ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕಕ್ಕೆ ಸೋಲು

KannadaprabhaNewsNetwork |  
Published : Aug 21, 2025, 01:00 AM ISTUpdated : Aug 21, 2025, 10:59 AM IST
hk patil

ಸಾರಾಂಶ

ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕಕ್ಕೆ ವಿಧಾನ ಪರಿಷತ್ತಿನಲ್ಲಿ ಸೋಲಾಗಿದೆ.

 ಬೆಂಗಳೂರು :  ಸೌಹಾರ್ದ ಸಹಕಾರಿ ಬ್ಯಾಂಕುಗಳು ತಮ್ಮ ಠೇವಣಿಯ ಶೇ.20ರಷ್ಟು ಮೊತ್ತ ಪ್ರತಿ ಮೂರು ತಿಂಗಳಿಗೊಮ್ಮೆ ಅಪೆಕ್ಸ್ ಅಥವಾ ಡಿಸಿಸಿ ಬ್ಯಾಂಕುಗಳಲ್ಲಿ ಇರಿಸಬೇಕು. ಬ್ಯಾಂಕುಗಳ ಅಧ್ಯಕ್ಷರು, ಪದಾಧಿಕಾರಿಗಳು ಪ್ರತಿ ವರ್ಷ ತಮ್ಮ ಆಸ್ತಿ ಘೋಷಿಸುವ ಸಂಬಂಧ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕಕ್ಕೆ ವಿಧಾನ ಪರಿಷತ್ತಿನಲ್ಲಿ ಸೋಲಾಗಿದೆ.

ಸುದೀರ್ಘ ಚರ್ಚೆ ನಂತರ ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ವಿಧೇಯಕ ಅಂಗೀಕಾರಕ್ಕೆ ಮುಂದಾದಾಗ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮತಕ್ಕೆ ಹಾಕುವಂತೆ ಮಾಡಿದ ಮನವಿಯಂತೆ ಸಭಾಪತಿ ಅವರು ಒಪ್ಪಿದರು. ನಂತರ ನಡೆದ ಪ್ರಕ್ರಿಯೆಯಲ್ಲಿ ವಿಧೇಯಕದ ವಿರುದ್ಧವಾಗಿ 26 ಸದಸ್ಯರು ಪರವಾಗಿ 23 ಸದಸ್ಯರು ಬೆಂಬಲಿಸಿದ ಕಾರಣ ವಿಧೇಯಕ ತಿರಸ್ಕೃತಗೊಂಡಿತು.

ವಿಧಾನಸಭೆಯಲ್ಲಿ ಅಂಗೀಕರಿಸಿದ ವಿಧೇಯಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಮಂಡಿಸಿದರು.

ವಿಧೇಯಕದ ಕುರಿತು ವಿವರಿಸಿದ ಅವರು, ಸೌಹಾರ್ದ ಸಹಕಾರಿ ಬ್ಯಾಂಕುಗಳು ತಮ್ಮ ಠೇವಣಿಯ ಶೇ.20ರಷ್ಟು ಮೊತ್ತವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಅಪೆಕ್ಸ್ ಅಥವಾ ಡಿಸಿಸಿ ಬ್ಯಾಂಕುಗಳಲ್ಲಿ ‘ಸ್ಟ್ಯಾಚುಟರಿ ಲಿಕ್ವಿಡಿಟಿ ರೇಶಿಯೋ’ (ಎಸ್‌ಎಲ್‌ಆರ್) ರೂಪದಲ್ಲಿ ಇರಿಸಬೇಕು. ಬ್ಯಾಂಕುಗಳ ಅಧ್ಯಕ್ಷರು ಸೇರಿ ಪದಾಧಿಕಾರಿಗಳು ಪ್ರತಿ ವರ್ಷ ತಮ್ಮ ಆಸ್ತಿ ಘೋಷಣೆ ಮಾಡಬೇಕು ಹಾಗೂ ಸ್ವಯಂ ನಿರ್ಧಾರದಂತೆ ತಮಗೆ ಬೇಕಾದ ಬ್ಯಾಂಕುಗಳಲ್ಲಿ ಠೇವಣಿ ಇರಿಸುವುದನ್ನು ಈ ವಿಧೇಯಕ ನಿಯಂತ್ರಿಸುತ್ತದೆ ಎಂದು ತಿಳಿಸಿದರು.

