- ಬೇಡಿಕೆ ಶೀಘ್ರ ಈಡೇರಿಸಿ: ಜಿಲ್ಲಾಧ್ಯಕ್ಷ । ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಸಂಸ್ಥೆಗಳ ನೌಕರರ ಪರ ಎಐಯುಟಿಯುಸಿ ಮನವಿ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯದ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಪರಿಷ್ಕೃತ ಕನಿಷ್ಠ ವೇತನ ಜಾರಿಗೊಳಿಸಲು ಒತ್ತಾಯಿಸಿ ಎಐಯುಟಿಯುಸಿ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.ನಗರದ ಶ್ರೀ ಜಯದೇವ ವೃತ್ತದಲ್ಲಿ ಸಂಘಟನೆ ಜಿಲ್ಲಾ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಖಾಸಗಿ ಸಂಸ್ಥೆಗಳ ಹೊರಗುತ್ತಿಗೆ ನೌಕರರು ತಮ್ಮ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಘೋಷಣೆ ಕೂಗಿದರು. ಅಲ್ಲದೇ, ಉಪ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರ ಮುಖಾಂತರ ಮುಖ್ಯಮಂತ್ರಿಗೆ ಮನವಿ ಅರ್ಪಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಮಂಜುನಾಥ ಕೈದಾಳೆ ಮಾತನಾಡಿ, ಸರ್ಕಾರವು 22.5.2025ರ ಕನಿಷ್ಠ ವೇತನ ಅಂತಿಮ ಅಧಿಸೂಚನೆಯನ್ನು ಅಮಾನತ್ತಿನಲ್ಲಿ (ತಡೆ ಹಿಡಿಯುವ) ಇಡುವ ಯಾವುದೇ ಪ್ರಸ್ತಾವನೆ ತಕ್ಷಣ ತಿರಸ್ಕರಿಸಿ, ಪರಿಷ್ಕೃತ ಕನಿಷ್ಠ ವೇತನವನ್ನು ರಾಜ್ಯದ ಎಲ್ಲ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ತಕ್ಷಣ ಜಾರಿಗೊಳಿಸಬೇಕು. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳು, ಪರಿಶಿಷ್ಟ ವರ್ಗಗಳು, ಅಲ್ಪಸಂಖ್ಯಾತರ ಕಲ್ಯಾಣ, ಹಾಸ್ಟೆಲ್, ಶಿಕ್ಷಣ, ಆರೋಗ್ಯ, ನಗರ ಸ್ಥಳೀಯ ಸಂಸ್ಥೆ, ವಿವಿಧ ಖಾಸಗಿ ಕಂಪನಿ, ಪವನ ವಿದ್ಯುತ್ ಕಂಪನಿ, ಸೌರ ವಿದ್ಯುತ್ ಕಂಪನಿ, ಇತರೆ ಸಂಸ್ಥೆಗಳ ಹೊರ ಗುತ್ತಿಗೆ ಕಾರ್ಮಿಕರಿಗೆ ನೆಮ್ಮದಿಯ ಬದುಕನ್ನು ಕಟ್ಟಿಕೊಡಬೇಕು ಎಂದರು.
