ಹುಬ್ಬಳ್ಳಿ: ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ರೈತರ ಬೆಳೆಗಳು ಹಾನಿಯಾಗಿದೆ. ಇದೀಗ ಕಟಾವಿಗೆ ಬಂದಿದ್ದ ಹೆಸರು ಬೆಳೆ ಸಂಪೂರ್ಣವಾಗಿ ಮಳೆಯಿಂದಾಗಿ ಹಾನಿಗೊಳಗಾಗಿದ್ದು, ಈ ಹಿನ್ನೆಲೆಯಲ್ಲಿ ತಾಲೂಕಿನ ಇಂಗಳಹಳ್ಳಿ, ಶಿರಗುಪ್ಪಿಯ ಸಾವಿರಾರು ರೈತರು ರೈತ ಸಂಪರ್ಕ ಕೇಂದ್ರಕ್ಕೆ ಅರ್ಜಿ ಸಲ್ಲಿಸಲು ಬಂದು ಪರದಾಡಿದ ಘಟನೆ ಬುಧವಾರ ನಡೆದಿದೆ.
ಈ ವೇಳೆ, ಇಂಗಳಹಳ್ಳಿ ರೈತ ಮಲ್ಲಪ್ಪ ಹಳಕಟ್ಟಿ ಮಾತನಾಡಿ, ಬೆಳಗ್ಗೆಯಿಂದಲೇ ಹಾನಿಗೊಳಗಾದ ಬೆಳೆಗಳ ಬಗ್ಗೆ ಅರ್ಜಿ ಸಲ್ಲಿಸಲು ಬಂದಿದ್ದೇವೆ. ಆದರೆ, ಇಲ್ಲಿ ಯಾರೊಬ್ಬರೂ ನಮ್ಮ ಅರ್ಜಿ ಸ್ವೀಕರಿಸುವವರಿಲ್ಲ. ಶೀಘ್ರವೇ ವಿಮಾ ಕಂಪನಿಯವರು ರೈತರ ಅರ್ಜಿಗಳನ್ನು ಪಡೆದು ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಅಲ್ಲದೇ ಜಿಲ್ಲಾಧಿಕಾರಿಗಳು, ಸಚಿವರು ಈ ಕುರಿತು ಗಮನ ಹರಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಮಹಿಳೆಯರು, ಮಕ್ಕಳು, ಅನೇಕ ವಾಹನಗಳ ಜತೆಗೆ ರೈತ ಸಂಪರ್ಕ ಕೇಂದ್ರಕ್ಕೆ ಬಂದು ಅರ್ಜಿ ಸ್ವೀಕರಿಸುವುದನ್ನು ಸುರಿಯುತ್ತಿರುವ ಮಳೆಯಲ್ಲಿ ಎದುರು ನೋಡುತ್ತಿದ್ದರು.