ಅಭಿವೃದ್ಧಿಯ ನೆಪದ ಅರಣ್ಯ ನಾಶದಿಂದ ತಾಪಮಾನ ಹೆಚ್ಚಳ: ಎಸ್.ಎನ್.ಚಂದ್ರಶೇಖರ್ ಕಳವಳ

KannadaprabhaNewsNetwork | Updated : Jun 01 2024, 12:46 AM IST

ಸಾರಾಂಶ

ಚಿತ್ರದುರ್ಗದ ಚಂದ್ರವಳ್ಳಿ ಪ್ರದೇಶದಲ್ಲಿ ಅರಣ್ಯ ಸಂರಕ್ಷಣೆಯ ಹಿನ್ನೆಲೆಯಲ್ಲಿ ‘ನಮ್ಮ ಭೂಮಿ; ನಮ್ಮ ಭವಿಷ್ಯ’ ಈ ಬಾರಿ ಘೋಷವಾಕ್ಯದೊಂದಿಗೆ ಶುಕ್ರವಾರ ಸಿಸಿ ನೆಟ್ಟು ಪರಿಸರ ದಿನ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಜಾಗತಿಕ ನಾಗಾಲೋಟದ ಪರಿಣಾಮವಾಗಿ ಕೈಗಾರೀಕರಣ, ಅಭಿವೃದ್ಧಿ ನೆಪದಲ್ಲಿ ಅರಣ್ಯ ನಾಶಗೊಂಡು ತಾಪಮಾನ ಹೆಚ್ಚಳವಾಗುತ್ತಿದೆ. ವಾತಾವರಣ ಬದಲಾವಣೆ ಯಿಂದಾಗಿ ಜೀವವೈವಿಧ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಎಸ್.ಎನ್ ಚಂದ್ರಶೇಖರ್ ಕಳವಳ ವ್ಯಕ್ತಪಡಿಸಿದರು.

ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠ, ಎಸ್‌ಜೆಎಂ ವಿದ್ಯಾಪೀಠ, ಅರಣ್ಯ ಇಲಾಖೆ ಮತ್ತು ಚಂದ್ರವಳ್ಳಿಯ ಎಸ್.ಜೆಎಂ ಪದವಿ ಕಾಲೇಜು ಸಹಯೋಗದಲ್ಲಿ ನಡೆದ ಪರಿಸರ ದಿನಾಚರಣೆಯಲ್ಲಿ ಚಂದ್ರವಳ್ಳಿ ಪರಿಸರ ಮತ್ತು ಕಾಲೇಜು ಆವರಣದಲ್ಲಿ ಸಸಿಗಳನ್ನು ನೆಟ್ಟು ಮಾತನಾಡಿದರು.

ಅರಣ್ಯ ಸಂರಕ್ಷಣೆಯ ಹಿನ್ನೆಲೆಯಲ್ಲಿ ‘ನಮ್ಮ ಭೂಮಿ; ನಮ್ಮ ಭವಿಷ್ಯ’ ಈ ಬಾರಿ ಘೋಷವಾಕ್ಯವಾಗಿದೆ. ಈ ವರ್ಷ ಅತಿಹೆಚ್ಚು ತಾಪಮಾನ ಅನುಭವಿಸುತ್ತಿದ್ದೇವೆ. ಇದಕ್ಕೆ ಅರಣ್ಯ ನಾಶವೂ ಕಾರಣ. ಭೂಮಿಯ ಸವಕಳಿಯನ್ನು ತಡೆಯಬೇಕು. ಅರಣ್ಯವನ್ನು ಹೆಚ್ಚು ಅಭಿವೃದ್ಧಿಗೊಳಿಸುವತ್ತ ಶ್ರಮಿಸಬೇಕಾಗಿದೆ. ಎಲ್ಲರೂ ಗಿಡಗಳನ್ನು ಹಾಕಿ ಬೆಳೆಸಬೇಕೆಂದರು.

