ಎರಡು ಬಾರಿ ಕುತಂತ್ರದಿಂದ ಸೋಲು ಅನುಭವಿಸಿದೆ: ನಿಖಿಲ್ ಕುಮಾರಸ್ವಾಮಿ

KannadaprabhaNewsNetwork |  
Published : Nov 15, 2024, 12:32 AM IST
ಪೋಟೋ೧೪ಸಿಪಿಟಿ೨: ನಗರದ ಎನ್‌ಡಿಎ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿಖಿಲ್ ಕುಮಾಸ್ವಾಮಿ ಮಾತನಾಡಿದರು. | Kannada Prabha

ಸಾರಾಂಶ

ಉಪಚುನಾವಣೆ ನನಗೆ ಅಗ್ನಿ ಪರೀಕ್ಷೆ ಅಂತ ಹೇಳಿದ್ದೆ. ನಿನ್ನೆ ಶೇ ೮೮.೮೦% ರಷ್ಟು ಮತದಾನ ಆಗಿದೆ. ಚನ್ನಪಟ್ಟಣ ಇತಿಹಾಸದಲ್ಲಿ ದೊಡ್ಡ ಪ್ರಮಾಣದಲ್ಲಿ ಮತದಾನ ಆಗಿದೆ. ಈ ಚುನಾವಣೆಯಲ್ಲಿ ನನಗೆ ಪೂರಕವಾಗಿ ಜನ ಆಶೀರ್ವಾದ ಮಾಡಿದ್ದಾರೆ. ಹಿರಿಯ ನಾಗರಿಕರು, ಯುವಕರು ಹೆಚ್ಚು ಬೆಂಬಲ ನೀಡಿದ್ದಾರೆ. ಅವರೆಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ನಿಮ್ಮ ಜೊತೆಯಲ್ಲಿ ನಾನು ಶಾಶ್ವತವಾಗಿ ಇರುತ್ತೇನೆ.

ಕನ್ನಡಪ್ರಭವಾರ್ತೆ ಚನ್ನಪಟ್ಟಣ

ಕಳೆದ ಎರಡು ಬಾರಿ ರಾಜಕೀಯ ಕುತಂತ್ರದಿಂದ ಸೋಲು ಅನುಭವಿಸಿದೆ. ಈಗಲೂ ಚುನಾವಣೆ ನಿಲ್ಲುವ ಭಾವನೆ ನನ್ನಲ್ಲಿ ಇರಲಿಲ್ಲ. ಆದರೆ ಕೊನೆ ಕ್ಷಣದಲ್ಲಿ ಆದ ರಾಜಕೀಯ ಪರಿಸ್ಥಿತಿಗೆ ಕಾರ್ಯಕರ್ತರು ಆತಂಕ, ಗೊಂದಲಕ್ಕೆ ಪರಿಹಾರ ಕೊಡಬೇಕಿತ್ತು. ಹಾಗಾಗಿ ಸ್ಪರ್ಧೆ ಅನಿವಾರ್ಯ ಆಯ್ತು ಎಂದು ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ನಗರದ ಎನ್‌ಡಿಎ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಿನ್ನೆ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದೆ. ಇದರಲ್ಲಿ ಚನ್ನಪಟ್ಟಣ ಕ್ಷೇತ್ರ ಬಹಳ ಮಹತ್ವ ಪಡೆದುಕೊಂಡಿತ್ತು. ರಾಜ್ಯ, ರಾಷ್ಟ್ರಮಟ್ಟದಲ್ಲಿ ಚನ್ನಪಟ್ಟಣ ಫಲಿತಾಂಶದ ಬಗ್ಗೆ ಕುತೂಹಲ ಇದೆ ಎಂದರು.

ಈ ಉಪಚುನಾವಣೆ ರಾಜ್ಯದ ಇತಿಹಾಸದ ಪುಟದಲ್ಲಿ ಉಳಿಯುತ್ತೆ. ಈ ಉಪಚುನಾವಣೆ ನಿಖಿಲ್ ಕುಮಾರಸ್ವಾಮಿ ಉಪಚುನಾವಣೆ ಆಗಿರಲಿಲ್ಲ. ಎರಡೂ ಪಕ್ಷದ ಕಾರ್ಯಕರ್ತರ ಚುನಾವಣೆ ಆಗಿತ್ತು. ಚುನಾವಣೆಯಲ್ಲಿ ದಾಖಲೆಯ ಮತದಾನವಾಗಿದೆ. ಇದಕ್ಕೆ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಎರಡು ಬಾರಿ ಕುತಂತ್ರದಿಂದ ಸೋಲು:

ಹದಿನೆಂಟು ದಿನದ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಎದುರಿಸಲು ಯಾರು ಸಮರ್ಥರು ಎಂದು ಬಿಜೆಪಿ- ಜೆಡಿಎಸ್ ವರಿಷ್ಠರು ಚರ್ಚಿಸಿ ನನ್ನ ಹೆಸರು ಸೂಚಿಸಿದರು. ಚುನಾವಣೆಯಲ್ಲಿ ಸ್ಪರ್ಧಿಸುವ ಬಯಕೆ ಇಲ್ಲದಿದ್ದರೂ ಸ್ಪರ್ಧಿಸುವಂತಾಯಿತು. ಆಗ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ನಿವಾಸಕ್ಕೆ ಕರೆದು ನನ್ನ ಹೆಸರು ಘೋಷಣೆ ಮಾಡಿದರು ಎಂದರು.

