ಕನ್ನಡಪ್ರಭ ವಾರ್ತೆ ಬೆಂಗಳೂರು
ವಿಧಾನಸೌಧದಲ್ಲಿ ಬುಧವಾರ ವಸತಿ ಇಲಾಖೆಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಜೀವಿತಾವಧಿಯಲ್ಲಿ ಒಂದು ಮನೆ ಬೇಕು ಎನ್ನೋದು ಬಡವರು, ಮಧ್ಯಮ ವರ್ಗದವರ ಕನಸು, ಆಸೆ. ಬಡವರು ಸರ್ಕಾರಕ್ಕೆ ಠೇವಣಿ ಕಟ್ಟಿ ಎಷ್ಟು ವರ್ಷ ಕಾಯಬೇಕು. ಹಿಂದಿನ ಸರ್ಕಾರದಲ್ಲಿ ಠೇವಣಿ ಕಟ್ಟಿ ಅರ್ಜಿ ಹಾಕಿದವರಿಗೂ ಇನ್ನೂ ಮನೆ ಸಿಕ್ಕಿಲ್ಲ ಎಂದರೆ ಏನ್ರೀ ಇದು. ಇದನ್ನು ಸಹಿಸಲಾಗುವುದಿಲ್ಲ. ಆದಷ್ಟು ಬೇಗ ತಮ್ಮ ಕ್ಷೇತ್ರಗಳಿಂದ ಫಲಾನುಭವಿಗಳ ಪಟ್ಟಿ ಕೊಡಲು ಶಾಸಕರ ಜೊತೆ ಮಾತನಾಡುತ್ತೇನೆ. ಬಾಕಿ ಇರುವ ಯೋಜನೆಗಳನ್ನು ಪೂಣಗೊಳಿಸಿ ಫಲಾನುಭವಿಗಳಿಗೆ ಬೇಗ ಮನೆ ವಿತರಿಸಲು ಕ್ರಮ ವಹಿಸಿ ಎಂದು ಸೂಚಿಸಿದರು.
ಬಡವರಿಗೆ ನಿವೇಶನ ನೀಡಿದರೆ ಹಣ ಹೊಂದಿಸಿ ಮನೆ ಕಟ್ಟಿಕೊಳ್ಳುವುದು ಕಷ್ಟ. ಹಾಗಾಗಿ ನಿವೇಶನದ ಬದಲು ಮನೆಯನ್ನೇ ಕಟ್ಟಿ ಕೊಡಲು ಆದ್ಯತೆ ನೀಡಿ. ನಿವೇಶನಗಳು ಖಾಲಿ ಬಿದ್ದಷ್ಟೂ ಕೊಳಗೇರಿಗಳು ಹೆಚ್ಚು ತಲೆ ಎತ್ತುತ್ತವೆ. ಇದಕ್ಕೆ ಅವಕಾಶ ಕೊಡಬೇಡಿ. ಯಾವುದೇ ವಸತಿ ಯೋಜನೆಗೆ ಕೈ ಹಾಕುವ ಮೊದಲೇ ಸ್ಪಷ್ಟ ಯೋಜನೆ ಇಟ್ಟುಕೊಳ್ಳಿ. ಮನೆ ನಿರ್ಮಿಸಿದ ನಂತರ ಮಾರಾಟಕ್ಕೆ ಒದ್ದಾಡುವುದು ಬೇಡ ಎಂದು ತಿಳಿಸಿದರು.ಗ್ರಾಮೀಣ ವಸತಿ ಮನೆಗಳ ನಿರ್ಮಾಣ, ನಿವೇಶನಗಳ ಹಂಚಿಕೆಯಲ್ಲಿ ನಿಧಾನ ಆಗಬಾರದು. ಮನೆ ಕಟ್ಟಲು ಸರ್ಕಾರದಿಂದ ಕಡಿಮೆ ದರದಲ್ಲಿ ನಿವೇಶನ ಪಡೆದವರು 3 ಅಥವಾ ಐದು ವರ್ಷದೊಳಗೆ ಮನೆ ನಿರ್ಮಿಸುವ ನಿಯಮ ಪರಿಶೀಲಿಸಿ ಎಂದು ಸೂಚಿಸಿದರು.
ಈ ವೇಳೆ ಅಧಿಕಾರಿಗಳು ವಿವಿಧ ಯೋಜನೆಯ ಮನೆಗಳಿಗೆ ಹೆಚ್ಚು ಅರ್ಜಿಗಳು ಬಂದಿರುವುದರಿಂದ ಹರಾಜು ಪ್ರಕ್ರಿಯೆ ಮೂಲಕ ಹಂಚಿಕೆ ಮಾಡುವುದಾಗಿ ಪ್ರಸ್ತಾಪಿಸಿದ್ದಕ್ಕೆ ಗರಂ ಆದ ಮುಖ್ಯಮಂತ್ರಿ, ಹರಾಜು ಹಾಕಿದರೆ ಅರ್ಹರಿಗೆ ಸಿಗುತ್ತದೋ, ಹಣವಿದ್ದವರಿಗೆ ಸಿಗುತ್ತದೋ? ಎಂದು ಕೇಳಿದಾಗ ತಬ್ಬಿಬ್ಬಾದ ಅಧಿಕಾರಿಗಳು ಬಾಯಿ ಬಿಡಲಿಲ್ಲ. ಹರಾಜು ವ್ಯವಸ್ಥೆ ಬೇಡ, ಸಾರ್ವಜನಿಕವಾಗಿ ಲಾಟರಿ ಎತ್ತಿ. ಒಟ್ಟಿನಲ್ಲಿ ಬಡವರಿಗೆ, ಅರ್ಹರಿಗೆ ಮನೆ ಸಿಗಬೇಕು. ಅದಕ್ಕೆ ಯಾವ ಕ್ರಮ ಅನುಸರಿಸುತ್ತೀರಿ ನನಗೆ ಸ್ಪಷ್ಟತೆ ನೀಡಿ ಎಂದರು.
ರಾಜ್ಯದಲ್ಲಿ ಕೊಳಗೇರಿಗಳ ಮರು ಅಭಿವೃದ್ಧಿಗೆ ಯೋಜನೆ ಸಿದ್ಧಪಡಿಸಬೇಕು. ಇದಕ್ಕಾಗಿ ಮುಂಬೈಗೆ ಭೇಟಿ ನೀಡಿ ಅಲ್ಲಿನ ಕೊಳಗೇರಿ ಅಭಿವೃದ್ಧಿ ಅವಲೋಕಿಸಿ ಬನ್ನಿ. ಅಲ್ಲಿಗಿಂತ ಉತ್ತಮ ರೀತಿಯಲ್ಲಿ ನಮ್ಮ ಕೊಳಗೇರಿಗಳ ಅಭಿವೃದ್ಧಿ ಪಡಿಸಲು, ಹೆಚ್ಚು ವಿಸ್ತೀರ್ಣದ ಮನೆಗಳನ್ನು ನಿರ್ಮಿಸಲು ಏನು ಮಾಡಬಹುದು ಅವಲೋಕಿಸಿ. ಮುಂದಿನ ಸಚಿವ ಸಂಪುಟದ ವೇಳೆಗೆ ವರದಿ ಸಿದ್ಧಪಡಿಸಿ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಅವರು ತಿಳಿಸಿದರು.
ಇದೇ ವೇಳೆ, ಶಿವರಾಮಕಾರಂತ ಬಡಾವಣೆಯ ರಾಜೀವ್ ಗಾಂಧಿ ವಸತಿ ಯೋಜನೆಯ ಮನೆಗಳ ನಿರ್ಮಾಣ ಜವಾಬ್ದಾರಿಯನ್ನು ಬಿಡಿಎಗೆ ವಹಿಸಲು ಸೂಚಿಸಿದ ಮುಖ್ಯಮಂತ್ರಿ ಅವರು, ಸಂಡೂರಿನಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಡಿ ನಿರ್ಮಿಸಿರುವ ಮನೆಗಳ ಗುಣಮಟ್ಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಯಾವುದೇ ವಸತಿ ಯೋಜನೆ ಅನುಷ್ಠಾನಕ್ಕೆ ಯೋಜನಾ ವಿಭಾಗಕ್ಕೆ ಮೊದಲು ಹೋಗಲೇಬೇಕು. ಮನೆ ಕಟ್ಟಿದರೆ ಸಾಲದು. ಮೂಲಭೂತ ಸೌಲಭ್ಯಗಳು ಮತ್ತು ಸೂಕ್ತ ಸಂಪರ್ಕ ಕಲ್ಪಿಸುವ ಕಡೆಗೂ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.