ಕನ್ನಡಪ್ರಭ ವಾರ್ತೆ ಮಧುಗಿರಿ
ತಾಲೂಕಿನ ಕೊಂಡವಾಡಿ ಹಾಲು ಉತ್ಪಾದಕರ ಸಂಘಕ್ಕೆ ವಿತರಣೆ ಆಗಬೇಕಿದ್ದ ಸುಮಾರು 18 ಲಕ್ಷ ರು.ತಡೆ ಹಿಡಿಯಲು ಮಾಜಿ ಅಧ್ಯಕ್ಷ ಮತ್ತು ಕಾರ್ಯದರ್ಶಿ ನೇರ ಹೊಣೆಗಾರರು ಎಂದು ತುಮುಲ್ ನಿರ್ದೇಶಕ ಬಿ.ನಾಗೇಶ್‌ಬಾಬು ಆರೋಪಿಸಿದರು.ಮಂಗಳವಾರ ಮಧುಗಿರಿ-ಹಿಂದೂಪುರ ರಸ್ತೆಯಲ್ಲಿರುವ ಹಾಲು ಶೀಥಲೀಕರಣ ಕೇಂದ್ರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಹಾಲು ಉತ್ಪಾದಕರಲ್ಲದವರು ಕೆಲವು ದಿನಗಳ ಹಿಂದೆ ಇಲ್ಲಿನ ಸಂಘಕ್ಕೆ ಬಂದು ಹಣ ಪಾವತಿಸುವಂತೆ ಒತ್ತಾಯಿಸಿದ್ದರು. ಆದರೆ ಸಹಕಾರ ಸಂಘಗಳ ರಾಜ್ಯ ಸರ್ಕಾರದ ನಿರ್ದೇಶನದಂತೆ ಕೊಂಡವಾಡಿ ಹಾಲು ಉತ್ಪಾದಕರ ಸಂಘದ ವಿರುದ್ಧ ಕೆಲವರು ನ್ಯಾಯಾಲಯದ ಮೊರೆ ಹೋಗಿ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದರು. ನ್ಯಾಯಾಲಯವು ಆರೋಪ -ಪ್ರತ್ಯಾರೋಪಗಳನ್ನು ಪರಿಶೀಲಿಸಿ ಸಂಘಕ್ಕೆ ಆಡಳಿತಾಧಿಕಾರಿ ಮೂಲಕ ರೈತರಿಗೆ ಹಣ ವಿತರಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಪ್ರಸ್ತುತ 24 ಲಕ್ಷದ 20 ಸಾವಿರ ರುಗಳನ್ನು ಹಾಲು ಉತ್ಪಾದಕ ರೈತರ ಖಾತೆಗೆ ಜಮೆ ಮಾಡಲಾಗಿದೆ ಎಂದು ನಾಗೇಶಬಾಬು ಸ್ಪಷ್ಟಪಡಿಸಿದರು.ಕೊಂಡವಾಡಿ ಹಾಲು ಉತ್ಪಾದಕ ಸಂಘದ 5 ವರ್ಷಗಳ ಆಡಳಿತಾವಧಿ ಮುಕ್ತಾಯವಾಗಿದ್ದು, ಚುನಾವಣೆ ನಡೆಸುವಂತೆ ಸಹಕಾರ ಇಲಾಖೆ ಸೂಚಿಸಿತ್ತು. ನಂತರ ನಿಯಮನುಸಾರ ಆಡಳಿತಾಧಿಕಾರಿ ನೇಮಿಸಿತ್ತು. ಆದರೆ ಸಂಘದ ಕಾರ್ಯದರ್ಶಿ ಆಡಳಿತಾಧಿಕಾರಿಗೆ ಸಂಘದ ಪುಸ್ತಕ ,ಲೆಕ್ಕ ಪತ್ರಗಳು ನನ್ನ ಬಳಿ ಇಲ್ಲ, ಮಾಜಿ ಅಧ್ಯಕ್ಷರ ಬಳಿ ಇವೆ ಎಂದು ಹೇಳಿ, ಸಬೂಬು ಹೇಳಿಕೊಂಡು ಕಾಲಹರಣ ಮಾಡಿದ್ದೂ ಸಹ ಹಾಲಿನ ಹಣ ವಿತರಣೆಗೆ ಕಾರಣವಾಗಿತ್ತು ಎಂದು ದೂರಿದರು.