ರಾಜ್ಯದಲ್ಲಿ ನೋಂದಣಿಯಾಗಿರುವ 6,500 ಸೌಹಾರ್ದ ಸಹಕಾರಿ ಬ್ಯಾಂಕುಗಳ ಪೈಕಿ 1,148 ಬ್ಯಾಂಕುಗಳು ಕಾರ್ಯಾಚರಣೆ ಸ್ಥಗಿತಗೊಳಿಸಿವೆ. 300 ಮುಚ್ಚುವ ಹಂತದಲ್ಲಿವೆ. ಸಕ್ರಿಯವಾಗಿರುವ ಬ್ಯಾಂಕುಗಳ ಪೈಕಿ 1,282 (3/1ರಷ್ಟು) ಬ್ಯಾಂಕುಗಳ ನಷ್ಟದಲ್ಲಿವೆ. ಹೀಗಾಗಿ, ಬ್ಯಾಂಕುಗಳನ್ನು ನಿಯಂತ್ರಣದಲ್ಲಿಡಲು, ಶಿಸ್ತು, ಪಾರದರ್ಶಕತೆ, ಸಹಕಾರಿ ಕ್ಷೇತ್ರದ ಗ್ರಾಹಕರಿಗೆ ವಿಶ್ವಾಸ, ನಂಬಿಕೆ ಮೂಡಿಸುವ ಉದ್ದೇಶದಿಂದ ವಿಧೇಯಕ ತರಲಾಗಿದೆ ಎಂದು ಎಚ್.ಕೆ.ಪಾಟೀಲ್‌ ವಿವರಿಸಿದರು

ಆದರೆ ವಿಧೇಯಕದಲ್ಲಿನ ಅಂಶಗಳಿಗೆ ಬಿಜೆಪಿಯ ಸಿ.ಟಿ.ರವಿ, ಎನ್.ರವಿಕುಮಾರ್, ಕೆ.ಎಸ್‌.ನವೀನ್, ಪ್ರತಾಪ್ ಸಿಂಹ ನಾಯಕ್, ಎಚ್.ವಿಶ್ವನಾಥ, ಜೆಡಿಎಸ್‌ನ ಭೋಜೇಗೌಡ, ಡಿ.ಎಸ್.ಅರುಣ್ ಸೇರಿ ಅನೇಕ ಸದಸ್ಯರು ವಿರೋಧ ವ್ಯಕ್ತಪಡಿಸಿ, ಪ್ರತಿ ವರ್ಷ ಆಸ್ತಿ ವಿವರ ಘೋಷಣೆಯ ಬದಲು 5 ವರ್ಷಕ್ಕೊಮ್ಮೆ ಮಾಡಬೇಕು. ಆರ್‌ಬಿಐನಿಂದ ಅನುಮತಿ ಪಡೆದ ಬ್ಯಾಂಕುಗಳು ಉತ್ತಮ ಬಡ್ಡಿ ಬರುವ ಕಡೆ ಠೇವಣಿ ಇರಿಸಲು ಅವಕಾಶ ಇರಬೇಕು. ಠೇವಣಿಯ ಶೇ.20ರಷ್ಟು ಎಸ್‌ಎಲ್‌ಆರ್ ರೂಪದಲ್ಲಿ ಮೀಸಲಿಡುವುದು ಅನಾವಶ್ಯಕ ಎಂದು ಹೇಳಿದರು.

ಚರ್ಚೆಗೆ ಪ್ರತಿಕ್ರಿಯಿಸಿದ ಸಚಿವ ಎಚ್‌.ಕೆ. ಪಾಟೀಲ್‌,ಪ್ರತಿ ವರ್ಷ ಬದಲು ಎರಡು ವರ್ಷಗಳಿಗೊಮ್ಮೆ ಆಸ್ತಿ ಘೋಷಣೆ ಕುರಿತು ಪರಿಶೀಲಿಸಲಾಗುವುದು ಎಂದು ಹೇಳಿದರು.

ಆದರೆ ಉಳಿದ ಸಲಹೆಗಳಿಗೆ ಸರ್ಕಾರ ಸ್ಪಂದಿಸದಿದ್ದಾಗ ಮತಕ್ಕೆ ಹಾಕುವಂತೆ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸಭಾಪತಿಗಳಿಗೆ ಕೋರಿದರು. ಮತಕ್ಕೆ ಹಾಕಿದಾಗ ವಿರುದ್ಧವಾಗಿ 26, ಪರವಾಗಿ 23 ಸದಸ್ಯರು ಬೆಂಬಲಿಸಿದ ಕಾರಣ ‍ವಿಧೇಯಕ ತಿರಸ್ಕೃತಗೊಂಡಿತು.

ಕೆಳಮನೆಯಲ್ಲಿ 2ನೇ ಬಾರಿ ಮಂಡನೆ

ವಿಧಾನಸಭೆಯಿಂದ ಅಂಗೀಕೃತಗೊಂಡ ಯಾವುದೇ ವಿಧೇಯಕ ಪರಿಷತ್ತಿನಲ್ಲಿ ತಿರಸ್ಕೃತಗೊಂಡಾಗ ಸರ್ಕಾರ ಪುನಃ ಆ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿ ಬಹುಮತದ ಮೂಲಕ ಅಂಗೀಕರಿಸಿದರೆ ಅಂತಹ ವಿಧೇಯಕ ಅಂಗೀಕರಿಸಲ್ಪಟ್ಟಿದೆ ಎಂದು ಪರಿಗಣಿಸಲಾಗುತ್ತದೆ. ಅದೇ ರೀತಿ ಸರ್ಕಾರ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯುವ ಸಾಧ್ಯತೆ ಇದೆ.

PREV
Read more Articles on

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