ಬ್ಯಾಡಗಿ: ಪಟ್ಟಣದ ಅರ್ಹ ಬಡವರಿಗೆ ಪುರಸಭೆಯಿಂದ ನಿವೇಶನ ಮಂಜೂರು ವಿಚಾರದಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ರಾಜ್ಯ ಭ್ರಷ್ಟಾಚಾರ ನಿರ್ಮೂಲನೆ ಸಮಿತಿ ಸಂಚಾಲಕ ಮಲ್ಲೇಶಪ್ಪ ಚಿಕ್ಕಣ್ಣನವರ ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಮಾತಿಗೆ ತಪ್ಪಬೇಡಿ:ಈ ಹಿಂದೆ ಸಾರ್ವಜನಿಕರು, ವಿವಿಧ ಸಂಘ, ಸಂಸ್ಥೆಗಳು ಪ್ರತಿಭಟನೆ ನಡೆಸಿದ ವೇಳೆ ಆಶ್ರಯ ಸಮಿತಿ ಅಧ್ಯಕ್ಷ ಮುನ್ನಾ ಎರೇಶೀಮಿ ಹಾಗೂ ಸರ್ವ ಸಮಿತಿ ಸದಸ್ಯರು ಏಪ್ರಿಲ್ ಮೊದಲ ವಾರದಲ್ಲಿ ಅರ್ಹ ಬಡವರನ್ನು ಆಯ್ಕೆಗೊಳಿಸಿ ಅವರಿಗೆ ಹಕ್ಕು ಪತ್ರ ವಿತರಿಸುವುದಾಗಿ ಹೇಳಿಕೆ ನೀಡಿದ್ದರು, ಆದರೆ ಈವರೆಗೂ ಹಕ್ಕು ಪತ್ರ ನೀಡಲು ಸಮಿತಿ ಮುಂದಾಗಿಲ್ಲ, ಕೋಟಿಗಟ್ಟಲೇ ಅನುದಾನ ವ್ಯಯಿಸಿ ಖರೀದಿಸಿ 8 ವರ್ಷ ಗತಿಸಿದೆ, ಆದರೆ ಅರ್ಹ ಫಲಾನುಭವಿಗಳ ಆಯ್ಕೆ ಮಾಡುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ, ಕಳೆದ 4 ವರ್ಷದ ಹಿಂದೆ ಮನೆ ನೀಡುವುದಾಗಿ ಬಡವರಿಂದ ತಲಾ ₹30 ಸಾವಿರ ತುಂಬಿಸಿಕೊಂಡಿದೆ. ರಾಜೀವ ಗಾಂಧಿ ವಸತಿ ನಿಗಮದ ಆದೇಶವಿಲ್ಲದೇ ಕಾನೂನು ಬಾಹೀರವಾಗಿ ಹಣ ತುಂಬಿಸಿ ಕೊಳ್ಳಲಾಗಿದೆ, ಇದನ್ನು ಪ್ರಶ್ನಿಸಿ ರಾಜ್ಯಪಾಲರಿಗೆ ಪತ್ರ ಬರೆಯುವೆ, ಈಗ ಬಡವರಿಗೆ ಹಣವೂ ಇಲ್ಲ,ನಿವೇಶನವೂ ಇಲ್ಲ ಎನ್ನುವಂತಾಗಿದೆ, ಕೂಡಲೇ ಬಡವರಿಂದ ಪಡೆದ ₹30 ಸಾವಿರ ಹಣ ವಾಪಸ್ ಅವರ ಖಾತೆಗೆ ಹಿಂತಿರುಗಿಸಿ ಅರ್ಹರಿಗೆ ನಿವೇಶನ ವಿತರಿಸಬೇಕು, ಒಂದು ವೇಳೆ ನಿರ್ಲಕ್ಷಿಸಿದರೆ ಪುರಸಭೆ ಎದುರು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.