ಬ್ಯಾಡಗಿ: ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ತಾಲೂಕಿನ ಹೊಸ ಶಿಡೇನೂರ ರೈತನಿಗೆ 3 ವರ್ಷ ಗತಿಸಿದರೂ ಪರಿಹಾರ ನೀಡಲು ಸಾಧ್ಯವಾಗದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ ಮಾಡುತ್ತಿದೆ. ಕೂಡಲೇ ಇಂತಹ ಪ್ರಕರಣಗಳನ್ನು ಇತ್ಯರ್ಥಪಡಿಸದಿದ್ದರೇ ಫೆ.14ರಂದು ನಡೆಯಲಿರುವ ಸಮಾವೇಶದಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಕಪ್ಪುಪಟ್ಟಿ ಪ್ರದರ್ಶಿಸುವುದಾಗಿ ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನುದೇಶಿಸಿ ಮಾತನಾಡಿದ ಅವರು, ರೈತ ಆತ್ಮಹತ್ಯೆ ಪ್ರಕರಣಗಳು ಹಾವೇರಿ ಜಿಲ್ಲೆಯಲ್ಲಿ ಹೆಚ್ಚು ನಡೆಯುತ್ತಿದ್ದು, ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ, ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಅದಕ್ಕೆ ಪೂರಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳದಿರುವ ಸರ್ಕಾರ ಸತ್ತಮೇಲೂ ಇಲ್ಲಸಲ್ಲದ ಕಾರಣಗಳನ್ನು ಹೇಳುತ್ತಿದ್ದು ಪರಿಹಾರ ನೀಡುತ್ತಿಲ್ಲವೆಂದು ಆರೋಪಿಸಿದರು.ಅರ್ಜಿ ಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳಬೇಕೆ: ತಾಲೂಕಿನ ಶೀಡೆನೂರ ಗ್ರಾಮದ ರೈತ ನಾಗರಾಜ ಬಿದರಿ ಕಳೆದ 2022ರಲ್ಲಿ ಸಾಲಬಾಧೆಯಿಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತ ರೈತನ ಕುಟುಂಬಕ್ಕೆ ಪರಿಹಾರಕ್ಕೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿ ಕೂಡಾ ಸದರಿ ಕುಟುಂಬಕ್ಕೆ ಇರಲಿಲ್ಲ, ಆದರೂ ಮೃತ ದಿನದಿಂದ 3 ತಿಂಗಳ ಬಳಿಕ (8 ದಿವಸ ತಡವಾಗಿ) ಅರ್ಜಿ ಸಲ್ಲಿಸಿದ್ದನ್ನೇ ನೆಪವಾಗಿಟ್ಟುಕೊಂಡು ಅರ್ಜಿಯನ್ನು ತಿರಸ್ಕರಿಸಲಾಗಿದೆ. ಜಿಲ್ಲೆಯಲ್ಲಿ 30, ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ಇಂತಹ ಪ್ರಕರಣಗಳು ತಮ್ಮ ಮುಂದಿದ್ದು ಕೂಡಲೇ ಇತ್ಯರ್ಥಪಡಿಸಿ ಪರಿಹಾರ ನೀಡುವಂತೆ ಆಗ್ರಹಿಸಿದರು.ಎಫ್‌ಐಆರ್ ಮೇಲೆ ಪರಿಹಾರ: ರೈತನ ಕುಟುಂಬ ಅರ್ಜಿ ಸಲ್ಲಿಸಬೇಕೆಂಬ ಮತ್ತು ವಿಧಿಸಿರುವ ಕಾಲಮಿತಿ ರದ್ದುಪಡಿಸಿ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಆದ ಬಳಿಕ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ತಹಸೀಲ್ದಾರ್ ಸೇರಿದಂತೆ ಸಂಬಂಧಿಸಿದ ಕೃಷಿ ಇಲಾಖೆ ಇನ್ನಿತರ ಅಧಿಕಾರಿಗಳು ಖುದ್ದಾಗಿ ಹೋಗಿ ಪರಿಶೀಲನೆ ಮಾಡಬೇಕು, ಸ್ವಯಂ ಅರ್ಜಿ ದಾಖಲೀಕರಣ ಮಾಡಿಕೊಂಡು ರೈತರ ಕುಟುಂಬಕ್ಕೆ ಪರಿಹಾರ ನೀಡುವ ಕೆಲಸವಾಗಬೇಕು. ಆದರೆ ಯಾವ ತಹಸೀಲ್ದಾರಗಳು ಈ ಕೆಲಸ ಪ್ರಾಮಾಣಿಕವಾಗಿ ಮಾಡುತ್ತಿಲ್ಲ. ಇದರಿಂದ ರೈತ ಆತ್ಮಹತ್ಯೆಯಂತಹ ಪ್ರಕರಣದಲ್ಲಿ ಪಾರದರ್ಶಕ ಕೆಲಸ ನಡೆಯದೇ ರೈತರು ಪರಿಹಾರದಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು.ಸರ್ಕಾರವೇ ಕೊಲೆ ಮಾಡುತ್ತಿದೆ: ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ ಬದಲಾಗಿ ಸರ್ಕಾರವೇ ರೈತರನ್ನು ಹತ್ಯೆ ಮಾಡುತ್ತಿದೆ, ಒಂದೆಡೆ ಅತೀವೃಷ್ಟಿ, ಅನಾವೃಷ್ಠಿಯಿಂದ ರೈತ ಕಂಗಾಲಾಗಿದ್ದರೆ ಇದೀಗ ಬೆಳೆದಂತಹ ಬೆಳೆಗೆ ಸರಿಯಾದ ದರಗಳು ಸಿಗದೇ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ, ದುರ್ದೈವಿ ರೈತ ನಾಗರಾಜ ಬಿದರಿ ಕುಟುಂಬ ಕೇವಲ 8 ದಿನ ತಡವಾಗಿ ಅರ್ಜಿ ಸಲ್ಲಿಸಿದ ಎಂಬ ಕಾರಣ ನೀಡಿ ಪರಿಹಾರ ನೀಡದೇ ತಿರಸ್ಕರಿಸಿದ್ದು ರಾಜ್ಯ ಸರ್ಕಾರ ರೈತರ ಸಾವಿನಲ್ಲೂ ಸಹ ರಾಜಕೀಯ ಮಾಡುತ್ತಿದೆ ಎಂದು ದೂರಿದರು.