ಸಂಪ್ರದಾಯದಂತೆ ಬೆಟಗೇರಿ ದಂಡಿನ ದುರ್ಗಮ್ಮ ದೇವಿ ಜಾತ್ರೆ

KannadaprabhaNewsNetwork | Published : May 22, 2025 12:48 AM
ಗದಗ ಬೆಟಗೇರಿ ಹೊರವಲಯದಲ್ಲಿರುವ ದಂಡಿನ ದುರ್ಗಮ್ಮ ದೇವಿ ಜಾತ್ರೆ ಸಂಪ್ರದಾಯಂತೆ ಮಂಗಳವಾರ ಸಡಗರ ಸಂಭ್ರಮದಿಂದ ನಡೆಯಿತು. ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ಭಕ್ತರು ವಿವಿಧ ಹರಕೆ ತೀರಿಸಿದರು.
Follow Us

ಗದಗ: ಬೆಟಗೇರಿ ಹೊರವಲಯದಲ್ಲಿರುವ ದಂಡಿನ ದುರ್ಗಮ್ಮ ದೇವಿ ಜಾತ್ರೆ ಸಂಪ್ರದಾಯದಂತೆ ಮಂಗಳವಾರ ಸಡಗರ ಸಂಭ್ರಮದಿಂದ ನಡೆಯಿತು.

ಜಾತ್ರೆಯ ಅಂಗವಾಗಿ ನಾಲ್ಕೈದು ದಿನ ಮೊದಲೇ ಅಕ್ಕಪಕ್ಕದ ರಾಜ್ಯಗಳಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಭಕ್ತರು ದೇವಿಗೆ ದೀಡ್ ನಮಸ್ಕಾರ ಹಾಕಿ ಪೂಜೆ ಸಲ್ಲಿಸಿದರೆ, ಹಲವಾರು ಭಕ್ತರು ದೇವಿಗೆ ಪ್ರಾಣಿ ಬಲಿ ನೀಡಿ ಹರಕೆ ತೀರಿಸಿದರು.

ದೇವಿ ಆಶೀರ್ವಾದಕ್ಕಾಗಿ ಭಕ್ತರು ಜಾತ್ರೆಯಲ್ಲಿ ಹಲವು ಆಚರಣೆ, ಸಂಪ್ರದಾಯಗಳನ್ನು ಪಾಲಿಸುತ್ತಾರೆ. ಮಂಗಳವಾರ ಮಧ್ಯರಾತ್ರಿಯಿಂದಲೇ ಪ್ರಾರಂಭವಾಗುವ ಈ ಜಾತ್ರೆಯಲ್ಲಿ ಬುಧವಾರ ಮಧ್ಯಾಹ್ನದ ವರೆಗೂ ಅಮ್ಮನಿಗೆ ನೈವೇದ್ಯ ಅರ್ಪಣೆ, ಹರಕೆ ತೀರಿಸುವ ವಿಧಾನಗಳು ನಡೆದವು.

ಮಹಾರಾಷ್ಟ್ರ, ಗೋವಾ, ದೆಹಲಿ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ನಮ್ಮ ರಾಜ್ಯದ ವಿವಿಧ ಜಿಲ್ಲೆಗಳ ಹರಿಣ ಶಿಕಾರಿ ಜನಾಂಗದ ಆರಾಧ್ಯ ದೇವತೆ ಈ ದಂಡಿನ ದುರ್ಗಮ್ಮ. ಹಾಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸಾವಿರಾರು ಸಂಖ್ಯೆಯಲ್ಲಿ ಜನರು ತಮ್ಮ ತಮ್ಮ ವಾಹನಗಳಲ್ಲಿ ಆಗಮಿಸಿ ದೇವಸ್ಥಾನ ಸಮೀಪದಲ್ಲಿ ಟೆಂಟ್ ನಿರ್ಮಿಸಿಕೊಂಡು ಅಲ್ಲಿಯೇ ಅಡುಗೆ ತಯಾರಿಸಿ ದೇವಿಗೆ ಅರ್ಪಣೆ ಮಾಡಿ ಆನಂತರ ಜಾತ್ರೆಯಲ್ಲಿ ಪಾಲ್ಗೊಂಡರು. ಹರಿಣ ಶಿಕಾರಿ ಜನಾಂಗದವರೊಂದಿಗೆ ಇತರ ಸಮುದಾಯದ ಭಕ್ತರು ಹೂವು, ಹಣ್ಣು, ತೆಂಗಿನಕಾಯಿಗಳನ್ನು ಅರ್ಪಿಸಿ, ದೇವಿಗೆ ಪೂಜೆ ಸಲ್ಲಿಸಿದರು.

