ಕನ್ನಡಪ್ರಭ ವಾರ್ತೆ ಮಂಡ್ಯ
ನ್ಯಾಯಾಲಯ ಎರಡು ಬಾರಿ ತೀರ್ಪು ನೀಡಿದರೂ ಅಕ್ರಮ ಭೂ ಕಬಳಿಕೆದಾರರೊಂದಿಗೆ ಶಾಮೀಲಾಗಿ ಮನೆಗಳ ಕಾಮಗಾರಿ ಪ್ರಾರಂಭಿಸದೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಸ್ಲಂಬೋರ್ಡ್ ಮತ್ತು ಸರ್ಕಾರದ ವಿರುದ್ಧ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಸೋಮವಾರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಪ್ರಾರಂಭಿಸಿದರು.ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸೇರಿದ ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಕರ್ನಾಟಕ ಜನಶಕ್ತಿ, ಮಹಿಳಾ ಮುನ್ನಡೆ, ಜಿಲ್ಲಾ ಶ್ರಮಿಕನಗರ ನಿವಾಸಿಗಳ ಒಕ್ಕೂಟದ ಕಾರ್ಯಕರ್ತರು ಸರ್ಕಾರ, ಜನಪ್ರತಿನಿಗಳು, ಅಕಾರಿಗಳ ವಿರುದ್ಧ ಘೋಷಣೆ ಕೂಗಿದರು. ನಂತರ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಆಗಮಿಸಿ ಧರಣಿ ಆರಂಭಿಸಿದರು.
ರಾಜ್ಯ ಉಚ್ಚ ನ್ಯಾಯಾಲಯ ನಗರ ಕಾಳಿಕಾಂಬ ಸ್ಲಂನಲ್ಲಿ ಕೊಳಚೆ ಮಂಡಳಿಯಿಂದ ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡುವಂತೆ ಎರಡು ಬಾರಿ ಆದೇಶ ನೀಡಿದ್ದರೂ ಇದುವರೆಗೂ ಅಧಿಕಾರಿಗಳು, ಜನಪ್ರತಿನಿಗಳು ಮತ್ತು ಸರ್ಕಾರ ಮನೆಗಳ ಕಾಮಗಾರಿ ಪ್ರಾರಂಭಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕಿಡಿಕಾರಿದರು.ನ್ಯಾಯಾಲಯದ ತೀರ್ಪನ್ನು ಗೌರವಿಸದೇ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕರು. ಕಾಳಿಕಾಂಬ ಶ್ರಮಿಕ ನಗರ (ಆರ್‌ಎವೈ) ಯೋಜನೆಯ 39 ಮನೆಗಳ ಕಾಮಗಾರಿಯನ್ನು ಯಾವ ಸಮಜಾಯಿಸಿ ನೀಡದೆ ಪ್ರಾರಂಭಿಸಬೇಕು. ಸರ್ವೆ ನಂ. 843/844ರಲ್ಲಿ ನಮ್ಮ 20 ಗುಂಟೆ ಜಾಗವನ್ನು ಕೂಡಲೇ ರಿಜಿಸ್ಟರ್ ಮಾಡಿ ಕೊಳಗೇರಿ ಅಭಿವೃದ್ಧಿ ಮಂಡಳಿಗೆ (ಆರ್‌ಟಿಸಿ) ಇಂಡೀಕರಣ ಮಾಡಬೇಕು ಎಂದು ಒತ್ತಾಯಿಸಿದರು.
ಮಂಡ್ಯದ ಎಲ್ಲಾ ಕೊಳಗೇರಿ ಪ್ರದೇಶಗಳಿಗೆ ಮೂಲ ಸೌಕರ್ಯಗಳನ್ನು ನೀಡಬೇಕು. ಹೆಚ್ಚುವರಿ ನಿವೇಶನ ವಂಚಿತ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲು 20 ಎಕರೆ ಸರ್ಕಾರಿ ಜಾಗವನ್ನು ಮೀಸಲಿಡಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ಸಿದ್ದರಾಜು, ನಾರಾಯಣ, ರಾಜ, ಗೋಪಾಲ, ರಾಣಿ, ದಿವ್ಯ, ಲಕ್ಷ್ಮಿ, ಶಿಲ್ಪ, ಮುನಿಯಮ್ಮ, ನಿಂಗಮ್ಮ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಸಮುದಾಯ ಆರೋಗ್ಯ ಕೇಂದ್ರ ಉಳಿಸುವಂತೆ ಆಗ್ರಹಿಸಿ ಇಂದು ಪ್ರತಿಭಟನೆಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸಮುದಾಯ ಆರೋಗ್ಯ ಕೇಂದ್ರವನ್ನು ಗ್ರಾಮದಲ್ಲಿಯೇ ಉಳಿಸುವಂತೆ ಆಗ್ರಹಿಸಿ ನ.25ರಂದು ಬುಧವಾರ ಬೂಕನಕೆರೆ ಬಂದ್ ಮಾಡಿ ಪ್ರತಿಭಟನೆ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.ಪ್ರತಿಭಟನೆ ಕುರಿತು ಕರಪತ್ರಗಳನ್ನು ಬೂಕನಕೆರೆ ಹೋಬಳಿ ವ್ಯಾಪ್ತಿ ಗ್ರಾಮಗಳಲ್ಲಿ ಹಂಚುತ್ತಿರುವ ಗ್ರಾಮಸ್ಥರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರತಿಭಟನೆ ಹಾಗೂ ಬಂದ್‌ಗೆ ಸಹಕರಿಸುವಂತೆ ಮನವಿ ಮಾಡುತ್ತಿದ್ದಾರೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಹುಟ್ಟೂರು ಬೂಕನಕೆರೆ ಗ್ರಾಮಕ್ಕೆ ಸಮುದಾಯ ಆರೋಗ್ಯ ಕೇಂದ್ರವನ್ನು ಮಂಜೂರು ಮಾಡಿ ಸುಸಜ್ಜಿತ ಕಟ್ಟಡ ಸೇರಿದಂತೆ ಎಲ್ಲಾ ಬಗೆಯ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದರು. ಆದರೆ, ಈಗಿನ ಸರ್ಕಾರ ಉನ್ನತೀಕರಿಸಿದ ಸಮುದಾಯ ಆಸ್ಪತ್ರೆಗೆ ವೈದ್ಯರು, ಸಿಬ್ಬಂದಿಯನ್ನು ನಿಯೋಜನೆ ಮಾಡಲಿಲ್ಲ. ಅರವಳಿಕೆ ತಜ್ಞರನ್ನು ಸೂಕ್ತ ಸಮಯದಲ್ಲಿ ನಿಯೋಜಿಸಿರಲಿಲ್ಲ.ಈ ಹಿನ್ನೆಲೆಯಲ್ಲಿ 2025ರ ಜುಲೈ 11ರಂದು ಸರ್ಕಾರ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯಲ್ಲಿ ವಿಲೀನಗೊಳಿಸುವ ಆದೇಶ ಹೊರಡಿಸಿತ್ತು. ಇದನ್ನು ವಿರೋಧಿಸಿ ಸಮುದಾಯ ಆಸ್ಪತ್ರೆಯನ್ನು ನಮ್ಮಲ್ಲಿ ಉಳಿಸಿಕೊಳ್ಳಲು ಗ್ರಾಮಸ್ಥರು ಗ್ರಾಮ ಬಂದ್ ಮಾಡಿ ಪ್ರತಿಭಟಿಸಲು ನಿರ್ಧಾರ ಕೈಗೊಂಡಿದ್ದಾರೆ.