ಕನ್ನಡಪ್ರಭ ವಾರ್ತೆ ಪುತ್ತೂರು
ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಡು ಬೇಸಿಗೆಯ ಈ ಸಂದರ್ಭದಲ್ಲಿಯೂ ಕುಡಿಯವ ನೀರಿನ ಕೊರತೆಯ ಕಾರಣದಿಂದಾಗಿ ಜನರಿಗೆ ಸಮಸ್ಯೆಯಾಗಿಲ್ಲ. ಆದರೆ ಜಲ ಜೀವನ್ ಮಿಷನ್(ಜೆಜೆಎಂ) ಯೋಜನೆಯ ಕಾಮಗಾರಿಗಳು ಸಮರ್ಪಕವಾಗಿ ಪೂರ್ಣಗೊಳದೆ ಇರುವ ಕಾರಣದಿಂದಾಗಿ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಜನರಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಜೆಜೆಎಂ ಯೋಜನೆಯ ನಿಧಾನಗತಿಯ ಕಾಮಗಾರಿಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹಲವು ಕಡೆ ಕುಡಿಯುವ ನೀರಿಗೆ ತೊಂದರೆಯಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.ಅವರು ಮಂಗಳವಾರ ತಮ್ಮ ಕಚೇರಿಯಲ್ಲಿ ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಈ ಬಾರಿ ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ಮಟ್ಟದ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿಲ್ಲ. ಆದರೂ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ೧೨ ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿತ್ತು. ಇದಕ್ಕೆ ನೀರಿಲ್ಲದಿರುವ ಸಮಸ್ಯೆ ಕಾರಣವಲ್ಲ, ಬದಲಾಗಿ ಜಲಜೀವನ್ ಮಿಶನ್ ಯೋಜನೆಯ ಕಾಮಗಾರಿಗಳು ಕಾರಣವಾಗಿದೆ. ಜೆಜೆಎಂ ಯೋಜನೆಯಲ್ಲಿ ಟ್ಯಾಂಕ್ ನಿರ್ಮಾಣ, ಬೋರ್‌ವೆಲ್ ರಚನೆ, ಪೈಪ್‌ಲೈನ್ ಅಳವಡಿಕೆ, ಟ್ಯಾಪ್ ಅಳವಡಿಕೆ, ವಿದ್ಯುತ್ ಸಂಪರ್ಕ ಇವೇ ಮುಂತಾದ ಹಂತಗಳಿವೆ. ಅನೇಕ ಕಡೆ ಎಲ್ಲ ಕಾಮಗಾರಿ ನಡೆದಿದ್ದರೂ, ವಿದ್ಯುತ್ ಸಂಪರ್ಕ ಮಾಡಿಲ್ಲ. ಇದರಿಂದಾಗಿ ನೀರಿದ್ದರೂ ಪೂರೈಕೆ ಮಾಡಲು ಸಾಧ್ಯವಾಗಿಲ್ಲ ಎಂದರು.
ಕಳೆದ ೩ ವರ್ಷಗಳಿಂದ ಜೆಜೆಎಂ ಕಾಮಗಾರಿ ನಡೆಯುತ್ತಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ಚುನಾವಣಾ ನೀತಿ ಸಂಹಿತೆಯಿಂದಾಗಿ ಈ ಬಗ್ಗೆ ತನಗೆ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ಆ ಸಭೆಯಲ್ಲಿ ಪುತ್ತೂರು ತಾಲೂಕಿನ ವಿಚಾರವೂ ಚರ್ಚೆಗೆ ಬಂದಿದೆ. ಆದಾಗ್ಯೂ ಜೆಜೆಎಂ ಯೋಜನೆಯ ಅಸಮರ್ಪಕತೆಯನ್ನು ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಆಯಾ ಪಿಡಿಒಗಳು ಗಮನ ಹರಿಸಬೇಕು. ಸಮಸ್ಯೆ ಇದ್ದರೆ ಮೇಲಧಿಕಾರಿಗಳಿಗೆ ತಿಳಿಸಿ ಪರಿಹಾರ ಕಂಡುಕೊಳ್ಳಬೇಕು. ಬೋರ್‌ವೆಲ್ ಆಳಗೊಳಿಸುವುದು, ಹೊಸ ಬೋರ್‌ವೆಲ್ ಕೊರೆಯುವುದು ಸೇರಿದಂತೆ ಯಾವುದೇ ಅಗತ್ಯ ಕ್ರಮಗಳನ್ನು ಅವರು ಕೈಗೊಳ್ಳಬೇಕು. ಅಗತ್ಯ ಇರುವ ಕಡೆ ಟ್ಯಾಂಕರ್‌ಗಳಲ್ಲಿ ಕೂಡ ನೀರು ಸಾಗಾಟ ಮಾಡಲು ಅವಕಾಶವಿದೆ. ಕುಡಿಯುವ ನೀರಿನ ಸಮಸ್ಯೆಗೆ ಆಯಾ ಪಿಡಿಒಗಳನ್ನೇ ಹೊಣೆ ಮಾಡಲಾಗುತ್ತದೆ ಎಂದು ಶಾಸಕರು ಹೇಳಿದರು. ಸಿಎಂಗೆ ಮನವಿ: ಬರಪೀಡಿತ ಪರಿಹಾರ ಯೋಜನೆ ಅಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಮತ್ತು ಮಂಗಳೂರು ತಾಲೂಕಿಗೆ ತಲಾ ೧ ಕೋಟಿ ರೂ. ಪರಿಹಾರ ಮೊತ್ತವನ್ನು ಸರಕಾರ ನಿಗದಿ ಮಾಡಿದೆ. ಆದರೆ ಈ ತಾಲೂಕುಗಳಲ್ಲಿ ಅಷ್ಟು ಹಣ ಖರ್ಚಾಗಿಲ್ಲö. ಹೀಗಾಗಿ ಆ ಹಣವನ್ನು ಅಗತ್ಯವಿರುವ ಇತರ ತಾಲೂಕುಗಳಿಗೆ ಬಳಸಲು ಅವಕಾಶ ನೀಡುವಂತೆ ನಾನು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೇನೆ. ಇದಲ್ಲದೆ ಪುತ್ತೂರು ಸೇರಿದಂತೆ ಜಿಲ್ಲೆಯ ಪ್ರತೀ ತಾಲೂಕುಗಳಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತಲಾ ೫೦ ಲಕ್ಷ ರೂ. ಅನುದಾನ ನೀಡುವಂತೆಯೂ ಮನವಿ ಮಾಡಿದ್ದೇನೆ. ಇದಕ್ಕೆ ಮುಖ್ಯಮಂತ್ರಿಗಳು ಪೂರಕವಾಗಿ ಸ್ಪಂದಿಸಿದ್ದಾರೆ. ಈ ಹಣವನ್ನು ಕುಡಿಯುವ ನೀರಿಗೆ ಸಂಬಂಧಿಸಿದ ತುರ್ತು ಕಾಮಗಾರಿಗಳಿಗೆ ಬಳಸಲು ಅವಕಾಶವಿದೆ ಎಂದು ಶಾಸಕರು ತಿಳಿಸಿದರು.