ಶ್ರೇಷ್ಠ ಗುರುಪರಂಪರೆ ಹೊಂದಿರುವ ದೇಶ ನಮ್ಮದು: ಡಾ.ನಿರ್ಮಲಾನಂದನಾಥ ಸ್ವಾಮೀಜಿ

KannadaprabhaNewsNetwork |  
Published : Jan 19, 2026, 12:30 AM IST
18ಕೆಎಂಎನ್ ಡಿ19 | Kannada Prabha

ಸಾರಾಂಶ

ಮನುಷ್ಯ ಎಷ್ಟೇ ಒಳ್ಳೆಯವರಾಗಿದ್ದರೂ ಕೂಡ ಹಿಂದಿನ ಕೆಟ್ಟ ಕರ್ಮದ ಫಲಗಳು ಸಿಗುತ್ತಿದ್ದರೆ ಬದುಕು ತುಂಬಾ ದುಸ್ಥರವಾಗುತ್ತದೆ. ಅಂತಹ ಹೊತ್ತಿನಲ್ಲಿ ಒಬ್ಬ ಶ್ರೇಷ್ಠ ಗುರು ನಮ್ಮೊಂದಿಗಿದ್ದರೆ ಹಿಂದಿನ ಕೆಟ್ಟ ಕರ್ಮದ ಫಲಗಳನ್ನು ದಾಟಿ ಸನ್ಮಾರ್ಗದಲ್ಲಿ ಹೋಗಿ ಜ್ಞಾನವನ್ನು ಪಡೆಯಲು ಅವಕಾಶವಾಗುತ್ತದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಅಂತರಂಗದಲ್ಲಿರುವ ಅಜ್ಞಾನ ಕಳೆದು ಜ್ಞಾನವನ್ನು ಪಡೆದುಕೊಳ್ಳಲು ಮತ್ತು ಹುಟ್ಟಿದ ಮನುಷ್ಯನಿಗೆ ಮುಕ್ತಿಯ ದಾರಿ ತೋರಿಸಲು ನಮಗೆ ಗುರುಗಳು ಬೇಕು. ಅಂತಹ ಗುರುವನ್ನು ಪಡೆದಿರುವ ನಾವು ಭಾಗ್ಯಶಾಲಿಗಳು ಎಂದು ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನಮಠದ ಬಿಜಿಎಸ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳ 81ನೇ ಜಯಂತ್ಯುತ್ಸವ, 13 ನೇ ವರ್ಷದ ಸಂಸ್ಮರಣಾ ಮಹೋತ್ಸವ ಮತ್ತು ಸಂತ ಭಕ್ತಸಂಗಮ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.

ಮನುಷ್ಯ ಎಷ್ಟೇ ಒಳ್ಳೆಯವರಾಗಿದ್ದರೂ ಕೂಡ ಹಿಂದಿನ ಕೆಟ್ಟ ಕರ್ಮದ ಫಲಗಳು ಸಿಗುತ್ತಿದ್ದರೆ ಬದುಕು ತುಂಬಾ ದುಸ್ಥರವಾಗುತ್ತದೆ. ಅಂತಹ ಹೊತ್ತಿನಲ್ಲಿ ಒಬ್ಬ ಶ್ರೇಷ್ಠ ಗುರು ನಮ್ಮೊಂದಿಗಿದ್ದರೆ ಹಿಂದಿನ ಕೆಟ್ಟ ಕರ್ಮದ ಫಲಗಳನ್ನು ದಾಟಿ ಸನ್ಮಾರ್ಗದಲ್ಲಿ ಹೋಗಿ ಜ್ಞಾನವನ್ನು ಪಡೆಯಲು ಅವಕಾಶವಾಗುತ್ತದೆ ಎಂದರು.

ಶ್ರೇಷ್ಠ ಗುರುಪರಂಪರೆ ಹೊಂದಿರುವ ದೇಶ ನಮ್ಮದು. ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳು ಮನುಷ್ಯ ರೂಪದಲ್ಲಿ ಅವತರಿಸಿ ಬಂದು ಇಡೀ ಸಮಾಜವನ್ನು ಉದ್ಧರಿಸಿದ್ದಾರೆ. ಇಂತಹ ಶ್ರೇಷ್ಠ ಗುರುಗಳನ್ನು ಪಡೆದಿರುವ ನಾವೆಲ್ಲರೂ ಅರಿವಿನ ಮಹಾಮನೆಯತ್ತ ಮುನ್ನಡೆಯಬೇಕಿದೆ ಎಂದರು.

ಚಿತ್ರದುರ್ಗದ ಮಾದಾರಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರಚನ್ನಯ್ಯ ಶ್ರೀಗಳು ಮಾತನಾಡಿ, ರಾಷ್ಟ್ರ ಕಟ್ಟುವ ಜೊತೆಗೆ ಧರ್ಮವನ್ನೂ ಕಟ್ಟಿ ಸಂವಿಧಾನದ ಆಶಯ ಈಡೇರಿಸುವ ನಿಟ್ಟಿನಲ್ಲಿ ಸಮಾಜದ ಒಳಿತಿಗಾಗಿ ದುಡಿದು ಹೋಗಿರುವ ಭೈರವೈಕ್ಯ ಶ್ರೀಗಳ ಜೀವನ ಪರೋಪಕಾರಾರ್ಥವಾಗಿತ್ತು. ಅವರು ಮಾಡಿರುವ ಸಮಾಜಮುಖಿ ಕಾರ್ಯ, ಕೊಟ್ಟಿರುವ ಸಂದೇಶವನ್ನು ಪಾಲಿಸುತ್ತಿರುವ ಸಾವಿರಾರು ಜನರು ತಮ್ಮ ಜೀವನವನ್ನು ಬಂಗಾರ ಮಾಡಿಕೊಂಡಿದ್ದಾರೆ ಎಂದರು.

