ನರಸಿಂಹರಾಜಪುರ: ತಾಲೂಕಿನ ಕಡಹಿನಬೈಲು ಗ್ರಾಮದ ಕರುಗುಂದ ಸಮೀಪದ ಮುಖ್ಯ ರಸ್ತೆಯಲ್ಲಿ ಶೆಟ್ಟಿಕೊಪ್ಪ ಭಾಗದಿಂದ ನಸಿಂಹರಾಜಪುರಕ್ಕೆ ಬರುತ್ತಿದ್ದ ಮಾರುತಿ ಓಮಿನಿ ವ್ಯಾನಿನ ಮೇಲೆ ರಸ್ತೆಯ ಪಕ್ಕದ ತೋಟದಿಂದ ಕಡವೆಯೊಂದು ಹಾರಿದ ರಬಸಕ್ಕೆ ಓಮಿನಿ ಬಾಗಿಲು ಜಖಂಗೊಂಡಿದ್ದಲ್ಲದೆ ವ್ಯಾನಿನಲ್ಲಿದ್ದ 4 ಜನರಲ್ಲಿ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾದ ಘಟನೆ ನಡೆದಿದೆ.
ಆ ಸಮಯದಲ್ಲಿ ರಸ್ತೆಯಲ್ಲಿ ಬರುತ್ತಿದ್ದ ಕಡಹಿನಬೈಲು ಗ್ರಾಮ ಪಂಚಾಯಿತಿ ಪಿಡಿಒ ವಿಂದ್ಯಾ, ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಸುದರ್ಶನ್ ಅವರು ಗಮನಿಸಿ ವ್ಯಾನಿನ ಬಾಗಿಲು ತೆಗೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ವ್ಯಾನ್ ಜಖಂ ಆಗಿದ್ದರಿಂದ ಬಾಗಿಲು ತೆಗೆಯಲು ಸಾಧ್ಯವಾಗಲಿಲ್ಲ. ನಂತರ ಸ್ಥಳಕ್ಕೆ ಕಡಹಿನಬೈಲು ಗ್ರಾಪಂ ಅಟೆಂಡರ್ ಜೀವನ್, ವಾಟರ್ ಮ್ಯಾನ್ ಪುಟ್ಟಸ್ವಾಮಿ, ಸದಸ್ಯ ರವೀಂದ್ರ ಹಾಗೂ ಸ್ಥಳೀಯರು ಆಗಮಿಸಿ ವ್ಯಾನಿನ ಬಾಗಿಲು ತೆಗೆದು ಗಾಯವಾಗಿದ್ದ ಇಬ್ಬರನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ.