ಕನ್ನಡಪ್ರಭ ವಾರ್ತೆ ಹಲಗೂರು
ದಡದಲ್ಲಿ ನಿಂತು ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಕಾವೇರಿ ನದಿಗೆ ಬಿದ್ದ ಮಹಿಳೆಯನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ನಾಲ್ವರು ಸೇರಿ ಕಾರು ಚಾಲಕ ಮೃತಪಟ್ಟಿರುವ ಘೋರ ದುರಂತ ಮಂಡ್ಯ ಜಿಲ್ಲೆಯ ಮುತ್ತತ್ತಿಯಲ್ಲಿ ಬುಧವಾರ ಸಂಜೆ ಜರುಗಿದೆ.ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ವಿರುಪಾಕ್ಷಿಪುರ ಹೋಬಳಿಯ ಜಗದಪುರ ಗ್ರಾಮದ ನಿವಾಸಿಗಳಾದ ವಿಜಯಮ್ಮ (52), ಪುತ್ರಿಯರಾದ ಪ್ರಿಯಾಂಕಾ (28), ಶ್ವೇತಾ (38), ಈಕೆ ಪುತ್ರಿ ಚೈತ್ರಾ (20) ಹಾಗೂ ಬೆಂಗಳೂರಿನ ಕಾರಿನ ಚಾಲಕ ಮಹೇಶ್ (35) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಸಾತನೂರಿನ ಕಬ್ಬಾಳು ದೇವಿ ದೇವಸ್ಥಾನ ಸಮೀಪ ಬೀಗರ ಔತಣಕೂಟ ನಿಮಿತ್ತ ಆಗಮಿಸಿ ಪೂಜೆ ಸಲ್ಲಿಸಿದ ಬಳಿಕ ಮಳವಳ್ಳಿ ತಾಲೂಕಿನ ಮುತ್ತತ್ತಿ ಪ್ರವಾಸಿ ತಾಣಕ್ಕೆ ಭೇಟಿ ನೀಡಿ ಮುತ್ತತ್ತಿರಾಯಸ್ವಾಮಿ ದೇವರ ದರ್ಶನ ಪಡೆಯಲು ಆಗಮಿಸಿದ್ದರು. ಆಗ ಸಮೀಪದಲ್ಲೇ ಇದ್ದ ಕಾವೇರಿ ನದಿ ದಡದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವಿಜಯಮ್ಮ ಆಕಸ್ಮಿಕವಾಗಿ ನದಿಗೆ ಬಿದ್ದಿದ್ದಾರೆ. ಇವರನ್ನು ರಕ್ಷಿಸಲು ಒಬ್ಬರಿಗೊಬ್ಬರು ರಕ್ಷಣೆಗೆ ಹೋಗಿ ನಾಲ್ವರು ನದಿಗೆ ಬಿದ್ದಿದ್ದಾರೆ.ನಾಲ್ವರು ಕೊಚ್ಚಿ ಹೋಗುತ್ತಿದ್ದನ್ನು ನೋಡಿದ ಕಾರು ಚಾಲಕ ಮಹೇಶ್ ಕೂಡ ರಕ್ಷಣೆಗೆ ಧಾವಿಸಿ ಅವರು ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.