ಬಸವಪ್ರಭು ಸ್ವಾಮಿಗಳು ಮಾತನಾಡಿ, ದೇವರು ನಮಗೆ ಪ್ರಕೃತಿಯನ್ನು ನೀಡಿ ಸ್ವರ್ಗವನ್ನು ನಿರ್ಮಿಸಿದ್ದಾನೆ. ಆದರೆ ಮಾನವ ಕಾಡನ್ನು ಕಡಿದು ನರಕವಾಗಿಸಿದ್ದಾನೆ. ದೊಡ್ಡ ದೊಡ್ಡ ನಗರಗಳು ಕಾಂಕ್ರಿಟ್ ಕಾಡುಗಳಾಗುತ್ತಿವೆ. ಇದರಿಂದ ಶುದ್ಧ ಗಾಳಿ ಸಿಗುತ್ತಿಲ್ಲ. ರೋಗ-ರುಜಿನಗಳಿಗೆ ತುತ್ತಾಗುತ್ತಿದ್ದಾನೆ. ಮಳೆ-ಬೆಳೆ ಕಡಿಮೆಯಾಗಿ ವಾತಾವರಣದಲ್ಲಿ ಏರುಪೇರನ್ನು ಅನುಭವಿಸುತ್ತಿದ್ದಾನೆ. ಪರಿಸರ ದಿನ ಬಂದಾಗ ಮಾತ್ರ ಅರಣ್ಯದ ಬಗ್ಗೆ ಚಿಂತನೆ ಮಾಡುವುದಾಗಬಾರದು. ಇದು ವರ್ಷವಿಡೀ ನಿರಂತರವಾಗಿರಬೇಕು. ಅಂದಾಗ ಮಾತ್ರ ಗುಡ್ಡ ಬೆಟ್ಟ ಅರಣ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದರು.

ಬಸವಕುಮಾರ ಸ್ವಾಮಿಗಳು ಮಾತನಾಡಿ, ಸರ್ಕಾರ ರೂಪಿಸಿರುವ ದಿನಾಚರಣೆಯನ್ನು ಮಾತ್ರ ಇಲ್ಲಿ ಆಚರಿಸುತ್ತಿಲ್ಲ. ಈ ಹಿಂದೆ ಈ ಪ್ರದೇಶದಲ್ಲಿ ಮುರುಘಾಮಠದಿಂದ ಲಕ್ಷಾಂತರ ಗಿಡಗಳನ್ನು ನೆಟ್ಟಿದ್ದರು. ಅದರ ಫಲವಾಗಿ ಇಲ್ಲಿನ ವಾತಾವರಣ ಹಚ್ಚುಹಸಿರಾಗಿದೆ. ಇದನ್ನು ಇಲ್ಲಿಗೇ ಬಿಡದೇ ಅನೇಕ ರೀತಿಯ ಸಸಿಗಳನ್ನು ಹಾಕುತ್ತ, ಅವುಗಳನ್ನು ಪೋಷಿಸಲಾಗುವುದು. ಅದಕ್ಕಾಗಿಯೇ ಶ್ರೀಮಠದಿಂದ ಏಳೆಂಟು ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ನಿಪ್ಪಾಣಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ, ಮುರುಗೇಶ ಸ್ವಾಮಿಗಳು, ತಿಪ್ಪೇರುದ್ರ ಸ್ವಾಮಿಗಳು ಎಸ್.ಜೆಎಂ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಹೆಚ್. ಪಂಚಾಕ್ಷರಿ, ಪ್ರಾಧ್ಯಾಪಕರುಗಳಾದ ಪ್ರೊ.ಎಲ್.ಶ್ರೀನಿವಾಸ್, ಪ್ರೊ. ಎನ್.ಚಂದಮ್ಮ, ಪ್ರೊ.ಎಸ್.ಆನಂದ್, ಪ್ರೊ.ವಿ.ಎಸ್ ನಳಿನಿ, ಡಾ.ನಾಜೀರುನ್ನೀಸ ಎಸ್, ಪ್ರೊ.ಹೆಚ್.ಎಂ. ಮಂಜುನಾಥ ಸ್ವಾಮಿ, ಪ್ರೊ.ಸಿ.ಎನ್ ವೆಂಕಟೇಶ್, ಎನ್.ಎಸ್ಎಸ್ ಅಧಿಕಾರಿಗಳಾದ ಪ್ರೊ.ಟಿ.ಎನ್.ರಜಪೂತ್, ಪ್ರೊ.ಬಿ.ನಾಗರಾಜ್, ಐಕ್ಯೂಎಸಿ ಕೋ ಆರ್ಡಿನೇಟರ್ ಡಾ.ಹರ್ಷವರ್ಧನ್ ಎ., ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು, ಬೋಧಕೇತರರು, ವಿದ್ಯಾರ್ಥಿಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಡಾ.ಬಿ.ರೇವಣ್ಣ ಕಾರ್ಯಕ್ರಮ ನಿರೂಪಿಸಿದರು, ಗ್ರಂಥಪಾಲಕ ಡಾ.ಸತೀಶ್‍ ನಾಯ್ಕ್ ಸ್ವಾಗತಿಸಿದರು.

Share this article