ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಮಾ.28ರಿಂದ ಆರಂಭವಾದ 25ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಏ.27ರಂದು ಫೈನಲ್ ಪಂದ್ಯ ನಡೆಯುವ ಮೂಲಕ ಮುಕ್ತಾಯಗೊಳ್ಳಲಿದೆ.
ಶನಿವಾರ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ‘ಶೂಟೌಟ್‘ನಲ್ಲಿ ಎದುರಾಳಿ, ಮೂರು ಬಾರಿಯ ಕೌಟುಂಬಿಕ ಹಾಕಿ ಪಂದ್ಯಾವಳಿ ಚಾಂಪಿಯನ್ ನೆಲ್ಲಮಕ್ಕಡ ತಂಡದ ಎರಡು ಗೋಲಿನ ಅವಕಾಶಗಳನ್ನು ಗೋಲಿ ಮಂಡೇಪಂಡ ಡ್ಯಾನ್ ಬೆಳ್ಯಪ್ಪ ವಿಫಲಗೊಳಿಸುತ್ತಿರುವಂತೆಯೇ ಮಂಡೇಪಂಡ ತಂಡ 5-4 ಗೋಲುಗಳ ಅಂತರದ ಮಹತ್ವದ ಗೆಲುವನ್ನು ತನ್ನದಾಗಿಸಿಕೊಂಡಿತು.ದ್ವಿತೀಯ ಸೆಮಿಫೈನಲ್‌ನಲ್ಲಿ ಚೇಂದಂಡ ತಂಡ 3-1 ಗೋಲುಗಳ ಅಂತರದಿಂದ ಎದುರಾಳಿ ಕುಪ್ಪಂಡ (ಕೈಕೇರಿ) ತಂಡವನ್ನು ಮಣಿಸಿ ಫೈನಲ್‌ನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿತು.
ಮೊದಲ ಗೋಲಿನ ಮುನ್ನಡೆಯಿಂದ ಉತ್ತೇಜಿತ ನೆಲ್ಲಮಕ್ಕಡ ತಂಡ ಸತತ ದಾಳಿಗಳ ಮೂಲಕ ಮತ್ತೆರಡು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಪಡೆಯಿತಾದರು, ಅದನ್ನು ಗೋಲಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ ನೆಲ್ಲಮಕ್ಕಡ ತಂಡಕ್ಕೆ ಸಡ್ಡು ಹೊಡೆದ ಮಂಡೇಪಂಡ ತಂಡ ಯೋಜನಾಬದ್ಧ ದಾಳಿಗಳನ್ನು ಸಂಘಟಿಸಿದ್ದಲ್ಲದೆ, ಇದೇ ಮೊದಲ ಬಾರಿ ಅಳವಡಿಸಿದ್ದ ''''''''ರೆಫರಲ್''''''''ಗೆ ಮೊರೆ ಹೋಗಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಪಡೆಯುವ ಪ್ರಯತ್ನದಲ್ಲಿ ಒಮ್ಮೆ ಯಶಸ್ವಿಯಾಯಿತಾದರು, ದೊರಕಿದ ಪೆನಾಲ್ಟಿ ಕಾರ್ನರ್‌ನ್ನು ಗೋಲಾಗಿ ಪರಿವರ್ತಿಸಲು ಸಾಧ್ಯವಾಗದೆ ನಿರಾಶೆಗೊಂಡಿತು.
ಮಂಡೇಪಂಡ ತಿರುಗೇಟು: ತೃತೀಯ ಕ್ವಾರ್ಟರ್‌ನಲ್ಲಿ ನಿಖರ ಪಾಸ್‌ಗಳೊಂದಿಗೆ ಎದುರಾಳಿ ತಂಡದ ಗೋಲಿನ ಆವರಣಕ್ಕೆ ಸತತ ದಾಳಿಗಳನ್ನು ಸಂಘಟಿಸಿದ ಮಂಡೇಪಂಡ ತಂಡ, ನೆರವಂಡ ತಂಡದ ರಕ್ಷಣಾ ಕೋಟೆಯನ್ನು ಭೇದಿಸಿ ಮುನ್ನುಗ್ಗಿತಲ್ಲದೆ, ಮಂಡೇಪಂಡ ತಂಡದ ಮುನ್ನೆಡೆ ಆಟಗಾರ ಗೌತಮ್ ಎದುರಾಳಿಯ ''''''''ಡಿ'''''''' ಆವರಣದ ಬಲ ತುದಿಯಿಂದ ಸಿಡಿಸಿದ ಚೆಂಡು ಎದುರಾಳಿ ನೆಲ್ಲಮಕ್ಕಡ ತಂಡದ ಗೋಲನ್ನು ವಂಚಿಸಿ ಗೋಲ್ ಪೋಸ್ಟ್ನ ಒಳಹೋಗುತ್ತಿದ್ದಂತೆಯೇ ಪ್ರೇಕ್ಷಕರ ಹರ್ಷೋದ್ಘಾರ ಮುಗಿಲು ಮುಟ್ಟಿತು, ಕೊನೆಗೂ ಮಂಡೇಪಂಡ ತಂಡ ಸಮಬಲದ ಗೋಲು ದಾಖಲಿಸಿ ಪಂದ್ಯವನ್ನು 1-1 ಗೋಲಿನ ಸಮಸ್ಥಿತಿಗೆ ತಂದು ನಿಲ್ಲಿಸಿತು.
ಶೂಟೌಟ್- ವಿಜೇತ ತಂಡವನ್ನು ನಿರ್ಧರಿಸುವ ಶೂಟೌಟ್‌ನಲ್ಲಿ ಮಂಡೇಪಂಡ 4 ಗೋಲುಗಳನ್ನು ಗಳಿಸಿದರೆ, ನೆಲ್ಲಮಕ್ಕಡ ತಂಡ 3 ಗೋಲುಗಳನ್ನಷ್ಟೆ ಗಳಿಸಲು ಶಕ್ತವಾಯಿತು. ಮಂಡೇಪಂಡ ತಂಡದ ಗೋಲಿ ಡ್ಯಾನ್ ಬೆಳ್ಯಪ್ಪ ಅತ್ಯಾಕರ್ಷಕ ಗೋಲು ರಕ್ಷಣೆೆಯ ಮೂಲಕ ಪ್ರೇಕ್ಷಕರ ನಿಜ ''''''''ಹೀರೋ'''''''' ಆಗಿ ಕಂಗೊಳಿಸಿದರು. ಪರಾಜಿತ ತಂಡ ನೆಲ್ಲಮಕ್ಕಡ ತಂಡದ ಸಚಿನ್ ಅವರನ್ನು ಪಂದ್ಯ ಪುರುಷೋತ್ತಮರಾಗಿ ಗೌರವಿಸಲಾಯಿತು.
ಚೇಂದಂಡ ತಂಡದ ನಿಕಿನ್ ತಿಮ್ಮಯ್ಯ 1 ಹಾಗೂ ತಮ್ಮಯ್ಯ 2 ಗೋಲುಗಳನ್ನು ಬಾರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪರಾಜಿತ ಕುಪ್ಪಂಡ(ಕೈಕೇರಿ) ತಂಡದ ಪರವಾಗಿ ನಾಚಪ್ಪ 1 ಗೋಲು ಗಳಿಸಿದರು. ಕುಪ್ಪಂಡ ಪಿ. ಸೋಮಯ್ಯ ಪಂದ್ಯ ಪುರುಷೋತ್ತಮ ಗೌರವಕ್ಕೆ ಪಾತ್ರರಾದರು.