ರಾಜ್ಯ ಸರ್ಕಾರ 22.5.2026ರಂದು ಕನಿಷ್ಠ ವೇತನದ ಅಂತಿಮ ಅಧಿಸೂಚನೆ ಪ್ರಕಟಿಸಿದೆ. ಆದರೆ, ಹಣಕಾಸು ಇಲಾಖೆಯು ಅದನ್ನು ಅಮಾನತಿನಲ್ಲಿಡುವ ಪ್ರಸ್ತಾವನೆ ಮುಂದಿಟ್ಟಿರುವುದು ಕಾರ್ಮಿಕ ವಿರೋಧಿ, ಕಾನೂನುಬಾಹಿರ, ಸಂವಿಧಾನ ವಿರೋಧಿ ಹಾಗೂ ಆಡಳಿತಾತ್ಮಕವಾಗಿ ಅಸಂಗತ ಕ್ರಮವಾಗಿದೆ. ಹೈಕೋರ್ಟ್ ತಡೆಯಾಜ್ಞೆ ನೀಡದ ವಿಷಯವನ್ನು ಆಡಳಿತಾತ್ಮಕವಾಗಿ ತಡೆ ಹಿಡಿಯಲು ಸಾಧ್ಯವಿಲ್ಲ. ಮಾಲೀಕರ ಸಂಘಗಳು ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಕೋರಿದ್ದರೂ ನ್ಯಾಯಾಲಯ ತಡೆ ನೀಡಲು ನಿರಾಕರಿಸಿದೆ. ನ್ಯಾಯಾಲಯದ ನಿರಾಕರಿಸಿದ ವಿಷಯ ಆಡಳಿತಾತ್ಮವಾಗಿ ಸಾಧಿಸಲು ಹಣಕಾಸು ಇಲಾಖೆ ಪ್ರಯತ್ನವು ನ್ಯಾಯಾಂಗದ ವಿರುದ್ಧವಾಗಿದೆ ಎಂದರು.
ಕನಿಷ್ಠ ವೇತನ ಪರಿಷ್ಕರಣೆ ಈಗಾಗಲೇ 5 ವರ್ಷ ತಡವಾಗಿದೆ. 2016ರ ನಂತರ 2021ರಲ್ಲಿ ಪರಿಷ್ಕರಣೆ ಆಗಬೇಕಾಗಿದ್ದರೂ ಸರ್ಕಾರದ ವಿಳಂಬದಿಂದ 2026ರಲ್ಲಿ ಅಧಿಸೂಚನೆ ಹೊರಬಂದಿದೆ. ಈಗ ಮತ್ತೆ ತಡೆ ಹಿಡಿಯುವುದು ಕಾರ್ಮಿಕರಿಗೆ ಮತ್ತಷ್ಟು ಅನ್ಯಾಯ ಮಾಡಿದಂತಾಗಿದೆ. ಕನಿಷ್ಠ ವೇತನ ಕಾಯ್ದೆ 1948ರ ಪ್ರಕಾರ ಅಂತಿಮ ಅಧಿಸೂಚನೆ ಪ್ರಕಟವಾದ ಬಳಿಕ ಅದನ್ನು ಅಮಾನತಿನಲ್ಲಿಡುವ ಅಧಿಕಾರ ಯಾವುದೇ ಇಲಾಖೆಗೆ ನೀಡಿಲ್ಲ. ಅನುಷ್ಠಾನ ಈಗಾಗಲೇ ಆರಂಭವಾಗಿದ್ದು, ಹಲವಾರು ಇಲಾಖೆಗಳು ಪರಿಷ್ಕೃತ ವೇತನ ಪಾವತಿಸುತ್ತಿವೆ. ಕಾರ್ಮಿಕ ಇಲಾಖೆಯೂ ಅನುಷ್ಠಾನಕ್ಕೆ ಸೂಚಿಸಿದೆ. ಈಗ ಹಿಂಪಡೆಯುವುದರಿಂದ ಆಡಳಿತಾತ್ಮಕ ಗೊಂದಲ, ಕೈಗಾರಿಕಾ ಅಶಾಂತಿ ಹಾಗೂ ಕಾರ್ಮಿಕರಿಗೆ ಘೋರ ಅನ್ಯಾಯವಾಗಲಿದೆ. ಉದ್ಯಮಗಳು ರಾಜ್ಯ ಬಿಟ್ಟು ಹೋಗುತ್ತವೆಂಬ ಆಧಾರರಹಿತ ಹೇಳಿಕೆ ಹಿಂಪಡೆಯಲಿ ಎಂದು ತಾಕೀತು ಮಾಡಿದರು.