಹೆಸರಿನಲ್ಲಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ಸಂವಿಧಾನದ ಮೇಲೆ ನಂಬಿಕೆ ಇಲ್ಲದವರು ಅದನ್ನು ಬದಲಾಯಿಸಲು ಮುಂದಾಗಿದ್ದಾರೆ. ಇವರಿಂದ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ ಎಂದು ಹರಿಹಾಯ್ದರು.
ಜನಸಾಗರ, ಸಂಚಾರ ದಟ್ಟಣೆ:
ಸಂವಿಧಾನ ದಿನಾಚರಣೆ ಅಂಗವಾಗಿ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಸುಮಾರು 500ಕ್ಕೂ ಹೆಚ್ಚು ಬಸ್ ಗಳನ್ನು ಸಂವಿಧಾನ ದಿನಾಚರಣೆಗೆ ತೆಗೆದುಕೊಂಡಿದ್ದರಿಂದ ಮೈಸೂರು ನಗರ ಮತ್ತು ಗ್ರಾಮಾಂತರ ಪ್ರದೇಶದ ಅನೇಕ ಕಡೆ ಬಸ್ ಕೊರತೆ ಉಂಟಾಯಿತು. ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಬಸ್ಗಳು ಇಲ್ಲದೆ ಪರದಾಡಿದರು. ಮೈಸೂರು ನಗರ ಪೂರ್ತಿ ಫ್ಲೆಕ್ಸ್ ಗಳಿಂದ ತುಂಬಿಹೋಗಿತ್ತು.ಸಂವಿಧಾನ, ಪ್ರಜಾಪ್ರಭುತ್ವ ಉಳಿದ್ರೆ ನಮ್ಮ ಉಳಿವು:
ಹಂತ ಹಂತವಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ದುರ್ಬಲಗೊಳಿಸುತ್ತಿರುವ ಈ ಸಂದರ್ಭದಲ್ಲಿ ಎರಡನೇ ಸ್ವಾತಂತ್ರ್ಯ ಹೋರಾಟ ನಡೆಸಬೇಕಾದ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಗುರುವಾರ ಮೈಸೂರು ವಿಭಾಗ ಮಟ್ಟದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿದರೆ ಮಾತ್ರ ನಾವೆಲ್ಲರೂ ಉಳಿಯಲು ಸಾಧ್ಯ. ಸಂವಿಧಾನದ ಆಶಯಗಳು, ಅಂಬೇಡ್ಕರ್ ಅವರ ಎಚ್ಚರಿಕೆಯ ಮಾತುಗಳು, ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ನಿವಾರಣೆಗೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳು ಹಾಗೂ ಸಂವಿಧಾನದ ರಕ್ಷಣೆಯ ಅಗತ್ಯತೆ ಕುರಿತು ವಿವರಿಸಿದರು.ಸಂವಿಧಾನ ಅಂಗೀಕಾರಗೊಂಡಾಗ ಅನೇಕರು ಸಂವಿಧಾನವನ್ನು ಟೀಕಿಸಿದ್ದರು. ಸಂವಿಧಾನದಲ್ಲಿ ಭಾರತೀಯತೆಯೇ ಇಲ್ಲ ಎಂದು ದೂರಿದ್ದರು. ಆದರೆ ಇಂದು ಬಿಜೆಪಿ ಅವರು ಸಂವಿಧಾನವನ್ನು ರಕ್ಷಿಸುವುದಾಗಿ ಹಾಗೂ ಅದರ ಆಶಯ ಈಡೇರಿಸುವುದಾಗಿ ಹೇಳುತ್ತಿದ್ದಾರೆ. ಸಂವಿಧಾನ ವಿರೋಧಿಸಿದ ಸಿದ್ಧಾಂತದ ಹಿನ್ನೆಲೆಯಿಂದ ಬಂದವರಿಗೆ ಸಂವಿಧಾನ ರಕ್ಷಣೆಯ ಬಗ್ಗೆ ಮಾತನಾಡುವ ನೈತಿಕ ಹಕ್ಕು ಎಲ್ಲಿದೆ ಎಂದು ಪ್ರಶ್ನಿಸಿದರು.ರಾಜ್ಯದಿಂದ ಆಯ್ಕೆಯಾಗಿದ್ದ ಮಾಜಿ ಸಂಸದರೊಬ್ಬರು ಸಂವಿಧಾನ ಬದಲಾವಣೆ ಮಾಡಲೆಂದೇ ಅಧಿಕಾರಕ್ಕೆ ಬಂದಿರುವುದಾಗಿ ಹೇಳಿದ್ದರು. ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಜಾತ್ಯತೀತತೆ ಮತ್ತು ಸಮಾನತೆಯ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಆದರೆ ಬಿಜೆಪಿಯವರು ಈ ಮೌಲ್ಯಗಳಿಗೆ ವಿರುದ್ಧವಾದ ಸಿದ್ಧಾಂತ ಹೊಂದಿದ್ದಾರೆ ಎಂದು ಅವರು ಟೀಕಿಸಿದರು.ದಲಿತ ಸಂಘಟನೆಗಳಿಂದ ಸಂವಿಧಾನ ದಿನಾಚರಣೆ:
