ನದಿ ಯೋಜನೆಗಳ ಕುರಿತು ಮಹತ್ವದ ಚರ್ಚೆ: ಕೇಂದ್ರ ಸಚಿವರಿಗೆ ಮನವಿ
ಜಿಲ್ಲೆಯ ಪ್ರಮುಖ ಜೀವ ನದಿಗಳಾದ ಅಘನಾಶಿನಿ ಹಾಗೂ ಬೇಡ್ತಿ ನದಿ ಜೋಡಣೆ ವಿರೋಧಿಸಿ, ಜಿಲ್ಲೆಯ ಜನಪ್ರತಿನಿಧಿಗಳನ್ನು ಒಳಗೊಂಡ ಬೇಡ್ತಿ-ಅಘನಾಶಿನಿ ಕೊಳ್ಳ ಸಮಿತಿ ಪದಾಧಿಕಾರಿಗಳ ನಿಯೋಗ ಕೇಂದ್ರ ಸರ್ಕಾರವನ್ನು ಭೇಟಿಯಾಗಿ ಉದ್ದೇಶಿತ ಯೋಜನೆ ಕೈಬಿಡುವಂತೆ ಒತ್ತಾಯಿಸಿದೆ.
ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ ಹಾಗೂ ಪರಿಸರ ಸಚಿವ ಭೂಪೇಂದ್ರ ಯಾದವ ಮತ್ತು ಮಂತ್ರಾಲಯದ ಅಧಿಕಾರಿಗಳನ್ನು ಭೇಟಿಯಾಗಿ ಪ್ರಸ್ತಾಪಿತ ನದಿ ತಿರುವು ಯೋಜನೆಗಳಿಂದ ಆಗಬಹುದಾದ ಪರಿಸರ ಹಾನಿ ಮತ್ತು ಜನರ ಆತಂಕಗಳ ಕುರಿತು ವಿಸ್ತೃತವಾಗಿ ಚರ್ಚಿಸಿತು.ಸಭೆಯಲ್ಲಿ ಬೇಡ್ತಿ-ಹಿರೇವಡ್ಡತ್ತಿ ಹಾಗೂ ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಗಳ ತಾಂತ್ರಿಕ ಮತ್ತು ಪರಿಸರ ಪೂರಕ ಅಂಶಗಳ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಅಘನಾಶಿನಿ-ವೇದಾವತಿ ಯೋಜನೆಯಿಂದ ಸುಮಾರು 1.20 ಲಕ್ಷಕ್ಕೂ ಹೆಚ್ಚು ಮರಗಳು ನಾಶವಾಗಲಿವೆ ಮತ್ತು ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ವಲಯಕ್ಕೆ ಧಕ್ಕೆಯಾಗಲಿದೆ ಎಂದು ಬೇಡ್ತಿ-ಅಘನಾಶಿನಿ ಕೊಳ್ಳ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಸಚಿವರ ಗಮನಕ್ಕೆ ತಂದರು.
ಉತ್ತರ ಕನ್ನಡ ಜಿಲ್ಲೆಯ ಜನತೆ ಮತ್ತು ರೈತರು ಈ ಯೋಜನೆಗಳನ್ನು ತೀವ್ರವಾಗಿ ವಿರೋಧಿಸುತ್ತಿದ್ದು, ಯಾವುದೇ ಕಾರಣಕ್ಕೂ ಸ್ಥಳೀಯರ ಒಪ್ಪಿಗೆಯಿಲ್ಲದೆ ಯೋಜನೆ ಮುಂದುವರಿಸಬಾರದು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮತ್ತು ಇತರ ಜನಪ್ರತಿನಿಧಿಗಳು ಒತ್ತಾಯಿಸಿದರು.
ಪರಿಸರ ಸಚಿವ ಭೂಪೇಂದ್ರ ಯಾದವ, ನಮ್ಮ ಆತ್ಮಸಾಕ್ಷಿಯಾಗಿ ಪಶ್ಚಿಮ ಘಟ್ಟಗಳ ಸಮೃದ್ಧ ಪರಿಸರ ಸಂರಕ್ಷಣೆ ಮಾಡೋಣ. ನಾನು ಪಶ್ಚಿಮ ಘಟ್ಟದ ಸಂರಕ್ಷಣೆಗೆ ಬದ್ಧನಾಗಿರುವ ವ್ಯಕ್ತಿ. ಉಡುಪಿಯಿಂದ ಕಾರವಾರದವರೆಗಿನ ಪರಿಸರವನ್ನು ಪ್ರತ್ಯಕ್ಷವಾಗಿ ನೋಡಿದ್ದೇನೆ. ಪಶ್ಚಿಮ ಘಟ್ಟ ಬೇರೆಕಡೆ ಸಿಗಲು ಸಾಧ್ಯವಿಲ್ಲ. ಎಲ್ಲ ನದಿಗಳ ಉಗಮಸ್ಥಾನ ಪಶ್ಚಿಮ ಘಟ್ಟಗಳು. ಹಿಮಾಲಯದ ನಂತರ ಅತಿ ಹೆಚ್ಚು ಆಧ್ಯಾತ್ಮಿಕ ಜಾಗೃತಿ ಇರುವ ಸ್ಥಳ ಎಂದು ಅನಿಸಿಕೆ ವ್ಯಕ್ತಪಡಿಸಿದರು.