ದೆಹಲಿ ಬಾಂಬ್‌ ಸ್ಫೋಟ: ಭದ್ರಾವತಿಯಲ್ಲಿ ಪ್ರತಿಭಟನೆ

KannadaprabhaNewsNetwork |  
Published : Nov 13, 2025, 02:15 AM IST
ನವದೆಹಲಿಯ ಕೆಂಪು ಕೋಟೆ ಸಮೀಪ ಉಗ್ರರ ಬಾಂಬ್ ಸ್ಫೋಟ ಘಟನೆಯನ್ನು ಖಂಡಿಸಿ ಭದ್ರಾವತಿಯಲ್ಲಿ ಬುಧವಾರ ಯುವ ಕಾಂಗ್ರೆಸ್ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ನವದೆಹಲಿಯ ಐತಿಹಾಸಿಕ ಸ್ಥಳ ಕೆಂಪು ಕೋಟೆ ಸಮೀಪ ಉಗ್ರರ ಬಾಂಬ್‌ ಸ್ಫೋಟಕ್ಕೆ ಅಮಾಯಕರು ಪ್ರಾಣ ಕಳೆದುಕೊಂಡಿದ್ದು, ಈ ಘಟನೆಯನ್ನು ಜಿಲ್ಲಾ ಯುವ ಕಾಂಗ್ರೆಸ್ ಖಂಡಿಸುತ್ತದೆ. ಅಲ್ಲದೆ ತಕ್ಷಣ ಅಸಮರ್ಥ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವ ಮೂಲಕ ದೇಶದೊಳಗೆ ಉಗ್ರರು ಪ್ರವೇಶಿಸದಂತೆ ರಕ್ಷಣಾ ವ್ಯವಸ್ಥೆ ಬಲಪಡಿಸಬೇಕೆಂದು ಆಗ್ರಹಿಸುತ್ತದೆ ಎಂದು ಯುವ ಕಾಂಗ್ರೆಸ್ ಮುಖಂಡರು ಹೇಳಿದರು.

ಭದ್ರಾವತಿ: ನವದೆಹಲಿಯ ಐತಿಹಾಸಿಕ ಸ್ಥಳ ಕೆಂಪು ಕೋಟೆ ಸಮೀಪ ಉಗ್ರರ ಬಾಂಬ್‌ ಸ್ಫೋಟಕ್ಕೆ ಅಮಾಯಕರು ಪ್ರಾಣ ಕಳೆದುಕೊಂಡಿದ್ದು, ಈ ಘಟನೆಯನ್ನು ಜಿಲ್ಲಾ ಯುವ ಕಾಂಗ್ರೆಸ್ ಖಂಡಿಸುತ್ತದೆ. ಅಲ್ಲದೆ ತಕ್ಷಣ ಅಸಮರ್ಥ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವ ಮೂಲಕ ದೇಶದೊಳಗೆ ಉಗ್ರರು ಪ್ರವೇಶಿಸದಂತೆ ರಕ್ಷಣಾ ವ್ಯವಸ್ಥೆ ಬಲಪಡಿಸಬೇಕೆಂದು ಆಗ್ರಹಿಸುತ್ತದೆ ಎಂದು ಯುವ ಕಾಂಗ್ರೆಸ್ ಮುಖಂಡರು ಹೇಳಿದರು.