ಭಾರತದ ಸಂವಿಧಾನ ಅಂಗೀಕಾರವಾಗಿ 77 ವರ್ಷಗಳು ಕಳೆದಿದ್ದರೂ ಅದರ ಆಶಯಗಳು ಸಂಪೂರ್ಣವಾಗಿ ಈಡೇರಿಲ್ಲ. ಸಂವಿಧಾನದ ಆಶಯಗಳು ಪ್ರತಿಯೊಬ್ಬರಿಗೂ ಅರ್ಥವಾಗಬೇಕು, ಸಂವಿಧಾನದ ಧ್ವನಿ ಜನರ ಧ್ವನಿಯಾಗಬೇಕು. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಸಂವಿಧಾನ ದಿನಾಚರಣೆಯ ಅಂಗವಾಗಿ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ, ಸಂವಿಧಾನ ಜನಾಂದೋಲನ ಸಮಿತಿಗಳು ಸಂಯುಕ್ತವಾಗಿ ಗುರುವಾರ ಆಯೋಜಿಸಿದ್ದ ‘ಸಂವಿಧಾನ ಧ್ವನಿ–ಜನರ ಧ್ವನಿ’- ಜನಜಾಗೃತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಸಂವಿಧಾನದ ಕುರಿತು ಪ್ರತಿಯೊಬ್ಬರಿಗೂ ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ತಾವು ಮುಖ್ಯಮಂತ್ರಿಯಾಗಿದ್ದಾಗ ಹಾಗೂ ಡಾ। ಎಚ್.ಸಿ.ಮಹದೇವಪ್ಪ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಯುವಜನರು ಸಂವಿಧಾನದ ಪೀಠಿಕೆಯನ್ನು ಓದುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂವಿಧಾನದ ಅರಿವು ಮೂಡಿಸುವ ಮೂಲಕವೇ ಜನರು ತಮ್ಮ ಹಕ್ಕುಗಳನ್ನು ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿರುವ ಅನ್ಯಾಯಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ಅವರು ಹೇಳಿದರು.ಭಾರತದ ಚುನಾವಣಾ ಆಯೋಗದ ನಿವೃತ್ತ ಮುಖ್ಯ ಆಯುಕ್ತ ಡಾ। ಎಸ್.ವೈ.ಖುರೇಷಿ ಅವರು ವಿಶೇಷ ಉಪನ್ಯಾಸ ನೀಡಿದರು. ಮಾಜಿ ಸಚಿವ ಹಾಗೂ ಶಾಸಕ ಡಾ.ಎಚ್.ಸಿ.ಮಹದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ, ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಮೊದಲಾದವರು ಇದ್ದರು.ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಹಾಗೂ ದಲಿತರು ಸೇರಿದಂತೆ ಅವಕಾಶವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಅಹಿಂದ ಚಳವಳಿಯನ್ನು ರೂಪಿಸಲಾಗಿತ್ತು. ಸಂವಿಧಾನದ 17ನೇ ವಿಧಿಯಡಿ ಅಸ್ಪೃಶ್ಯತೆಯನ್ನು ನಿಷೇಧಿಸಲಾಗಿದ್ದರೂ ವಾಸ್ತವದಲ್ಲಿ ಅಸ್ಪೃಶ್ಯತೆ ಇನ್ನೂ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ. ಸಂವಿಧಾನದ ಆಶಯಗಳಿಗೂ, ಸಾಮಾಜಿಕ ವಾಸ್ತವಕ್ಕೂ ಇರುವ ಅಂತರವನ್ನು ನಿವಾರಿಸುವ ಅಗತ್ಯವಿದೆ ಎಂದು ಅವರು ಹೇಳಿದರು.ಕೋಟ್...ಸಂವಿಧಾನದ ಪರವಾಗಿರುವವರು ಯಾರು, ಮನುಸ್ಮೃತಿಯ ಪರವಾಗಿರುವವರು ಯಾರು ಎಂಬುದನ್ನು ಜನರು ಗುರುತಿಸಿಕೊಳ್ಳಬೇಕು. ಸಂವಿಧಾನ ಮತ್ತು ಅಂಬೇಡ್ಕರ್ ಅವರ ವಿಚಾರಧಾರೆಗೆ ಬದ್ಧರಾಗಿರುವುದು ಕೇವಲ ಮಾತುಗಳಿಗೆ ಸೀಮಿತವಾಗಬಾರದು. ನಮ್ಮ ನಡೆ ಮತ್ತು ನಿಲುವುಗಳಲ್ಲಿಯೂ ಆ ಬದ್ಧತೆ ಪ್ರತಿಫಲಿಸಬೇಕು. ಸಂವಿಧಾನದ ಶ್ರೇಷ್ಠತೆ ಅದನ್ನು ಅನುಷ್ಠಾನಗೊಳಿಸುವವರ ಬದ್ಧತೆಯ ಮೇಲೆ ನಿರ್ಧಾರವಾಗುತ್ತದೆ.- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.