ಜಿಲ್ಲಾ ಕಾರ್ಯದರ್ಶಿ ತಿಪ್ಪೇಸ್ವಾಮಿ ಅಣಬೇರು, ಶಿವಾಜಿ ರಾವ್, ಎಲ್.ಎಚ್.ಪ್ರಕಾಶ, ಪರಮೇಶ್ವರಪ್ಪ, ಲೋಕೇಶ ನೀರ್ಥಡಿ, ನಿಂಗರಾಜ ಸಿದ್ದಮ್ಮನಹಳ್ಳಿ, ಪ್ರಭು, ಲಲಿತಮ್ಮ, ಮಂಜುಳಾ ಬೀದಿಮನಿ, ಸಂಜಯ್, ರವಿ ನಾಯ್ಕ, ಸ್ವಾಮಿ ಲಿಂಗಪ್ಪ, ಶಿವಾಜಿ ರಾವ್, ವಿಜಿಯಮ್ಮ, ಬಸವರಾಜ ಕೋಟೆ, ವಿರೂಪಾಕ್ಷಪ್ಪ ದೊಡ್ಡಮನಿ, ಕರಣಮ್ ವಿಜಯ್, ಅಕ್ಕಮ್ಮ, ಬೀರಲಿಂಗಪ್ಪ, ಗದಿಗೆಪ್ಪ, ಹನುಮಂತಪ್ಪ ಸೇರಿದಂತೆ ದಾವಿವಿ ಕಾರ್ಮಿಕ ಸಂಘ, ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜು ಕಾರ್ಮಿಕರ ಸಂಘ, ಆಶಾ ಕಾರ್ಯಕರ್ತೆಯರ ಸಂಘ, ಸೋಲಾರ್ ಕಾರ್ಮಿಕರ ಸಂಘ, ಬೀದಿ ಬದಿ ವ್ಯಾಪಾರಸ್ಥರ ಸಂಘಗಳ ಪದಾಧಿಕಾರಿಗಳು, ಸದಸ್ಯರು ಇದ್ದರು.
- - -(ಕೋಟ್) ನಿರ್ಮಾಣ, ಭದ್ರತೆ, ಹೌಸ್ ಕೀಪಿಂಗ್, ಸ್ವಚ್ಛತೆ ಸೇವೆ, ಪೌರ ಸೇವೆ, ಸರ್ಕಾರಿ ಹೊರಗುತ್ತಿಗೆ ಸೇವೆಗಳು, ವಿಂಡ್ ಮಿಲ್, ಸೋಲಾರ್ ಕ್ಷೇತ್ರಗಳಂತಹ ಸ್ಥಳಾಧಾರಿತ ಸೇವೆಗಳು ಬೇರೆ ರಾಜ್ಯಗಳಿಗೆ ಸ್ಥಳಾಂತರವಾಗಲು ಸಾಧ್ಯವಿಲ್ಲ. ಹಣಕಾಸು ಇಲಾಖೆ ಆರ್ಥಿಕ ಸಂಕಷ್ಟವಾದ ಕಾನೂನುಬದ್ಧವಲ್ಲ. ಸುಪ್ರೀಂ ಕೋರ್ಟ್ ತೀರ್ಪುಗಳ ಪ್ರಕಾರ ಆರ್ಥಿಕ ಸಂಕಷ್ಟವನ್ನು ನೆಪವಾಗಿಸಿಕೊಂಡು ಕನಿಷ್ಠ ವೇತನ ನೀಡದಿರಲು ಸಾಧ್ಯವಿಲ್ಲ. ಕೂಡಲೇ ಸಂಘಟನೆ ಬೇಡಿಕೆಗಳನ್ನು ಈಡೇರಿಸಬೇಕು.
- ಮಂಜುನಾಥ ಕೈದಾಳೆ, ಜಿಲ್ಲಾಧ್ಯಕ್ಷ.- - -
-4ಕೆಡಿವಿಜಿ1: ದಾವಣಗೆರೆಯಲ್ಲಿ ಮಂಗಳವಾರ ಹೊರಗುತ್ತಿಗೆ ಕಾರ್ಮಿಕರಿಗೆ ಪರಿಷ್ಕೃತ ಕನಿಷ್ಠ ವೇತನ ಜಾರಿಗೆ ಒತ್ತಾಯಿಸಿ ಎಐಯುಟಿಯುಸಿ ಜಿಲ್ಲಾ ಘಟಕದಿಂದ ಪ್ರತಿಭಟಿಸಲಾಯಿತು.