ಶ್ರಮಜೀವಿಗಳ ಬೆವರು ಕಸಿಯುವ ಪ್ರಭುತ್ವ ಸೋಲಿಸಿ

KannadaprabhaNewsNetwork | Published : May 2, 2024 12:25 AM

ಸಾರಾಂಶ

ಕಳೆದ‌ 5 ವರ್ಷಗಳಲ್ಲಿ ಜನಸಾಮಾನ್ಯರು ಬಳಸುವ ಆಹಾರ ಧಾನ್ಯಗಳ ದರಗಳು ಶೇ‌. 71ರಷ್ಟು ಏರಿಯಾಗಿದ್ದರೆ ಅವರ ವೇತನ‌ ಮಾತ್ರ ಶೇ‌. 37ರಷ್ಟು ಹೆಚ್ಚಳವಾಗಿದೆ.

ಹುಬ್ಬಳ್ಳಿ:

ಹತ್ತು ವರ್ಷಗಳಿಂದ ಶ್ರಮಜೀವಿಗಳ‌ ಬೆವರು ಕಸಿಯುವ ಪ್ರಭುತ್ವ ಅಸ್ತಿತ್ವದಲ್ಲಿದೆ. ಅದನ್ನು ಸೋಲಿಸುವುದು ಇಂದು ಅನಿವಾರ್ಯವಾಗಿದೆ ಎಂದು ಹಿರಿಯ ಪತ್ರಕರ್ತ ಹಾಗೂ ಸಾಹಿತಿ‌ ಡಾ. ರಂಜಾನ್ ದರ್ಗಾ ಹೇಳಿದರು.ಅವರು ಇಲ್ಲಿನ ಜೆಸಿ ನಗರದಲ್ಲಿರುವ ಅಕ್ಕನಬಳಗದಲ್ಲಿ ಬುಧವಾರ ಕೇಂದ್ರ ಕಾರ್ಮಿಕ ಸಂಘಟನೆಗಳಾದ ಸಿಐಟಿಯು, ಎಐಟಿಯುಸಿ ಹಾಗೂ ಟಿಯುಸಿಸಿ ಸಂಘಟನೆಗಳು ಜಂಟಿಯಾಗಿ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಈ ಭೂಮಿ ನಳನಳಿಸಲು ಹೇಗೆ ನಿತ್ಯ ಸೂರ್ಯನ ಬೆಳಕಿ‌ನ‌ ಕಿರಣಗಳು ಅನಿವಾರ್ಯವೋ ಹಾಗೆ ಈ‌ ಸಮಾಜದ ಚಲನೆ ‌ನಿರಂತವಾಗಿರಬೇಕಾದರೆ ಕಾರ್ಮಿಕ ವರ್ಗದ ಬೆವರು ಅಗತ್ಯವಿದೆ. ಕಾರ್ಮಿಕರು ಕೇವಲ ವ್ಯಕ್ತಿಯಲ್ಲ ಅದೊಂದು ಶಕ್ತಿ. ನಾವು ಈ ಸಂದರ್ಭದಲ್ಲಿ ಮಲಗಿದರೆ ಮತ್ತೆ‌ ಮೇಲೆಳಲು ಸಾಧ್ಯವಿಲ್ಲ ಎಂದರು.

ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ ಮಾತನಾಡಿ, ಕಳೆದ‌ 5 ವರ್ಷಗಳಲ್ಲಿ ಜನಸಾಮಾನ್ಯರು ಬಳಸುವ ಆಹಾರ ಧಾನ್ಯಗಳ ದರಗಳು ಶೇ‌. 71ರಷ್ಟು ಏರಿಯಾಗಿದ್ದರೆ ಅವರ ವೇತನ‌ ಮಾತ್ರ ಶೇ‌. 37ರಷ್ಟು ಹೆಚ್ಚಳವಾಗಿದೆ. ಬಿಜೆಪಿ‌ ನೇತೃತ್ವದ ಸರ್ಕಾರ ಜಾರಿ‌ಮಾಡುತ್ತಿರುವ ಶ್ರೀಮಂತ ಪರವಾದ ನೀತಿಗಳು ಕಾರ್ಮಿಕರ ದೈನಂದಿನ ಬದುಕನ್ನೇ ‌ನಾಶಮಾಡುತ್ತಿವೆ. ಕಾರ್ಮಿಕ ವರ್ಗ ತನ್ನ ಹೋರಾಟಗಳಿಂದ ಗಳಿಸಿದ ಕಾನೂನು ಬದ್ಧ ಹಕ್ಕುಗಳನ್ನು ಕಳೆದುಕೊಳ್ಳುವ ಸ್ಥಿತಿ ಬಂದಿದೆ. ಹೀಗಾಗಿ ಇಂತಹ ನೀತಿಗಳನ್ನು ನಿಯಂತ್ರಣ ಮಾಡುವ ರಾಜಕೀಯವನ್ನು ಸೋಲಿಸುವ ಕರ್ತವ್ಯವನ್ನು ಕಾರ್ಮಿಕ ವರ್ಗ ನಿರ್ವಹಿಸಬೇಕಿದೆ ಎಂದು ಹೇಳಿದರು.

ಸಿಐಟಿಯು ಜಿಲ್ಲಾ ಪ್ರಧಾ‌ನ‌ ಕಾರ್ಯದರ್ಶಿ ಮಹೇಶ ಪತ್ತಾರ, ಅಧ್ಯಕ್ಷತೆ ವಹಿಸಿದ್ದ ಹಿರಿಯ ರೈತ ಮುಖಂಡ ಬಿ.ಎಸ್. ಸೊಪ್ಪಿನ, ಟಿಯುಸಿಸಿ ಜಿಲ್ಲಾ ಅಧ್ಯಕ್ಷ ಅಶೋಕ ಬಾರ್ಕಿ, ಆರ್.ಎಫ್. ಕವಳಿಕಾಯಿ, ಎ.ಎಸ್. ಪೀರಜಾದೆ, ಅಮೃತ ಇಜಾರಿ, ಬತುಲ್ ಕಿಲ್ಲೆದಾರ, ಚಿದಾನಂದ ಸವದತ್ತಿ ಮಾತನಾಡಿದರು.

ಈ ವೇಳೆ ವಿವಿಧ ಸಂಘಟನೆಗಳ ಮುಖಂಡರಾದ ಬಸವಣ್ಣೆಪ್ಪ ನೀರಲಗಿ, ಜಿ.ಎಂ. ವೈದ್ಯ, ಚೆನ್ನಮ್ಮ ಡೊಳ್ಳಿನ, ಬಿ.ಎನ್. ಪೂಜಾರಿ, ಬಿ.ಐ. ಈಳಿಗೇರ, ಹನಮಂತಪ್ಪ ಪವಾಡಿ, ಉದಯ ಗದಗಕರ, ಬಿ.ಎಫ್. ಹರಕೋಣಿ, ವಿನೋದಕುಮಾರ ವೀರಾಪೂರ ಸೇರಿದಂತೆ ಹಲವರಿದ್ದರು. ಇದೇ ವೇಳೆ ಸಮುದಾಯ ಕಲಾತಂಡದಿಂದ "ಜನ ಇನ್ನೂ ಸತ್ತಿಲ್ಲ " ನಾಟಕ ಪ್ರಸ್ತುತ ಪಡಿಸಲಾಯಿತು.

Share this article