ಧಾರವಾಡ: ಪ್ರತ್ಯೇಕ ಮಹಾನಗರ ಪಾಲಿಕೆಯ ಚೆಂಡು ಇದೀಗ ರಾಜ್ಯ ಸರ್ಕಾರದ ಅಂಗಳದಲ್ಲಿದ್ದು, ಸೋಮವಾರ ಅವರನ್ನು ಭೇಟಿ ಆದ ಪ್ರತ್ಯೇಕ ಪಾಲಿಕೆ ಹೋರಾಟಗಾರರಿಗೆ ಮುಖ್ಯಮಂತ್ರಿಗಳಿಂದ ಸ್ಪಂದನೆ ದೊರೆತಿದೆ.
ಬೆಂಗಳೂರಿನ ಸಿಎಂ ಅಧಿಕೃತ ನಿವಾಸದಲ್ಲಿ ಸೋಮವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಬಿ.ಡಿ. ಹಿರೇಮಠ ನೇತೃತ್ವದಲ್ಲಿ ಸತ್ಯ ಪ್ರತಿಪಾದನೆ ಸತ್ಯಾಗ್ರಹಿಗಳು ಪ್ರತ್ಯೇಕ ಪಾಲಿಕೆ ಏಕೆ ಬೇಕು ಎಂದು ವಿವರಿಸಿದರು. ಮಹಾನಗರ ಪಾಲಿಕೆ ಬೇಡಿಕೆ ಮತ್ತು ಹೋರಾಟದ ತೀವ್ರತೆ ಕುರಿತು ಮನವರಿಕೆ ಮಾಡಿಕೊಟ್ಟರು. ರಾಜ್ಯಪಾಲರು ಒಪ್ಪಿಗೆ ಮುದ್ರೆ ಹಾಕಿರುವುದು ಹಾಗೂ ಸರಕಾರ ರಾಜ್ಯಪಾಲರ ಷರತ್ತುಗಳನ್ನು ಕಾನೂನಬದ್ಧವಾಗಿ ಬಗೆಹರಿಸುವ ಕುರಿತು ಮಾತುಕತೆ ನಡೆಸಿದರು. ಆಗ ಹೋರಾಟಗಾರರ ಅಹವಾಲು ಸ್ವೀಕರಿಸಿದ ಮುಖ್ಯಮಂತ್ರಿಗಳು ಪ್ರತ್ಯೇಕ ಪಾಲಿಕೆ ರಚನೆಗೆ ಬದ್ಧರಿರುವುದಾಗಿ ಹೇಳಿದರು ಎಂದು ನಿಯೋಗದಲ್ಲಿದ್ದ ಮುಖಂಡರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.
ಧಾರವಾಡ ಜನರ ದಶಕಗಳ ಬೇಡಿಕೆ ಇದು. ಹೀಗಾಗಿ, ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿ ಅಂತಿಮ ಅಧಿಸೂಚನೆಯನ್ನು ಕೂಡಲೇ ಹೊರಡಿಸಬೇಕು. ಈ ಮೂಲಕ ನಿರಂತರವಾಗಿ ಹೋರಾಟ ಮಾಡುತ್ತಿರುವವರಿಗೆ ಸಕಾರಾತ್ಮಕ ಸಂದೇಶ ನೀಡಬೇಕು. ಹೊಸ ಪಾಲಿಕೆಗೆ ಅಗತ್ಯವಿರುವ ಕಚೇರಿ, ಸಿಬ್ಬಂದಿ ಹಾಗೂ ಆಡಳಿತಾತ್ಮಕ ರಚನೆಗೆ ಬೇಕಾದ ತಾಂತ್ರಿಕ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಹೋರಾಟಗಾರರು ಒತ್ತಾಯಿಸುವ ಜತೆಗೆ ಮನವಿ ಕೂಡ ಸಲ್ಲಿಸಿದರು.ಮನವಿಯನ್ನು ಸುಧೀರ್ಘವಾಗಿ ಆಲಿಸಿದ ಸಿಎಂ ಮಹಾನಗರ ಪಾಲಿಕೆ ಸದಸ್ಯರ ಅಧಿಕಾರ ಅವಧಿ ಮುಗಿದ ನಂತರ 2027ರ ಮಾರ್ಚ್ ಜನಗಣತಿ ಪ್ರಕಾರ ಜಾರಿಗೆ ಬರುವಂತೆ ಕ್ರಮ ವಹಿಸಲು ಟಿಪ್ಪಣಿ ಬರೆದು ಸ್ಪಂದಿಸಿದ್ದಾರೆ.
ಧಾರವಾಡ ಪ್ರತ್ಯೇಕ ಪಾಲಿಕೆ ಕುರಿತಂತೆ ಅಂತಿಮ ಅಧಿಸೂಚನೆಗೆ ಸಿಎಂ ಅವರನ್ನು ಕೋರಲಾಗಿದೆ. ಅವರಿಗೆ ಎಲ್ಲ ಬೆಳವಣಿಗೆಗಳನ್ನು ವಿವರಿಸಲಾಗಿದೆ. ಬೇಡಿಕೆ ಈಡೇರಿಕೆಗೆ ಜುಲೈ 9ರ ಗಡುವು ನೀಡಿದ್ದರಿಂದ ಆದಷ್ಟು ಬೇಗನೇ ಇದಕ್ಕೆ ಅವರು ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್ ಮೇಲೆ ಇದು ತೂಗುಗತ್ತಿ ಇದ್ದಂತೆ. ಇಲ್ಲದಿದ್ದರೆ ಕೊಟ್ಟ ಮಾತಿಗೆ ತಪ್ಪಿ ನಡೆದಂತಾಗಲಿದೆ. ಸರಕಾರ ನಿಷ್ಕಾಳಜಿ ತೋರಬಾರದು ಎಂದು ಹೋರಾಟಗಾರ ಗುರುರಾಜ ಹುಣಸಿಮರದ ಹೇಳಿದ್ದಾರೆ.