ಕನ್ನಡಪ್ರಭ ವಾರ್ತೆ ಮದ್ದೂರು
ವಿರೋಧ ಪಕ್ಷದವರಿಗೆ ಹಗರಣಗಳ ಬಗ್ಗೆ ಚರ್ಚಿಸಲು ಅವಕಾಶ ನೀಡದಿರುವುದು ರಾಜ್ಯದ ಜನರಲ್ಲಿ ಅನುಮಾನ ಮೂಡಿಸಿದೆ. ಅವ್ಯವಹಾರಗಳ ಬಗ್ಗೆ ವಿಪಕ್ಷದವರಿಗೆ ಉತ್ತರಿಸಲಾಗದ ಸ್ಥಿತಿಯಲ್ಲಿದ್ದಾರೆ. ಜನರ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಜನಾಂದೋಲನ ನಡೆಸುತ್ತಿದ್ದಾರೆ ಎಂದು ತಾಲೂಕಿನ ಸೋಮನಹಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ವಾಲ್ಮೀಕಿ ನಿಗಮದಲ್ಲಿ ಜನಾಂಗದವರ ಅಭಿವೃದ್ಧಿಗೆ ಮೀಸಲಿಟ್ಟಿದ್ದ ೧೮೭ ಕೋಟಿ ರು. ದುರ್ಬಳಕೆ ಮಾಡಿಕೊಂಡಿರುವ ಆರೋಪವಿದ್ದು, ಅದರಲ್ಲಿ ೮೯ ಕೋಟಿ ರು. ದುರುಪಯೋಗವಾಗಿರುವುದನ್ನು ಸ್ವತಃ ಮುಖ್ಯಮಂತ್ರಿಗಳೇ ವಿಧಾನ ಮಂಡಲದಲ್ಲಿ ಒಪ್ಪಿಕೊಂಡಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿ ಬ್ಯಾಂಕ್ ಮೂಲಕ ಅಕ್ರಮವಾಗಿ ಹಣ ಹರಿದುಹೋಗಿದೆ. ಮುಡಾ ಸೈಟು ಹಂಚಿಕೆಯಲ್ಲಿ ಸಿಎಂ ಕುಟುಂಬದವರು ಭಾಗಿಯಾಗಿದ್ದಾರೆ. ೧೫-೧೬ ತಿಂಗಳಿಂದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿ ರಾಜ್ಯದ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ಹಾಗಾಗಿ ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಆಗ್ರಹಪಡಿಸಿದರು.ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದಿಂದ ಬೇಸತ್ತು ಜನರು ಛೀಮಾರಿ ಹಾಕುತ್ತಿದ್ದಾರೆ. ಸರ್ಕಾರದ ನಡವಳಿಕೆಯಿಂದ ಬೇಸತ್ತು ರಾಜ್ಯದ ಜನರು ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಬೆಂಬಲವಾಗಿ ನಿಂತಿದ್ದಾರೆ. ಇದು ಕಾಂಗ್ರೆಸ್‌ನವರಲ್ಲಿ ತೀವ್ರ ಹತಾಶೆ ಮೂಡಿಸಿದೆ. ಅದಕ್ಕಾಗಿ ವ್ಯಕ್ತಿಗತ ಟೀಕೆಗಿಳಿದಿದ್ದಾರೆ. ಇದು ಯಾರಿಗೂ ಶೋಭೆ ತರುವ ವಿಚಾರವಲ್ಲ ಎಂದರು.
ಅಧಿಕಾರಿಗಳ ಆತ್ಮಹತ್ಯೆ ನಿರಂತರವಾಗಿ ನಡೆಯುತ್ತಿದೆ. ಸಚಿವರ ಹೆಸರನ್ನು ಡೆತ್‌ನೋಟ್‌ನಲ್ಲಿ ಚಂದ್ರಶೇಖರ್ ಉಲ್ಲೇಖಿಸಿದ್ದರೂ ಕೂಡ ಸಿಐಡಿ ದೋಷಾರೋಪಣಾ ಪಟ್ಟಿಯಲ್ಲಿ ಕೈಬಿಡುವ ಮೂಲಕ ಭ್ರಷ್ಟಾಚಾರವನ್ನು ರಕ್ಷಣೆ ಮಾಡಿಕೊಳ್ಳುತ್ತಿದೆ. ಕುಮಾರಸ್ವಾಮಿ ಅವರು ಯಾವ ಭಾಷೆಯಲ್ಲಿ ಎಚ್ಚರಿಕೆ ಕೊಡಬೇಕೋ ಆ ರೀತಿ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಸರ್ಕಾರಕ್ಕೆ ಮಾನ-ಮರ್ಯಾದೆ ಇದ್ದರೆ ಕೂಡಲೇ ರಾಜೀನಾಮೆ ಕೊಡುವಂತೆ ಒತ್ತಾಯಿಸಿದರು.
ಕಾಂಗ್ರೆಸ್‌ನವರದ್ದು ಬ್ರಿಟಿಷ್ ಮನಸ್ಥಿತಿ. ಹಾಗಾಗಿ ಈ ಕಾಂಗ್ರೆಸ್‌ನ್ನು ಜನರೇ ಕಿತ್ತೊಗೆಯುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಾಜೀವ್, ಈ ಹಿಂದೆ ಯಡಿಯೂರಪ್ಪ ವಿರುದ್ಧ ವಿಚಾರಣೆಗೆ ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದಾಗ ಯಾವ ರೀತಿ ಪ್ರತಿಕ್ರಿಯಿಸಿದ್ದರು. ಈಗ ಯಾವ ರೀತಿ ಅವರ ಪ್ರತಿಕ್ರಿಯೆ ಇದೆ ಎಂಬುದಾಗಿ ಹೇಳಿದರು.