- ಕಾರ್ಯಕರ್ತರು, ಅಭಿಮಾನಿಗಳ ಆಕ್ರೋಶ । ಗೊಲ್ಲರಹಳ್ಳಿ ಬಳಿ ರಸ್ತೆ ತಡೆದು ಪ್ರತಿಭಟನೆ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಹಿರಿಯ ಶಾಸಕ ಡಿ.ಜಿ.ಶಾಂತನಗೌಡ ಅವರಿಗೆ ಸಚಿವ ಸ್ಥಾನ ನೀಡದಿರುವುದಕ್ಕೆ ಮಂಗಳವಾರ ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಅಭಿಮಾನಿ ಬಳಗ ಹರಿಹರ- ಹೊನ್ನಾಳಿ ಹೆದ್ದಾರಿಯ ಗೊಲ್ಲರಹಳ್ಳಿಯಲ್ಲಿ ರಸ್ತೆ ತಡೆದು ಟೈರ್‌ಗೆ ಬೆಂಕಿಹಚ್ಚಿ ಕೆಲಹೊತ್ತು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ರಸ್ತೆ ತಡೆಗೂ ಮೊದಲು ಶಾಸಕ ಡಿ.ಜಿ.ಶಾಂತನಗೌಡ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಗೊಲ್ಲರಹಳ್ಳಿಯ ಶಂಕರ್ ರೈಸ್ ಮಿಲ್‌ನಲ್ಲಿ ಸಮಾಲೋಚನಾ ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಪ್ರಮುಖರು, ದಾವಣಗೆರೆ ಜಿಲ್ಲೆಗೆ 2 ಸಚಿವ ಸ್ಥಾನ ನೀಡಿರುವುದಕ್ಕೆ ನಮಗೆ ವಿರೋಧ ಇಲ್ಲ. ಈ ಕ್ರಮ ಸ್ವಾಗತಿಸುತ್ತೇವೆ. ಆದರೆ ಶಾಸಕ ಡಿ.ಜಿ.ಶಾಂತನಗೌಡ 3 ಬಾರಿ ಶಾಸಕರಾಗಿದ್ದು, ಪಕ್ಷದಲ್ಲಿ ಹಿರಿಯರಾಗಿದ್ದಾರೆ. ಅವರ ತಂದೆ, ಅಣ್ಣನ ಕಾಲದಿಂದಲ್ಲೂ ರಾಜಕಾರಣ ಮಾಡುತ್ತಿದ್ದಾರೆ. 3 ಬಾರಿ ಶಾಸಕರಾಗಿದ್ದರೂ ಅವರಿಗೆ ಈವರೆವಿಗೂ ಒಮ್ಮೆಯೂ ಸಚಿವ ಸ್ಥಾನ ನೀಡದಿರುವ ಬಗ್ಗೆ ನಮಗೆ ಬೇಸರ ತಂದಿದೆ ಎಂದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲದಲ್ಲಿ 2 ಬಾರಿ ಸಚಿವ ಸಂಪುಟ ವಿಸ್ತರಣೆಯಾಗಿದೆ. ಆದರೂ, ಹೊನ್ನಾಳಿಯ ನಮ್ಮ ಶಾಸಕರಿಗೆ ಸಚಿವ ಸ್ಥಾನ ನೀಡಲಿಲ್ಲ. ಲೋಕಸಭಾ ಚುನಾವಣೆ ಪ್ರಚಾರದ ಸಂದರ್ಭ ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿಗಳು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬನ್ನಿ. ನಿಮಗೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಅವರೇ ನೀಡಿದ್ದ ಭರವಸೆ ಈಡೇರಿಸಲಿಲ್ಲ ಎಂದು ಕಿಡಿಕಾರಿದರು.
ಈಗ ಸಚಿವ ಸ್ಥಾನದ ಕತೆ ಮುಗಿದಿದೆ. ಸರ್ಕಾರ ಈಗಲಾದರೂ ಶಾಸಕ ಡಿ.ಜಿ.ಶಾಂತನಗೌಡ ಅವರಿಗೆ ಸಚಿವ ಸಂಪುಟ ಸ್ಥಾನಮಾನದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನಾದರೂ ನೀಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದರು.
ಗ್ಯಾರಂಟಿ ಯೋಜನೆಗಳ ಅವಳಿ ತಾಲೂಕುಗಳ ಅಧ್ಯಕ್ಷರಾದ ಗದ್ದಿಗೇಶ್, ಶಿವರಾಂ ನಾಯ್ಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಣ್ಣಕ್ಕಿ ಬಸವನಗೌಡ, ಆರ್.ನಾಗಪ್ಪ, ಗ್ಯಾರಂಟಿ ಯೋಜನೆಯ ಸದಸ್ಯ ಚೇತನ್, ಸೋಗಿಲು ಮಲ್ಲೇಶ್, ಮಾಸಡಿ ಗಜೇಂದ್ರಪ್ಪ, ಕೋಡಿಕೊಪ್ಪ ಶಿವಪ್ಪ, ಬೆನಕನಹಳ್ಳಿ ಗಣೇಶ್ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.- - -
(ಬಾಕ್ಸ್) * ಶಾಸಕರ ಮನವಿ: ಪ್ರತಿಭಟನೆ ಸ್ಥಗಿತಕ್ಷೇತ್ರ ಪ್ರವಾಸಕ್ಕೆ ತೆರಳುವ ಮೊದಲು ಶಾಸಕ ಶಾಂತನಗೌಡ ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದರು. ನಮ್ಮದು ಕಾಂಗ್ರೆಸ್ ಪಕ್ಷ. ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡುತ್ತದೆ. ಸಾಮಾಜಿಕ ನ್ಯಾಯದಡಿ ಎಲ್ಲರಿಗೂ ಸಚಿವ ಸ್ಥಾನ ಸಿಕ್ಕಿದೆ. ಮುಖ್ಯಮಂತ್ರಿಗಳು ನಮ್ಮ ಕೈ ಬಿಡುವುದಿಲ್ಲ, ಸೂಕ್ತ ಸ್ಥಾನಮಾನ ನೀಡೇ ನೀಡುತ್ತಾರೆ. ಈಗ ಸಮಾಧಾನದಿಂದ ಇರಬೇಕು ಎಂದು ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಮನವಿ ಮಾಡಿದರು. ಬಳಿಕ ಪ್ರತಿಭಟನೆ ಸ್ಥಗಿತಗೊಂಡಿತು.
- - --4ಎಚ್.ಎಲ್.ಐ1: ಶಾಸಕ ಡಿ.ಜಿ.ಶಾಂತನಗೌಡ ಅವರಿಗೆ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹೊನ್ನಾಳಿ ತಾಲೂಕಿನ ಗೊಲ್ಲರಹಳ್ಳಿ ಬಳಿ ಹೆದ್ದಾರಿ ತಡೆ ನಡೆಸಿ, ಟೈರ್‌ಗೆ ಬೆಂಕಿ ಹಾಕಿ ಪ್ರತಿಭಟಿಸಿದರು.