ಬಿ. ಲಕ್ಷ್ಮೀಕಾಂತಸಾ
ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ, ಚುನಾವಣೆಗೂ ಮುನ್ನ ನೀಡಿದ್ದ ಭರವಸೆಯಂತೆ ₹೧೬೭ ಕೋಟಿ ಅನುದಾನ ಒದಗಿಸಿ, ಹಗರಿಬೊಮ್ಮನಹಳ್ಳಿ ಜಲಾಶಯಕ್ಕೆ ನೀರು ತರುವ ಯೋಜನೆಗೆ ಚಾಲನೆ ನೀಡಿದ್ದರು. ೨ ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಹಗರಿಬೊಮ್ಮನಹಳ್ಳಿ ಜಲಾಶಯಕ್ಕೆ ಸಾಕಷ್ಟು ನೀರು ಹರಿದು ಬಂದಿತ್ತು. ಆದರೆ, ಶಿಥಿಲಾವಸ್ಥೆಯಲ್ಲಿದ್ದ ಜಲಾಶಯದ ಕ್ರಸ್ಟ್‌ಗೇಟಗಳನ್ನು ಬದಲಾಯಿಸದ ಪರಿಣಾಮವಾಗಿ ಜಲಾಶಯದಿಂದ ಸಾಕಷ್ಟು ನೀರು ಹಗರಿ ಹಳ್ಳಕ್ಕೆ ಹರಿದು ಹೋಯಿತು.
ಶಾಸಕ ನೇಮರಾಜನಾಯ್ಕ ಕಳೆದ ವರ್ಷ ₹೪ ಕೋಟಿ ಅನುದಾನ ಒದಗಿಸಿ ಜಲಾಶಯದ ೧೦ ಕ್ರಸ್ಟ್‌ಗೇಟ್‌ಗಳ ನವೀಕರಣಗೊಳಿಸಿ ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಿದ್ದರು. ಕ್ರಸ್ಟ್‌ಗೇಟ್ ಅಳವಡಿಕೆ ಕಾಮಗಾರಿ ಆಮೆ ವೇಗದಲ್ಲಿ ಸಾಗಿದೆ. ಒಂದು ವರ್ಷವಾದರೂ ಮುಗಿಯುತ್ತಿಲ್ಲ ಎಂದು ಅಚ್ಚುಕಟ್ಟು ಪ್ರದೇಶದ ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.ಮೊದಲ ೩ ತಿಂಗಳಲ್ಲಿ ೩, ನಂತರದ ೬ ತಿಂಗಳಲ್ಲಿ ೫, ಹೀಗೆ ಒಟ್ಟು ೮ ಕ್ರಸ್ಟ್‌ಗೇಟ್‌ಗಳನ್ನು ಅಳವಡಿಸಲಾಗಿದೆ. ಆದರೆ ಉಳಿದ ೨ ಕ್ರಸ್ಟ್‌ಗೇಟ್‌ಗಳ ಅಳವಡಿಕೆ ಕಾಮಗಾರಿ ಬಾಕಿ ಉಳಿದಿದೆ. ಕ್ರಸ್ಟ್‌ಗೇಟ್‌ಗಳ ಅಳವಡಿಕೆ ಕಾಮಗಾರಿ ಮುಗಿಯದ ಪರಿಣಾಮವಾಗಿ, ತುಂಗಭದ್ರಾ ನದಿಯಿಂದ ಜಲಾಶಯಕ್ಕೆ ನೀರು ತರುವ ಯೋಜನೆಯ ಮೂಲ ಉದ್ದೇಶಕ್ಕೆ ಧಕ್ಕೆಯಾಗಿದೆ.
ಕಾಮಗಾರಿ ಗುತ್ತಿಗೆ ಪಡೆದುಕೊಂಡಿರುವ ರಾಜೇಂದ್ರ ಬೇತಾಳ್ ಈ ಹಿಂದೆ ಮಾಡಿರುವ ಕಾಮಗಾರಿಯ ಕಾರ್ಮಿಕರ ಕೂಲಿ ಸಹಿತ ೧೫೦ ಟನ್ ಸಾಮರ್ಥ್ಯದ ಕ್ರೇನ್ ಬಾಡಿಗೆ ಮೊತ್ತ ₹೧೧ ಲಕ್ಷ ಪಾವತಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಬಾಕಿ ಪಾವತಿ ಕುರಿತಂತೆ ಬೃಹತ್ ನೀರಾವರಿ ಇಲಾಖೆಯ ಎಂಜಿನಿಯರ್ ಹುಲಿರಾಜ ಅವರನ್ನು ''ಕನ್ನಡಪ್ರಭ'' ಸಂಪರ್ಕಿಸಿದಾಗ, ಬಾಕಿ ಪಾವತಿ ಅವರಿಗೆ ಬಿಟ್ಟಿದ್ದು, ಆದರೆ, ಒಂದು ವಾರದೊಳಗೆ ಉಳಿದಿರುವ ೨ ಕ್ರಸ್ಟ್‌ಗೇಟ್ ಅಳವಡಿಸುವಂತೆ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.
ಒಂದು ವರ್ಷದಿಂದ ಕ್ರಸ್ಟ್ ಗೇಟ್ ಅಳವಡಿಕೆ ಕಾಮಗಾರಿ ಆಮೆ ವೇಗದಲ್ಲಿ ಸಾಗುತ್ತಿದ್ದರೂ ಶಾಸಕ ನೇಮರಾಜ್ ನಾಯ್ಕ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡಿಲ್ಲ. ಒಂದು ವಾರದೊಳಗೆ ಕಾಮಗಾರಿ ಮುಗಿಸದಿದ್ದರೆ ಶಾಸಕರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ತಿಳಿಸಿದ್ದಾರೆ.
ರಾಜೇಂದ್ರ ಬೇತಾಳ್ ಹೇಳಿದರು.