ಧಾರವಾಡ: ಅರಣ್ಯಗಳನ್ನು ಭೂಮಂಡಲದ ಶ್ವಾಸಕೋಶಗಳೆಂದು ಕರೆಯುತ್ತಾರೆ. ಅರಣ್ಯ ನಾಶದಿಂದ ಮಾನವನ ಬದುಕು ಖಂಡಿತ ವಿನಾಶವಾಗುತ್ತದೆ. ಅರಣ್ಯ ನಾಶ ನಮ್ಮ ನಾಗರಿಕತೆಯ ವಿನಾಶವೂ ಹೌದು ಎಂದು ಮೊರಬದ ಸರಕಾರಿ ಪಪೂ ಮಹಾವಿದ್ಯಾಲಯದ ಪ್ರಾಚಾರ್ಯ ಸೈಯದ್ ಫಯಾಜ್ ಅಹ್ಮದ್ ಅಭಿಪ್ರಾಯಪಟ್ಟರು.
ಅಭಿವೃದ್ಧಿ ಹಾಗೂ ನಗರೀಕರಣದ ನೆಪದಲ್ಲಿ ಬೇಕಾಬಿಟ್ಟಿಯಾಗಿ ಅರಣ್ಯ ನಾಶ ಮಾಡುತ್ತಿರುವುದು ಸಲ್ಲದು. ಅರಣ್ಯಗಳು ನಮಗೆ ಅನೇಕ ರೀತಿಯಿಂದ ಮಹದುಪಕಾರ ಮಾಡಿವೆ. ದೇಶದ ಅಭಿವೃದ್ಧಿಯಲ್ಲಿ ಅರಣ್ಯಗಳ ಪಾತ್ರದೊಡ್ಡದು. ಪರಿಸರದ ಸಮತೋಲನೆಗೆ ಭೂಮಿಯ ಮೇಲೆ ಕನಿಷ್ಠ ಶೇ. 30ರಷ್ಟಾದರೂ ಅರಣ್ಯವಿರಬೇಕು. ಆದರೆ, ಇಂದು ಕರ್ನಾಟಕದಲ್ಲಿ ಶೇ. 20 ಮಾತ್ರ ಅರಣ್ಯವಿದೆ. ಕಾಡು ಎಲ್ಲಿದೆಯೋ ಅಲ್ಲಿ ನಮ್ಮ ಜೀವನವಿದೆ. ನಾಗರಿಕತೆ ಇದೆ. ಕಾಡಿದ್ದರೇ ನಾಡು ಎಂಬುದನ್ನು ನಾವು ಪ್ರಜ್ಞಾಪೂರ್ವಕವಾಗಿ ಅರಿಯಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಕ.ವಿ.ವ. ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡೀನ ಮಾತನಾಡಿ, ಕಾಡು ನಾಶದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಪರಿಸರ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯವರಿಗೆ ಮಾತ್ರ ಸಿಮಿತವಲ್ಲ. ಅದು ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ವಿವೇಚನೆ ಇಲ್ಲದೆ ಗಿಡ ಮರಗಳನ್ನು ನಾಶ ಮಾಡುವುದರಿಂದ ಪರಿಸರದಲ್ಲಿ ಅಸಮತೊಲನ ಉಂಟಾಗುತ್ತದೆ. ನಮಗೆಲ್ಲ ಇರುವುದೊಂದೆ ಭೂಮಿ. ಅದನ್ನು ನಾವೇಲ್ಲರೂ ಪ್ರಜ್ಞಾಪೂರ್ವಕವಾಗಿ ಹಸನಾಗಿಸೋಣ ಎಂದು ಹೇಳಿದರು.ಪತ್ರಕರ್ತ ಸಿ.ವೈ. ಲಗಮಣ್ಣವರ ಮಾತನಾಡಿ, ಹಸಿರೇ ಉಸಿರು ಎಂಬ ನಿತ್ಯ ಸತ್ಯವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ಪರಿಸರದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಕ.ವಿ.ವ, ಸಂಘದ ಶಿಕ್ಷಣ ಮಂಟಪ ವಿದ್ಯಾರ್ಥಿಗಳೆಡೆಗೆ ಹೋಗಿ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.
ಪ್ರೌಢ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಹನಮಂತಪ್ಪ ತಳವಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ನಗದು ಪುಸ್ಕಾರ ನೀಡಿ ಗೌರವಿಸಲಾಯಿತು. ರೇಣುಕಾ ಗರಗ ಸ್ವಾಗತಿಸಿದರು. ಐ.ಜಿ. ಉಮದೇಸಿ ನಿರ್ವಹಿಸಿದರು. ಶಿಕ್ಷಕಿ ಟಿ.ಎನ್. ಸೈಯದ್ ವಂದಿಸಿದರು. ಶಿಕ್ಷಕರಾದ ಲಕ್ಷ್ಮೀ ರಾಠೋಡ, ಎಸ್.ಎನ್. ಹಡಪದ, ವಿಜಯಾಗೌಡ ನಾಯಕ್, ಎಸ್.ಎಸ್. ಸವಾಯಿ, ಸಂತೋಷಕ ಕಣವೇಲಿ ಸೇರಿದಂತೆ ಶಾಲೆಯ ಸಿಬ್ಬಂದಿ ವಿದ್ಯಾರ್ಥಿಗಳು ಮತ್ತಿತರರು ಭಾಗವಹಿಸಿದ್ದರು.