ರಾಜ್ಯ ಕೆಎಂಎಫ್ ನಿರ್ದೇಶಕ ಮೈದನಹಳ್ಳಿ ಕಾಂತರಾಜು ಮಾತನಾಡಿ, ನಿಯಮದಂತೆ 5 ವರ್ಷಗಳ ಕಾಲಾವಧಿ ಮುಗಿದ ನಂತರ ಆಡಳಿತಾಧಿಕಾರಿ ನೇಮಕವಾದರೂ ಸಹ ಕೊಂಡವಾಡಿ ಹಾಲು ಉತ್ಪಾದಕರ ಸಂಘಕ್ಕೆ ಮತ್ತೆ ಅಧ್ಯಕ್ಷನನ್ನಾಗಿ ಮುಂದುವರಿಸುವಂತೆ ಕೇಳಿರುವ ದೇಶದ ಏಕೈಕ ವ್ಯಕ್ತಿ ಎಂದು ವ್ಯಂಗ್ಯವಾಡಿದರು.ಮಾಜಿ ಸಚಿವ,ಶಾಸಕ ಕೆ.ಎನ್.ರಾಜಣ್ಣ ಅವರ ದೂರ ದೃಷ್ಠಿಯಿಂದ ತಾಲೂಕಿನ 172 ಸಹಕಾರಿ ಸಂಘಗಳಲ್ಲಿ ನೂತನ ತಂತ್ರಾಂಶ,ಆನ್‌ಲೈನ್ ಅಳವಡಿಸಿಕೊಂಡ ನಂತರ ಲಾಭಂಶ ಗಳಿಸುವಲ್ಲಿ ಸಂಘಗಳು ಮಂಚೋಣಿಯಲ್ಲಿವೆ. ಪ್ರತಿ ವರ್ಷ ನಡೆಯುವ ವಾರ್ಷಿಕ ಸಭೆಗಳಲ್ಲಿ ಖುದ್ದು ಭಾಗವಹಿಸಲಾಗಿದೆ. ರಾಜಣ್ಣ ಅವರು ಸಚಿವರಾಗಿದ್ದಾಗ 28 ಹಾಲು ಉತ್ಪಾದಕ ಸಂಘಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ತುಮುಲ್‌ನಿಂದ 5 ಲಕ್ಷ, ಕೆಎಂಎಫ್‌ನಿಂದ 5 ಲಕ್ಷ ಹಾಗೂ ಕೆಲವು ಸಂಘಗಳಿಗೆ ವಿಶೇಷ ಅನುದಾನ ಒದಗಿಸಿ ಕಟ್ಟಡ ನಿರ್ಮಿಸಲಾಗಿದೆ ಎಂದರು.
ವಿಎಸ್‌ಎಸ್‌ಎನ್ ಅಧ್ಯಕ್ಷ ಕೊಂಡವಾಡಿ ರಾಜ್ ಕುಮಾರ್ ಮಾತನಾಡಿ, ತಾಲೂಕಿನಲ್ಲಿ ಸುಮಾರು 54 ಹಾಲು ಉತ್ಪಾದಕ ಸಂಘಗಳಿಗೆ ನಿಯಮದಂತೆ ಆಡಳಿತಾಧಿಕಾರಿ ನೇಮಿಸಿದ್ದು, ಯಾವುದೇ ಸಂಘದವರು ನಮಗೆ ಹಾಲಿನ ವಾರದ ಹಣ ಕೊಟ್ಟಲವೆಂದು ಆರೋಪಿಸಿಲ್ಲ, ಆದರೆ ಕೊಂಡವಾಡಿ ಗ್ರಾಮದ ಹಾಲು ಉತ್ಪಾದಕ ಸಂಘಕ್ಕೆ ಮಾತ್ರ ಸಮಸ್ಯೆ ಎದುರಾಗಿದೆ ಎಂದರೆ ಹೇಗೆ,? ಬಿ.ನಾಗೇಶ್ ಬಾಬು ನಿರ್ದೇಶಕರಾದ ನಂತರ ವಿನಾ ಕಾರಣ ಅವರ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ರಾಜಕೀಯ ವೈಷಮ್ಯದಿಂದ ಹಾಲು ಉತ್ಪಾದಕರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ ಎಂದು ಚಂದ್ರಶೇಖರ್ ವಿರುದ್ಧ ಕಿಡಿಕಾರಿದರು.ಗೋಷ್ಠಿಯಲ್ಲಿ ರಾಧಾಮಣಿ, ನಾಗಣ್ಣ, ತಿಪ್ಪೇಸ್ವಾಮಿ, ಸದಾಶಿವ, ರವಿಕುಮಾರ್, ರಾಜಶೇಖರ್, ಪ್ರಸನ್ನಕುಮಾರ್, ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿನಾರಾಯಣರೆಡ್ಡಿ ಇತರರಿದ್ದರು.