ಕೆಂಪು ಕೋಟೆ ಸಮೀಪ ಉಗ್ರರ ಬಾಂಬ್ ಸ್ಫೋಟ ಘಟನೆ ಖಂಡಿಸಿ ಬುಧವಾರ ಯುವ ಕಾಂಗ್ರೆಸ್ ತಾಲೂಕು ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಮುಖರಾದ ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಮೊಹಮ್ಮದ್ ಶಫಿ, ನಗರ ಅಧ್ಯಕ್ಷ ಅಭಿಷೇಕ, ನಗರಸಭೆ ಸದಸ್ಯ ಚನ್ನಪ್ಪ, ಮುಖಂಡರಾದ ಎಸ್.ಮಂಜುನಾಥ್, ನದೀಮ್ ಬಾಷಾ, ತಾಲೂಕು ಬಗರ್ ಹುಕುಂ ಸಮಿತಿ ಸದಸ್ಯ ಮುರುಗೇಶ್ ಸೇರಿದಂತೆ ಇನ್ನಿತರರು, ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಉಗ್ರರ ಕೃತ್ಯಗಳು ಹೆಚ್ಚಾಗುತ್ತಿದೆ ಎಂದು ದೂರಿದರು.

೨೦೧೯ರಲ್ಲಿ ಪುಲ್ವಾಮ ದಾಳಿಯಿಂದ ಅನೇಕ ಸೈನಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದರು. ೨೦೨೫ರಲ್ಲಿ ಕಾಶ್ಮೀರದ ಪಹಲ್ಗಾಮ್ ಉದ್ಯಾನವನದಲ್ಲಿ ೨೬ ಅಮಾಯಕ ನಾಗರಿಕರನ್ನು ಉಗ್ರರು ಹತ್ಯೆ ಮಾಡಿದ್ದರು. ಆದರೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕೃತ್ಯಗಳಿಗೆ ದೇಶದ ಭದ್ರತಾ ವೈಫಲ್ಯಗಳೇ ಕಾರಣಗಳಾಗಿವೆ. ಕೇಂದ್ರ ಸರ್ಕಾರ ದೇಶದ ನಾಗರಿಕರ ಸುರಕ್ಷತೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಗೃಹ ಸಚಿವ ಅಮಿತ್ ಶಾರವರು ಸಚಿವರಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆಂದು ದೂರಿದರು.

ಕೇಂದ್ರ ಸರ್ಕಾರ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದು ತಮ್ಮ ತಪ್ಪನ್ನು ಮರೆಮಾಚಲು ಯತ್ನಿಸುತ್ತಿದೆ. ಚುನಾವಣೆ ಸಂದರ್ಭದಲ್ಲಿಯೇ ಈ ರೀತಿ ಕೃತ್ಯಗಳು ನಡೆಯುತ್ತಿರುವುದು ಕೌತುಕವಾಗಿದ್ದು, ಕೆಂಪು ಕೋಟೆ ಸಮೀಪ ಉಗ್ರರ ಬಾಂಬ್ ಸ್ಫೋಟ ಘಟನೆಯನ್ನು ಪಾರದರ್ಶಕವಾಗಿ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಇದೇ ವೇಳೆ ರಾಷ್ಟ್ರಪತಿಗೆ ತಹಸೀಲ್ದಾರ್ ಮೂಲಕ ಮನವಿಸಲ್ಲಿಸಲಾಯಿತು.

ಯುವ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಮಸೂದ್, ಮಂಜುನಾಥ್ ಕೊಯ್ಲಿ, ರವಿ, ಇರ್ಫಾನ್, ಸನಾನ್, ಬಿ. ಗಂಗಾಧರ್, ಪ್ರಕಾಶ್ ರಾವ್, ಪಾರ್ವತಿ, ಕೆ.ರುಕ್ಮಿಣಿ, ಬೇಬಿ ಚಂದ್ರಶೇಖರ್ ಸೇರಿದಂತೆ ಯುವ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಪಾಲ್ಗೊಂಡಿದ್ದರು.

PREV

Recommended Stories

''44 ವರ್ಷದ ದುಡಿಮೆಗೆ ಸಚಿವಗಿರಿಯ ಪ್ರತಿಫಲ ಬಯಸಿದ್ದೇನೆ''
ವ್ಯಕ್ತಿತ್ವ ವಿಕಸನಕ್ಕೆ ಪ್ರತಿಭಾಕಾರಂಜಿ ಪೂರಕ