ಭೈರವೈಕ್ಯ ಶ್ರೀಗಳ ಜೀವನವನ್ನು ನಾವು ಒಳಹೊಕ್ಕಿ ನೋಡಿದರೆ ಅವರು ಎಷ್ಟು ಅನುಭವಿ, ತತ್ವಜ್ಞಾನಿಗಳಾದ್ದರು ಎಂಬುದನ್ನು ತಿಳಿಯಬಹುದು. ಅಂತಹ ಮಹಾನ್ ಜ್ಞಾನಿಯ ದಿವ್ಯ ಸಂದೇಶ ಅವರು ಕೊಟ್ಟಿರುವ ಶಿಕ್ಷಣ, ಅವರು ನಡೆದಿರುವ ಮಾರ್ಗವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ಭೈರವೈಕ್ಯ ಶ್ರೀಗಳು ನಾಡಿನ ಎಲ್ಲ ವರ್ಗದ ಜನರಿಗೆ ಶಕ್ತಿ ತುಂಬುವ ಜೊತೆಗೆ ಅನ್ನ ಅಕ್ಷರ ಆರೋಗ್ಯ ಸೇವೆ ಒದಗಿಸುವ ಜೊತೆಗೆ ಅನೇಕ ಸಮಸ್ಯೆ ಸವಾಲುಗಳ ನಡುವೆ ಶ್ರೀಮಠವನ್ನು ಇಷ್ಟು ಎತ್ತರಕ್ಕೆ ಬೆಳೆಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಭೈರವೈಕ್ಯ ಶ್ರೀಗಳು ಮಾಡಿರುವ ಸತ್ಕಾರ್ಯಗಳು ವಿಶ್ವಮಟ್ಟದಲ್ಲಿ ಬೆಳಗುತ್ತಿವೆ. ಶ್ರೀಗಳ ಕನಸನ್ನು ನನಸು ಮಾಡುತ್ತಿರುವ ನಿರ್ಮಲಾನಂದನಾಥ ಶ್ರೀಗಳು ಮಹಾಗುರುವಿಗೆ ಪ್ರಬುದ್ಧ ಶಿಷ್ಯರು ಎಂಬುದನ್ನು ಸಾಬೀತುಪಡಿಸಿದ್ದಾರೆ. ಇವರಿಂದ ಸಮಾಜೋದ್ಧಾರದ ಕಾರ್ಯಗಳು ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.

ಶ್ರೀಮಠದ ಪ್ರಧಾನಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಅವರು ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು. ಮಾಗಡಿ ಶಾಸಕ ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಡಾ.ಕೆ.ಗೋವಿಂದರಾಜು ಮಾತನಾಡಿದರು.

ವಿಶೇಷ ಪೂಜೆ:

ಭೈರವೈಕ್ಯ ಶ್ರೀಗಳ ಜಯಂತ್ಯುತ್ಸವ ಮತ್ತು ಸಂಸ್ಮರಣಾ ಮಹೋತ್ಸವದ ಪ್ರಯುಕ್ತ ಶ್ರೀಕ್ಷೇತ್ರದ ಭೈರವೈಕ್ಯ ಡಾ. ಬಾಲಗಂಗಾಧರನಾಥ ಶ್ರೀಗಳ ಮಹಾಗದ್ದುಗೆ ಮತ್ತು ಪುತ್ಥಳಿಯನ್ನು ವಿವಿಧ ಬಗೆಯ ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.

ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಚಿತ್ರದುರ್ಗದ ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಕುಂಬಳಗೂಡು ಶಾಖಾಮಠದ ಪ್ರಕಾಶನಾಥಸ್ವಾಮೀಜಿ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಎಚ್.ನಿಂಗಪ್ಪ, ಮಾಹಿತಿ ಹಕ್ಕು ಆಯೋಗದ ಆಯುಕ್ತ ರಾಜಶೇಖರ್, ಜಿಲ್ಲಾಧಿಕಾರಿ ಡಾ.ಕುಮಾರ, ಹಿರಿಯ ಪತ್ರಕರ್ತ ಸುದರ್ಶನ್ ಚನ್ನಂಗಿಹಳ್ಳಿ, ಶಂಭೂನಾಥಸ್ವಾಮೀಜಿ, ಸೋಮನಾಥಸ್ವಾಮೀಜಿ, ಚೈತನ್ಯನಾಥಸ್ವಾಮೀಜಿ, ಸಾಯಿಕೀರ್ತಿನಾಥಸ್ವಾಮೀಜಿ, ಸತ್ಕೀರ್ತಿನಾಥಸ್ವಾಮೀಜಿ, ಆದಿಚುಂಚನಗಿರಿ ಆಸ್ಪತ್ರೆಯ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಮು, ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು ಸೇರಿದಂತೆ ಸಹಸ್ರಾರು ಭಕ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜಮುಖಿ ಸೇವೆ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಿ: ಮೋಹನ್ ದಾಸ್
ಬಿಜಿಎಸ್ ಶಾಲೆಯಲ್ಲಿ ಶ್ರೀಬಾಲಗಂಗಾಧರನಾಥ ಸ್ವಾಮೀಜಿಗಳ ರಥೋತ್ಸವ