ಬಿಜೆಪಿ- ಜೆಡಿಎಸ್ ಮೈತ್ರಿ ಶಾಶ್ವತವಾಗಿ ಉಳಿಯಬೇಕು ಎಂಬುದು ಎಲ್ಲರ ಬಯಕೆ. ಅದಕ್ಕೆ ಏನೇ ತೀರ್ಮಾನ ಕೈಗೊಂಡರೂ ಎರಡು ಪಕ್ಷದವರು ಒಟ್ಟಾಗಿ ಕೈಗೊಳ್ಳಬೇಕು ಎಂದು ನಿರ್ಧರಿಸಿದ್ದೇವೆ. ಈ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆಗೆ ಒಂದೆರಡು ದಿನವಿರುವಾಗ ಸಭೆ ನಡೆಸಿದ್ದವು. ಆದರೆ. ಅಷ್ಟರಲ್ಲಿ ಅವರು ಕಾಂಗ್ರೆಸ್ ಸೇರುವ ಕುರಿತು ಮಾಹಿತಿ ಬಂತು. ಆನಂತರ ನಾನು ಅನಿವಾರ್ಯವಾಗಿ ಸ್ಪರ್ಧಿಸುವಂತಾಯಿತು ಎಂದರು.

ನಾನು ಚುನಾವಣೆಗೆ ಸ್ಪರ್ಧಿಸಿದ ನಂತರ ನನ್ನ ಪರವಾಗಿ ಬಿಜೆಪಿ- ಜೆಡಿಎಸ್‌ನ ಸಾಕಷ್ಟು ನಾಯಕರು ಪ್ರಚಾರ ನಡೆಸಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಈ ಇಳಿವಯಸ್ಸಿನಲ್ಲಿಯೂ ಸಹ ಸತತ ಆರು ದಿನಗಳ ಕಾಲ ಪ್ರಚಾರ ನಡೆಸಿದ್ದಾರೆ. ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರು ನಿಂತು ಚುನಾವಣೆ ನಡೆಸಿದ್ದಾರೆ. ಇವರೊಂದಿಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಮಾಗಡಿ ಮಾಜಿ ಶಾಸಕ ಎ.ಮಂಜು, ಪುಟ್ಟರಾಜು, ಅಂದಾನಿ ಸೇರಿದಂತೆ ಸಾಕಷ್ಟು ಜೆಡಿಎಸ್ ನಾಯಕರು ಹಗಲು ಇರುಳು ಶ್ರಮಿಸಿದ್ದಾರೆ.

ಇನ್ನು ಬಿಜೆಯಿಂದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಪಕ್ಷದ ರಾಜ್ಯಾಧ್ಯಕ್ಷ ಬಿ.ವಿ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣ್, ಸಂಸದರಾದ ಯಧುವೀರ್ ಒಡೆಯರ್, ತೇಜಸ್ವಿ ಸೂರ್ಯ, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಸಾಕಷ್ಟು ಪ್ರಮುಖ ನಾಯಕರು ಪ್ರಚಾರ ನಡೆಸಿದ್ದಾರೆ.

ಸೋಮವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾಜೀ ಅವರು ಸ್ಪಷ್ಟ ಸಂದೇಶ ಕೊಟ್ಟಿದ್ರು. ಯುವಕನ ಪರವಾಗಿ ನಡ್ಡಾರವರು ಮಾತನಾಡಿದ್ದಕ್ಕೆ ಧನ್ಯವಾದ ತಿಳಿಸುತ್ತೇನೆ. ಇವರ ಜತೆಗೆ ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಕಳೆದ ೧೮ದಿನಗಳಿಂದ ಸರಿಯಾಗಿ ನಿದ್ರೆ ಮಾಡದೇ ನನ್ನ ಪರ ಪ್ರಚಾರ ನಡೆಸಿದ್ದಾರೆ. ಇವರೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಉಪಚುನಾವಣೆ ನನಗೆ ಅಗ್ನಿ ಪರೀಕ್ಷೆ ಅಂತ ಹೇಳಿದ್ದೆ. ನಿನ್ನೆ ಶೇ ೮೮.೮೦% ರಷ್ಟು ಮತದಾನ ಆಗಿದೆ. ಚನ್ನಪಟ್ಟಣ ಇತಿಹಾಸದಲ್ಲಿ ದೊಡ್ಡ ಪ್ರಮಾಣದಲ್ಲಿ ಮತದಾನ ಆಗಿದೆ. ಈ ಚುನಾವಣೆಯಲ್ಲಿ ನನಗೆ ಪೂರಕವಾಗಿ ಜನ ಆಶೀರ್ವಾದ ಮಾಡಿದ್ದಾರೆ. ಹಿರಿಯ ನಾಗರಿಕರು, ಯುವಕರು ಹೆಚ್ಚು ಬೆಂಬಲ ನೀಡಿದ್ದಾರೆ. ಅವರೆಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ನಿಮ್ಮ ಜೊತೆಯಲ್ಲಿ ನಾನು ಶಾಶ್ವತವಾಗಿ ಇರುತ್ತೇನೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಎ.ಮಂಜುನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ.ಜಯಮುತ್ತು, ಒಕ್ಕಲಿಗರ ಸಂಘದ ನಿರ್ದೇಶಕ ಹಾಪ್‌ಕಾಮ್ಸ ದೇವರಾಜು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಎಲೇಕೇರಿ ರವೀಶ್, ಅಜಯ್, ಸತ್ಯನಾರಾಯಣ್, ರೇಖಾ ಉಮಾಶಂಕರ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