ಗಾಳಿಬೀಡು ರಸ್ತೆ ಕಾಮಗಾರಿ ವಿಳಂಬ: ಗ್ರಾಮಸ್ಥರ ಪ್ರತಿಭಟನೆ

KannadaprabhaNewsNetwork |  
Published : Nov 17, 2026, 02:30 AM IST
ಚಿತ್ರ :  14ಎಂಡಿಕೆ4 : ಗ್ರಾಮಸ್ಥರಿಂದ ರಸ್ತೆ ತಡೆ ನಡೆಸಿ ಪ್ರತಿಭಟನೆ  | Kannada Prabha

ಸಾರಾಂಶ

ಗಾಳಿಬೀಡು ಗ್ರಾಮದ ಬಗ್ಗೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಮಡಿಕೇರಿ ನಗರಕ್ಕೆ ಕುಡಿಯುವ ನೀರು ಪೂರೈಸಲು ನಮ್ಮ ಗ್ರಾಮದ ನೀರು ಬೇಕು. ಅಗ್ನಿಶಾಮಕ ದಳಕ್ಕೂ ಇಲ್ಲಿಂದಲೇ ನೀರು ಪಡೆಯಲಾಗುತ್ತದೆ. ಆದರೆ, ಹಲವು ವರ್ಷಗಳಿಂದ ರಸ್ತೆ ಸಮಸ್ಯೆಯಿಂದ ಗ್ರಾಮಸ್ಥರು ಕಂಗೆಟ್ಟಿದ್ದಾರೆ ಎಂದು ಗಾಳಿಬೀಡು ಗ್ರಾಮಸ್ಥ ದಿಶಾಂತ್ ಹೇಳಿದರು.

ಮಡಿಕೇರಿ : ಗಾಳಿಬೀಡು ಗ್ರಾಮದ ಬಗ್ಗೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಮಡಿಕೇರಿ ನಗರಕ್ಕೆ ಕುಡಿಯುವ ನೀರು ಪೂರೈಸಲು ನಮ್ಮ ಗ್ರಾಮದ ನೀರು ಬೇಕು. ಅಗ್ನಿಶಾಮಕ ದಳಕ್ಕೂ ಇಲ್ಲಿಂದಲೇ ನೀರು ಪಡೆಯಲಾಗುತ್ತದೆ. ಆದರೆ, ಹಲವು ವರ್ಷಗಳಿಂದ ರಸ್ತೆ ಸಮಸ್ಯೆಯಿಂದ ಗ್ರಾಮಸ್ಥರು ಕಂಗೆಟ್ಟಿದ್ದಾರೆ ಎಂದು ಗಾಳಿಬೀಡು ಗ್ರಾಮಸ್ಥ ದಿಶಾಂತ್ ಹೇಳಿದರು.

ಗಾಳಿಬೀಡು ರಸ್ತೆ ಕಾಮಗಾರಿ ವಿಳಂಬವಾಗಿರುವುದನ್ನು ಖಂಡಿಸಿ ಗಾಳಿಬೀಡು, ಕೆ.ನಿಡುಗಣೆ ಹಾಗೂ ವಣಚಲು ಗ್ರಾಮಸ್ಥರ ರಸ್ತೆ ತಡೆ, ಪ್ರತಿಭಟನೆಯಲ್ಲಿ ಮಾತನಾಡಿದರು.

