ಪಾಲಿಕೆ ಸಿಬ್ಬಂದಿ ಸಂಬಳ ವಿಳಂಬ-ಕೈ, ಕಮಲಕ್ಕೆ ಧಿಕ್ಕಾರ..!

KannadaprabhaNewsNetwork | Published : Mar 29, 2025 12:33 AM

ಸಾರಾಂಶ

ಹು.ಧಾ. ಮಹಾನಗರ ಪಾಲಿಕೆಯ ಅಧಿಕಾರಿಗಳು ಸೇರಿದಂತೆ ವಿವಿಧ ಹಂತದ ನೌಕರರಿಗೆ ಕಳೆದ ಮೂರು ತಿಂಗಳಿಂದ ವೇತನ ವಿಳಂಬವಾಗಿರುವ ಕೈ ಸದಸ್ಯರು ಬಿಜೆಪಿ ವಿರುದ್ಧ, ಬಿಜೆಪಿ ಸದಸ್ಯರು ರಾಜ್ಯ ಸರ್ಕಾರದ ವಿರುದ್ಧ ಪರಸ್ಪರ ಧಿಕ್ಕಾರ ಕೂಗಿಕೊಂಡರು.

ಧಾರವಾಡ: ಹು-ಧಾ ಮಹಾನಗರ ಪಾಲಿಕೆಯ ಅಧಿಕಾರಿಗಳು ಸೇರಿದಂತೆ ವಿವಿಧ ಹಂತದ ನೌಕರರಿಗೆ ಕಳೆದ ಮೂರು ತಿಂಗಳಿಂದ ವೇತನ ವಿಳಂಬವಾಗಿರುವ ಬಗ್ಗೆ ಮಾಜಿ ಮೇಯರ್‌ ಶಿವು ಹಿರೇಮಠ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದಾಗ, ಜೋರು ಚರ್ಚೆಗೆ ಬಂದು ಕೈ ಸದಸ್ಯರು ಬಿಜೆಪಿ ವಿರುದ್ಧ, ಬಿಜೆಪಿ ಸದಸ್ಯರು ರಾಜ್ಯ ಸರ್ಕಾರದ ವಿರುದ್ಧ ಪರಸ್ಪರ ಧಿಕ್ಕಾರ ಕೂಗಿಕೊಂಡರು.

ಪ್ರತಿ ತಿಂಗಳು ಸಂಬಳಕ್ಕಾಗಿ ಪಾಲಿಕೆ ಆಯುಕ್ತರು ಸೇರಿದಂತೆ ಅಧಿಕಾರಿಗಳು, ನೌಕರರು ಹಾಗೂ ಪೌರ ಕಾರ್ಮಿಕರು ಪರದಾಡುತ್ತಿದ್ದಾರೆ. ಮಕ್ಕಳ ಶಿಕ್ಷಣ, ಮನೆ ಖರ್ಚು, ಇಎಂಐ ಕಟ್ಟುವುದು ಸೇರಿದಂತೆ ಅನೇಕ ಆರ್ಥಿಕ ತೊಂದರೆಗಳಾಗುತ್ತಿದ್ದು, ಒತ್ತಡದಲ್ಲಿ ಹೇಗೆ ಕೆಲಸ ಮಾಡಬೇಕೆಂದು ಶಿವು ಹಿರೇಮಠ ಪ್ರಸ್ತಾಪಿಸಿದರು. ಆಗ, ಸಮಜಾಯಿಸಿ ನೀಡಿದ ಪಾಲಿಕೆ ಹಣಕಾಸು ಅಧಿಕಾರಿಗಳು, ಪೌರ ಕಾರ್ಮಿಕರಿಗೆ ಹಾಗೂ ನೇರ ವೇತನ ಮತ್ತು ಹೊರಗುತ್ತಿಗೆ ಸಿಬ್ಬಂದಿಗೆ ಫೆಬ್ರವರಿ ವರೆಗೆ ಸಂಬಳ ನೀಡಿದ್ದೇವೆ. ಕಾಯಂ ಸಿಬ್ಬಂದಿಗೂ ಜನವರಿ ವರೆಗೆ ನೀಡಲಾಗಿದೆ ಎಂದರು.

