ಕಾರವಾರ: ಅಶಾಂತಿ ಹುಟ್ಟಿಸಿ, ಭಾರತದ ಪ್ರಗತಿ ತಡೆಯುವ ಪ್ರಯತ್ನದ ಅಂಗವಾಗಿ ಪಹಲ್ಗಾಮ್‌ನಲ್ಲಿ ನಡೆದ ದಾಳಿಗೆ ಪ್ರತೀಕಾರವಾಗಿ ನಮ್ಮ ರಕ್ಷಣಾ ಪಡೆಗಳು ಒಂದಾಗಿ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ಇಡೀ ವಿಶ್ವಕ್ಕೆ ಭಾರತದ ಶಕ್ತಿ ಏನು ಎನ್ನುವುದನ್ನು ತೋರಿಸಿದೆ ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದರು.
ಭಾರತದ ಪ್ರಗತಿಯನ್ನು ತಡೆಯಲು, ಭಾರತದಲ್ಲಿ ಅಶಾಂತಿ ಹರಡಲು ಮತ್ತು ನಮ್ಮನ್ನು ನೈತಿಕವಾಗಿ ಕೆಳಕ್ಕೆ ಇಳಿಸಲು ಯೋಜಿತ ಉದ್ದೇಶದಿಂದ ಅಹಿತಕರ ಘಟನೆಗಳನ್ನು ನಡೆಸುತ್ತಾರೆ. ಕೆಲವು ಅಂತಹ ಘಟನೆಗಳು ನಮ್ಮ ಮುಂದೆ ನಡೆದಿವೆ. ಈಚೆಗೆ ಪಹಲ್ಗಾಮ್‌ನಲ್ಲಿ ನಡೆದ ದಾಳಿಯೂ ಇಂತಹ ಘಟನೆಯ ಮುಂದುವರಿದ ಭಾಗವಾಗಿದೆ. ಭಾರತೀಯ ಸೇನೆಯು ತನ್ನ ಶಕ್ತಿ, ಭದ್ರತೆ ಮತ್ತು ಕೌಶಲ್ಯಪೂರ್ಣ ಸಂಯೋಜನೆಯನ್ನು ಪ್ರದರ್ಶಿಸಿದೆ. ಇದನ್ನು ನೋಡಿದ ಜನರು ಆಶ್ಚರ್ಯಗೊಂಡಿದ್ದಾರೆ. ಭಾರತವು ಯಾವುದೇ ರೀತಿಯ ಭಯೋತ್ಪಾದಕರನ್ನು ಎದುರಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಪ್ರಪಂಚದ ಯಾವುದೇ ದೇಶದಲ್ಲಿ ಭಾರತದ ನೆಲದ ವಿರುದ್ಧ ಯಾವುದೇ ಪಿತೂರಿ ನಡೆಯುತ್ತಿದ್ದರೆ, ಆ ಪಿತೂರಿಯನ್ನು ಕೊನೆಗೊಳಿಸುವ ಮತ್ತು ಅದನ್ನು ತಡೆಯುವ ಶಕ್ತಿಯನ್ನು ಹೊಂದಿದೆ ಎಂದರು.
ಭಾರತವು ತನ್ನ ವೈಭವದ ಇತಿಹಾಸವನ್ನು ಪುನಃ ಬರೆಯಲಿದೆ. ಪ್ರಧಾನ ಮಂತ್ರಿ ಅವರ ವಿಕಸಿತ ಭಾರತದ ಪರಿಕಲ್ಪನೆಯಲ್ಲಿ ಭಾರತವು ತನ್ನ ವೈಭವದ ಭೂತಕಾಲ ಮತ್ತು ಇತಿಹಾಸದೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಅಭಿವೃದ್ಧಿಯತ್ತ ನಡೆದಿದೆ ಎಂದರು.ಭಾರತವು ಅದ್ಭುತವಾದ ಇತಿಹಾಸ ಹೊಂದಿದೆ. ಸಾವಿರಾರು ವರ್ಷಗಳ ಕಾಲ, ಭಾರತದ ಸಂಪತ್ತು, ಜ್ಞಾನ, ವಿಜ್ಞಾನವು ಅಗಾಧವಾಗಿದೆ. ಜ್ಞಾನ ಮತ್ತು ವಿಜ್ಞಾನದ ದೃಷ್ಟಿಕೋನದಿಂದ ಇಡೀ ಜಗತ್ತಿಗೆ ಆಕರ್ಷಣೀಯ ಕೇಂದ್ರವಾಗಿತ್ತು. ಭಾರತವನ್ನು ತಿಳಿದುಕೊಳ್ಳಲು, ಗುರುತಿಸಲು, ನೋಡಲು, ಭಾರತದಿಂದ ಕಲಿಯಲು ವಿಶ್ವದ ಅನೇಕ ಜನರು ಭಾರತಕ್ಕೆ ಬಂದರು. ಸಾವಿರಾರು ವರ್ಷಗಳ ದಾಳಿಗಳು ಮತ್ತು ಪ್ರಯತ್ನಗಳ ಹೊರತಾಗಿಯೂ ನಮ್ಮ ಶ್ರೇಷ್ಠ ಸಂಸ್ಕೃತಿ ಕೊನೆಗೊಂಡಿಲ್ಲ. ಶಾಶ್ವತವಾಗಿದ್ದ ಆ ಪ್ರಭಾವವನ್ನು ಮುರಿಯಲು, ಆ ಪ್ರಭಾವವನ್ನು ಕೊನೆಗೊಳಿಸಲು ಸಾಧ್ಯವಾಗಲಿಲ್ಲ. ಇದು ನಮ್ಮ ಸಂಸ್ಕೃತಿಯ ಮೇಲೆ ನಾವು ಹೆಮ್ಮೆಪಡುವ ಸಂಗತಿಯಾಗಿದೆ ಎಂದರು.
ಪ್ರಧಾನ ಮಂತ್ರಿ ಆರ್ಥಿಕ ಸಲಹೆಗಾರ ಸಂಜಯ ಸಾನ್ಯಾಲ್, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ವೈಸ್ ಅಡ್ಮಿರಲ್ ರಾಜಾರಾಮ ಸ್ವಾಮಿನಾಥನ್, ರಿಯರ್ ಅಡ್ಮಿರಲ್ ಕೆ.ಎಂ ರಾಮಕೃಷ್ಣನ್, ನಿವೃತ್ತ ಚೀಫ್ ಅಡ್ಮಿರಲ್ ಕರಣಬೀರ್ ಸಿಂಗ್ ಮತ್ತಿತರರು ಇದ್ದರು.