ಕನ್ನಡಪ್ರಭ ವಾರ್ತೆ ಶಿವಮೊಗ್ಗ
ವಸತಿ ಯೋಜನೆಗಾಗಿ ಹರಮಘಟ್ಟದ ಕೃಷಿಕ ನಂದಾಯಪ್ಪ ಅವರ ಒಂದು ಎಕರೆ ಜಮೀನನ್ನು 1992ರಲ್ಲಿ ಸರ್ಕಾರ ವಶಕ್ಕೆ ಪಡೆದಿತ್ತು. ಇದಕ್ಕೆ 22 ಲಕ್ಷ ರು. ಪರಿಹಾರ ನೀಡುವುದಾಗಿ ತಿಳಿಸಿದ್ದ ಸರ್ಕಾರ ಕೇವಲ 9 ಲಕ್ಷ ರು.ನೀಡಿತ್ತು. ಬಾಕಿ ಹಣಕ್ಕಾಗಿ ರೈತ ನಂದಾಯಪ್ಪ ಕಚೇರಿಗೆ ಅಲೆದಾಡಿದರು ಫಲ ಸಿಕ್ಕಿರಲಿಲ್ಲ. ಕೊನೆಗೆ ನಂದಾಯಪ್ಪ ಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಎರಡನೇ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ 95,88,283 ಪರಿಹಾರವನ್ನು ಪಾವತಿಸುವಂತೆ ಸೂಚಿಸಿತ್ತು.
ನ್ಯಾಯಾಲಯದ ಆದೇಶವಾಗಿದ್ದರೂ, ಪರಿಹಾರ ನೀಡದ ಹಿನ್ನೆಲೆ ಜಿಲ್ಲಾಧಿಕಾರಿ ಬಳಸುತ್ತಿರುವ ಕೆಎ 14 ಜಿ 1234 ನಂಬರ್‌ನ ಕಾರು ಜಪ್ತಿ ಮಾಡುವಂತೆ ಶಿವಮೊಗ್ಗದ ಎರಡನೇ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ.ಒಳಗಡೆ ಸಚಿವರ ಸಭೆ: ಜಪ್ತಿಗೆ ಬಂದ ಕೋಟ್ ಅಮೀನರು: ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅಧ್ಯಕ್ಷತೆಯಲ್ಲಿ ಅಡಿಕೆ ಬೆಳೆಗೆ ಕೊಳೆ ರೋಗ, ಎಲೆ ಚುಕ್ಕೆ ರೋಗಗಳ ಕುರಿತಂತೆ ಸಂಬಂಧಿಸಿದ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಹಾಗೂ ಸುದ್ದಿಗೋಷ್ಠಿ ನಡೆಯುತ್ತಿತ್ತು. ಅದೇ ಸಂದರ್ಭದಲ್ಲಿ ಕೋರ್ಟ್ ಅಮೀನರು ನ್ಯಾಯಾಲಯದ ಆದೇಶ ಪ್ರತಿ ಹಿಡಿದುಕೊಂಡು ಜಿಲ್ಲಾಧಿಕಾರಿಗಳ ಕಾರು ಜಪ್ತಿಗೆ ಬಂದಿದ್ದರು.