ಗಾಳಿಬೀಡು ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಒಂದು ವರ್ಷ ಕಳೆದರೂ ಕೆಲಸ ಆರಂಭವಾಗಿಲ್ಲ. ಸಮಸ್ಯೆ ಬಗೆಹರಿಸುವಂತೆ ಪ್ರತಿಭಟನೆಗೆ ಮುಂದಾದಾಗ ಪೊಲೀಸರು ಹೋರಾಟದಿಂದ ಹಿಂದೆ ಸರಿಯುವಂತೆ ಒತ್ತಡ ಹೇರುತ್ತಾರೆ. ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಹಾಗೂ ಶಾಸಕರು ಸ್ಥಳಕ್ಕೆ ಬರಬೇಕು. ಅಧಿಕಾರಿಗಳು ಕೂಟುಹೊಳೆವರೆಗೆ ಪಾದಯಾತ್ರೆ ನಡೆಸಿ ರಸ್ತೆಯ ದುಸ್ಥಿತಿ ಅರಿಯಲಿ. ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಯಾರಾದರೂ ಪ್ರಾಣ ಕಳೆದುಕೊಂಡರೆ ಮಾತ್ರ ಅಧಿಕಾರಿಗಳು ಸ್ಥಳಕ್ಕೆ ಬರುತ್ತಾರೆಯೇ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಹೊರ ವಲಯದ ಜಿ.ಪಂ. ಜಂಕ್ಷನ್ ಬಳಿ ಎರಡೂವರೆ ಗಂಟೆಗೂ ಅಧಿಕ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ನಿರ್ಲಕ್ಷ್ಯ ಖಂಡನೀಯ: ರಸ್ತೆ ಕಾಮಗಾರಿಗೆ ಚಾಲನೆ ನೀಡಿ ವರ್ಷ ಕಳೆದೂ ರಸ್ತೆ ಕಾಮಗಾರಿ ಆರಂಭವಾಗಿರುವ ಬಗ್ಗೆ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ರಸ್ತೆಯ ದುಃಸ್ಥಿತಿಯಿಂದ ಹಿರಿಯರು, ಮಹಿಳೆಯರು ಹಾಗೂ ಮಕ್ಕಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಧೂಳಿನಿಂದ ಸಂಚಾರ ದುಸ್ತರವಾಗಿದ್ದು, ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ. ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ. ಮಡಿಕೇರಿ ನಗರಕ್ಕೆ ಕುಡಿಯುವ ನೀರು ಪೂರೈಸುವ ನಮ್ಮ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ನಿರ್ಲಕ್ಷ್ಯ ತೋರುತ್ತಿರುವುದು ಖಂಡನೀಯ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಕೆ.ಟಿ. ಪ್ರಭು ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡು, ಭರವಸೆಗಳನ್ನು ಲಿಖಿತ ರೂಪದಲ್ಲಿ ನೀಡುವಂತೆ ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಪ್ರಭು, ಟಾರ್ ದರ ಹೆಚ್ಚಳದ ಹಿನ್ನೆಲೆಯಲ್ಲಿ ಗುತ್ತಿಗೆದಾರ ಕಾಮಗಾರಿ ಆರಂಭಿಸಲು ವಿಳಂಬ ಮಾಡಿದ್ದಾರೆ. ಈ ಸಂಬಂಧ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದ್ದು, ಮರುಟೆಂಡರ್ ಪ್ರಕ್ರಿಯೆ ಆರಂಭಿಸಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಮುಂದಿನ ವಾರ ಪ್ರಕ್ರಿಯೆ ಆರಂಭಿಸಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.ಆದರೆ, ಸಮಜಾಯಿಷಿ ಮತ್ತು ಭರವಸೆಗಳಿಗೆ ಒಪ್ಪದ ಗ್ರಾಮಸ್ಥರು ಸ್ಥಳಕ್ಕೆ ಶಾಸಕರು ಆಗಮಿಸಬೇಕೆಂದು ಪಟ್ಟುಹಿಡಿದರು. ಅಂತಿಮವಾಗಿ ೧೬ರಂದು ಶಾಸಕರ ಸಮ್ಮುಖದಲ್ಲಿ ಇಂಜಿನಿಯರ್, ಗುತ್ತಿಗೆದಾರರು ಹಾಗೂ ಗ್ರಾಮಸ್ಥರ ಸಭೆ ನಡೆಸಿ, ಎರಡು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ಕುರಿತು ಲಿಖಿತ ಮುಚ್ಚಳಿಕೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದ ಗ್ರಾಮಸ್ಥರು, ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಮತ್ತೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.ಕೆ.ನಿಡುಗಣೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಡೀನ್ ಬೋಪಣ್ಣ, ವಕೀಲರಾದ ಯಾಲದಾಳು ಮನೋಜ್ ಬೋಪಯ್ಯ, ಕಪಿಲ್, ಜಯಂತಿಶೆಟ್ಟಿ, ಪ್ರಸನ್ನ ಭಟ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧರ್ಮ ಉಳಿದರೆ ಸಮಾಜದ ಉಳಿವು
ಅವ್ಯವಸ್ಥೆ ಕಂಡು ಗ್ರಂಥಪಾಲಕನಿಗೆ ತರಾಟೆ