ಎಲ್ಲಿದ್ದರೂ ಇಲ್ಲಿಗೆ ಬರಬೇಕು: ಹರಿಣ ಶಿಕಾರಿ ಸಮುದಾಯದ ಅಧಿದೇವತೆ ಎಂದೇ ಕರೆಯಿಸಿಕೊಳ್ಳುವ ದಂಡಿನ ದುರ್ಗಮ್ಮ ಜಾತ್ರೆ ಹಲವು ವಿಶೇಷತೆಗಳನ್ನು ಹೊಂದಿದೆ. ಈ ಜನಾಂಗದ ಜನತೆ ದೇಶದ ಯಾವುದೇ ಭಾಗದಲ್ಲಿ ನೆಲೆಸಿದ್ದರೂ ಪ್ರತಿವರ್ಷ ಜಾತ್ರೆ ಸಂದರ್ಭದಲ್ಲಿ ದಂಡಿನ ದುರ್ಗಮ್ಮ ದೇ‍ವಸ್ಥಾನಕ್ಕೆ ಆಗಮಿಸಿ ಶಕ್ತಿ ದೇವತೆ ದರ್ಶನ ಪಡೆಯುವುದು ವಾಡಿಕೆ. ಅಲ್ಲದೆ, ತಾವು ಕೈಗೊಳ್ಳುವ ಎಲ್ಲ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲಿ ಎಂದು ಬೇಡಿಕೆ ಹೊತ್ತು, ತಮ್ಮ ಹರಕೆ ತೀರಿಸುವ ಪದ್ಧತಿಯನ್ನು ಈ ಜನಾಂಗದವರು ಹಲವಾರು ತಲೆಮಾರುಗಳಿಂದ ನಡೆಸಿಕೊಂಡು ಬಂದಿದ್ದು, ಈಗಲೂ ಮುಂದುವರಿದಿದೆ.

ಭಕ್ತರನ್ನು ಕಾಡಿದ ಮಳೆ: ಬೆಟಗೇರಿ ಹೊರವಲಯದಲ್ಲಿನ ನಾಗಸಮುದ್ರ ರಸ್ತೆಯಲ್ಲಿರುವ ದಂಡಿನ ದುರ್ಗಮ್ಮ ದೇವಸ್ಥಾನದ ಸುತ್ತಲೂ ಸಾಕಷ್ಟು ರೈತರ ಜಮೀನುಗಳಿವೆ. ಅದೇ ಜಮೀನುಗಳಲ್ಲಿಯೇ ಜಾತ್ರೆಗೆ ಆಗಮಿಸುವ ಸಾವಿರಾರು ಸಂಖ್ಯೆಯ ಭಕ್ತರು ತಾತ್ಕಾಲಿಕ ಟೆಂಟ್ ಹಾಕಿಕೊಂಡು ಜಾತ್ರೆ ಮತ್ತು ಪೂಜೆ, ಹರಕೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಮತ್ತು ಕುಟುಂಬಸ್ಥರೆಲ್ಲಾ ಸೇರಿ ಸಹಭೋಜನ ಮಾಡುವುದು ವಾಡಿಕೆ. ಆದರೆ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದು, ಕಪ್ಪು ಮಣ್ಣಿನ ಹೊಲದಲ್ಲಿ ಕಾಲಿಡಲು ಸಾಧ್ಯವಿಲ್ಲದಂತಾಗಿದೆ. ಎಲ್ಲರೂ ಹೆದ್ದಾರಿಯ ಮೇಲೆ ಕಾಲ ಕಳೆಯುವಂತಾಗಿದೆ. ಇದರಿಂದಾಗಿ ಸಾಕಷ್ಟು ಜನದಟ್ಟಣೆ ಉಂಟಾಗಿತ್ತು.