)
ನವದೆಹಲಿ: ಕರ್ನಾಟಕದ ಗಡಿಯ ಹೊಸೂರಿನಲ್ಲಿ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ತಮಿಳುನಾಡು ಸರ್ಕಾರದ ಪ್ರಸ್ತಾಪವನ್ನು ರಕ್ಷಣಾ ಸಚಿವಾಲಯ ತಿರಸ್ಕರಿಸಿದೆ. ಆ ಪ್ರದೇಶ ಹಿಂದುಸ್ತಾನ್ ಏರೋನಾಟಿಕ್ಸ್ ಲಿ. (ಎಚ್‌ಎಎಲ್) ವ್ಯಾಪ್ತಿಗೆ ಒಳಪಡುವುದರಿಂದ, ಅದರ ಕಾರ್ಯಾಚರಣೆಗೆ ಅಡ್ಡಿಯಾಗಬಹುದು ಎಂಬ ಕಾರಣ ನೀಡಲಾಗಿದೆ. ಈ ಮೊದಲು, ಬೆಂಗಳೂರು ವಿಮಾನ ನಿಲ್ದಾಣದಿಂದ ಅದು 150 ಕಿ.ಮೀ.ಗಿಂತ ಸಮೀಪವಿದೆ ಎಂಬ ಕಾರಣ ನೀಡಿ ಉಡಾನ್ ಪಟ್ಟಿಯಿಂದ ಕೈಬಿಡಲಾಗಿತ್ತು.
ಆದರೆ ರಕ್ಷಣಾ ಸಚಿವಾಲಯದ ತಿರಸ್ಕಾರದ ಹೊರತಾಗಿಯೂ ಸುಮ್ಮನಾಗದ ತಮಿಳುನಾಡು ಸರ್ಕಾರ ಈ ಕುರಿತು ಕೇಂದ್ರದ ಮುಂದೆ ಮೇಲ್ಮನವಿ ಸಲ್ಲಿಸುವ ಅಥವಾ ಏರ್‌ಪೋರ್ಟ್ ನಿರ್ಮಾಣಕ್ಕೆ ಪರ್ಯಾಯ ಸ್ಥಳವನ್ನು ಹುಡುಕುವ ಚಿಂತನೆ ನಡೆಸಿರುವುದಾಗಿ ವರದಿಯಾಗಿದೆ.
2ನೇ ಬಾರಿ ತಿರಸ್ಕಾರ:ಎಚ್‌ಎಎಲ್‌ನ ವಾಯುಪ್ರದೇಶವನ್ನು ಬಳಸಲು ಅನುಮತಿ ಕಲ್ಪಿಸುವಂತೆ ತಮಿಳುನಾಡು ಸರ್ಕಾರ 2025ರ ಜೂನ್‌ನಲ್ಲಿ ಮನವಿ ಮಾಡಿದ್ದು, ಅದನ್ನು ತಿರಸ್ಕರಿಸಲಾಗಿತ್ತು. ಬಳಿಕ ಮತ್ತೆ ನವೆಂಬರ್‌ನಲ್ಲಿ, ಎಚ್‌ಎಎಲ್‌ನ ಕಾರ್ಯಾಚರಣೆಗಳಿಗೆ ಅಡಚಣೆಯಾಗದಂತೆ ಕಾರ್ಯಾಚರಿಸುವ ಭರವಸೆಯೊಂದಿಗೆ ವಿಸ್ತೃತ ಮನವಿ ಸಲ್ಲಿಕೆ ಮಾಡಿತ್ತು. ಅದನ್ನೂ ಈಗ ರಕ್ಷಣಾ ಸಚಿವಾಲಯ ತಿರಸ್ಕಾರ ಮಾಡಿದೆ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ತಮಿಳುನಾಡು ಅಧಿಕಾರಿಗಳು, ‘ಮಾತುಕತೆಗೂ ಅವಕಾಶ ಕೊಡದೆ ಅನುಮತಿ ನಿರಾಕರಿಸಿರುವುದು ನಿರಾಶಾದಾಯಕ’ ಎಂದಿದ್ದಾರೆ.