ಮಂಗಳೂರು; ಚುನಾವಣಾ ಅಕ್ರಮಗಳ ವಿರುದ್ಧ ಕಾಂಗ್ರೆಸ್ ಆರಂಭಿಸಿರುವ ಜನಾಂದೋಲನ ಸಂವಿಧಾನ ದಿನದ ವರೆಗೂ ಮುಂದುವರಿಯಲಿದೆ. ನ.1ರಂದು ಹೊಸದಿಲ್ಲಿಯಲ್ಲಿ ಇಂಡಿಯಾ ಮೈತ್ರಿಕೂಟ ಜೊತೆ ಸೇರಿಕೊಂಡು ಬೃಹತ್ ರ್‍ಯಾಲಿ ಹಾಗೂ ‘ದಿಲ್ಲಿ ಚಲೋ’ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಎಐಸಿಸಿ ವೀಕ್ಷಕ ಹಾಗೂ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸದಸ್ಯ ಕಮಲೇಶ್ವರ ಪಟೇಲ್ ತಿಳಿಸಿದರು.ಅವರು ಭಾನುವಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೆ ಕಾಂಗ್ರೆಸ್ ಮತ್ತು ‘ಇಂಡಿಯಾ’ ಮೈತ್ರಿಕೂಟ ಈ ಹೋರಾಟ ಮುಂದುವರಿಸಲಿದೆ. ಜೊತೆಗೆ ಮತದಾನದಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಸುವಂತೆ ಕೂಡ ಧ್ವನಿ ಗೂಡಿಸಲಿದ್ದೇವೆ ಎಂದರು.
ಎಸ್‌ಐಆರ್ ಮೂಲಕ ಮತ ಡಿಲೀಟ್:ಎಸ್‌ಐಆರ್ ಮೂಲಕ ದೇಶಾದ್ಯಂತ ಒಟ್ಟು 13.3 ಕೋಟಿ ಮತಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಕರ್ನಾಟಕದ ಮಹಾದೇವಪುರ ಕ್ಷೇತ್ರದಲ್ಲಿ 1,00,500 ಶಂಕಿತ ಮತದಾರರ ಪಟ್ಟಿ ವಿಶ್ಲೇಷಣೆ ನಡೆಸಿದಾಗ 11,956 ನಕಲಿ ಹೆಸರುಗಳು ಪತ್ತೆಯಾಗಿವೆ. 40,009 ಅಮಾನ್ಯ ಅಥವಾ ತಪ್ಪು ವಿಳಾಸ ಹೊಂದಿದ ಮತದಾರರು ಕಂಡುಬಂದಿದ್ದಾರೆ. ಒಂದೇ ವಿಳಾಸದಲ್ಲಿ 10,452 ಬೃಹತ್ ಪ್ರಮಾಣದ ಮತದಾರರ ನೋಂದಣಿ ಪತ್ತೆಯಾಗಿವೆ. ಒಟ್ಟು 6.5 ಲಕ್ಷ ಮತಗಳಲ್ಲಿ 1,02,500 ನಕಲಿ/ ಅಕ್ರಮ ಮತಗಳು ಪತ್ತೆಯಾಗಿವೆ ಎಂದರು.
ಎಂಎಲ್‌ಸಿ ಐವನ್ ಡಿಸೋಜ, ಮಂಜುನಾಥ ಭಂಡಾರಿ, ಮಾಜಿ ಸಚಿವ ಬಿ.ರಮಾನಾಥ ರೈ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್ ಪೂಜಾರಿ, ಕಾಂಗ್ರೆಸ್ ಮುಖಂಡ ಇನಾಯತ್ ಅಲಿ ಮತ್ತಿತರರು ಇದ್ದರು.