ಇದಕ್ಕೆ ಸಿಟ್ಟಾದ ಹಿರಿಯ ಸದಸ್ಯ ವೀರಣ್ಣ ಸವಡಿ, ಸರ್ಕಾರದಿಂದ ಬರಬೇಕಾದ ಅನುದಾನ ಬಂದಿಲ್ಲ. ಅದಕ್ಕಾಗಿ ಪಾಲಿಕೆ ಸಾಮಾನ್ಯ ನಿಧಿಯ ಹಣವನ್ನು ಸಂಬಳಕ್ಕೆ ಬಳಸಿಕೊಂಡಿದ್ದೀರಿ. ಇದರಿಂದಾಗಿ ಕಾಮಗಾರಿ ಮಾಡಿದ ಗುತ್ತಿಗೆದಾರರೂ ಪರದಾಡುವಂತಾಗಿದೆ. ಸರ್ಕಾರ ಏತಕ್ಕಾಗಿ ಸಂಬಳಕ್ಕೆ ಅನುದಾನ ನೀಡಿಲ್ಲ ಎಂದು ದಬಾಯಿಸಿದರು. ಆಗ, ಮೇಯರ್‌ ರಾಮಣ್ಣ ಬಡಿಗೇರ ಅವರು ಮಾತನಾಡಿ, ಈ ಕುರಿತಾಗಿ ಮುಖ್ಯಮಂತ್ರಿಗಳು, ಉಸ್ತುವಾರಿ ಸಚಿವರು ಹಾಗೂ ಶಾಸಕ ಅಬ್ಬಯ್ಯ ಪ್ರಸಾದ ಅವರಿಗೆ ಪತ್ರ ಬರೆಯಲಾಗಿದೆ. ಯಾರೂ ತಮಗೆ ಸಮಯ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸಂಬಳ ನೀಡದ ರಾಜ್ಯ ಸರ್ಕಾರ ದಿವಾಳಿ ಎದ್ದಿದೆ ಎಂದು ಬಿಜೆಪಿ ಸದಸ್ಯರು ಧಿಕ್ಕಾರ ಕೂಗಿದರು. ಇದರಿಂದ ಕುಪಿತರಾದ ಕೈ ಸದಸ್ಯರು ಎದ್ದು ಬಿಜೆಪಿಗೆ ಧಿಕ್ಕಾರ ಎಂದರು. ಎರಡು ಪಕ್ಷಗಳ ಸದಸ್ಯರು ಪರಸ್ಪರ ವಾಕ್ಸಮರ ನಡೆಯಿತು. ಗದ್ದಲ ಶುರುವಾದ ಹಿನ್ನೆಲೆಯಲ್ಲಿ ಮೇಯರ್ ಅವರು ಸಭೆಯನ್ನು ಮುಂದೂಡಬೇಕಾಯಿತು. ಯಾರ್‍ಯಾರಿಂದಲೋ ಭೂಮಿಪೂಜೆ

ಪಾಲಿಕೆಯ ಧಾರವಾಡದ 1ರಿಂದ 9ನೇ ವಾರ್ಡ್‌ಗಳಲ್ಲಿ ಕಾಮಗಾರಿಗೆ ಚಾಲನೆ ನೀಡುವಾಗ ಪಾಲಿಕೆ ಅಧಿಕಾರಿಗಳು ಶಿಷ್ಟಾಚಾರ ಪಾಲಿಸುತ್ತಿಲ್ಲ. ಯಾರ್‍ಯಾರೋ ಬಂದು ಕಾಮಗಾರಿಗೆ ಭೂಮಿಪೂಜೆ ಮಾಡುತ್ತಿದ್ದಾರೆ ಎಂದು ಅಪರೋಕ್ಷವಾಗಿ ಶಾಸಕ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುರಿತು ಪ್ರಸ್ತಾಪಿಸಿದರು. ಬರೀ ಶಾಸಕರು, ಪಾಲಿಕೆ ಸದಸ್ಯರು ಮಾತ್ರವಲ್ಲದೇ ಹಿರಿಯರು ಸಹ ಭೂಮಿಪೂಜೆ ಮಾಡುತ್ತಾರೆ. ಅದೇ ರೀತಿ ಹಿರಿಯರು ಪೂಜೆ ಮಾಡಿದರೆ ತಪ್ಪೇನು ಎಂದು ಕೈ ಸದಸ್ಯರು ಪ್ರತಿಕ್ರಿಯೆ ನೀಡಿದರು. ಈ ಕುರಿತು ತೀವ್ರ ವಾದ-ವಿವಾದ ಶುರುವಾದಾಗ, ಇನ್ಮುಂದೆ ಹೀಗಾಗದಂತೆ ಎಚ್ಚರ ವಹಿಸಲು, ವಲಯ ಆಯುಕ್ತರನ್ನು ಜವಾಬ್ದಾರಿಯನ್ನಾಗಿ ಮಾಡಲು ಮೇಯರ್‌ ಆಯುಕ್ತರಿಗೆ ಸೂಚನೆ ನೀಡಿ ವಿಷಯ ತಣ್ಣಗಾಗಿಸಿದರು.

ರಸಾಯನಿಕ ನೀರು

ಗಾಮನಗಟ್ಟಿಯ ಕೈಗಾರಿಕಾ ಪ್ರದೇಶದಿಂದ ರಸಾಯನಿಕ ನೀರು ಹರಿದು ಬಂದು ಹಳ್ಳಕ್ಕೆ ಸೇರುತ್ತಿದ್ದು, ದನಕರುಗಳು ಸೇರಿದಂತೆ ಜನರೂ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಸಾಮಾನ್ಯ ಸಭೆಯಲ್ಲಿ ಹಿರಿಯ ಸದಸ್ಯ ಚಂದ್ರಶೇಖರ ಮನಗುಂಡಿ ಗಮನ ಸೆಳೆದರು. ಕೈಗಾರಿಕೆ ಇಲಾಖೆ ಉಪ ನಿರ್ದೇಶಕರು, ಪಾಲಿಕೆ ಆರೋಗ್ಯಾಧಿಕಾರಿಗಳು ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಜಂಟಿಯಾಗಿ ಸರ್ವೆ ಮಾಡಿ ಸಮಸ್ಯೆಗೆ ಪರಿಹಾರ ಒದಗಿಸುವುದಾಗಿ ಪಾಲಿಕೆ ಆಯುಕ್ತ ಡಾ. ರುದ್ರೇಶ ಗಾಳಿ ಸ್ಪಷ್ಟಪಡಿಸಿದರು.

Share this article