ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಲ್ಲಿನ ಜಿ.ಪಂ.ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಿಂದ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ರಾಜ್ಯದ ಬಡ ಮತ್ತು ಮಧ್ಯಮ ವರ್ಗದವರ ಶ್ರೇಯೋಭಿವೃದ್ದಿಗಾಗಿ ಜಾರಿಗೊಳಿಸಲಾದ ಈ ಯೋಜನೆಗಳು ಹೊಸದಾದ್ರೂ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಗ್ಯಾರಂಟಿ ಯೋಜನೆ ಅನುಷ್ಟಾನ ಪರಿಣಾಮಕಾರಿಯಾಗಿಸಲು ಪ್ರಾಧಿಕಾರ ರಚನೆಯಾಗಿದೆ. ಮಾನ್ಯ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ 52 ಸಾವಿರ ಕೋಟಿ ರು. ಹಣವನ್ನು ಈ ಯೋಜನೆಗಳ ಅನುಷ್ಠಾನಕ್ಕಾಗಿ ಮೀಸಲಿಟ್ಟಿದ್ದಾರೆ ಎಂದು ತಿಳಿಸಿದರು.
ನೇರವಾಗಿ ಫಲಾನುಭಿವಗಳಿಗೆ ಸೌಲಭ್ಯ ನೀಡಲಾಗುತ್ತಿದೆ. ಜಿಲ್ಲೆ, ತಾಲ್ಲೂಕುಗಳಲ್ಲಿ ಪ್ರಾಧಿಕಾರದ ಕಚೇರಿ ತೆರೆಯಲಾಗಿದೆ. ತಾಲ್ಲೂಕುಗಳಲ್ಲಿ ಇಒಗಳು ಕಚೇರಿ ಮತ್ತು ಸಿಬ್ಬಂದಿ ಹಾಗೂ ಗ್ಯಾರಂಟಿ ಯೋಜನೆಗಳ ಪ್ರಗತಿ ಮಾಹಿತಿಯನ್ನು ಅಧ್ಯಕ್ಷರಿಗೆ ನೀಡಬೇಕು. ಸರ್ಕಾರಿ ಕಾರ್ಯಕ್ರಮಗಳಿಗೆ ತಾಲ್ಲೂಕು ಸಮಿತಿ ಅಧ್ಯಕ್ಷರಿಗೆ ಆಹ್ವಾನ ನೀಡಬೇಕು. ಶಿಕಾರಿಪುರದಲ್ಲಿ ಇನ್ನೂ ಕಚೇರಿ ಲಭ್ಯವಿಲ್ಲ. ಅಧಿಕಾರಿಗಳು ಮತ್ತು ಪ್ರಾಧಿಕಾರದ ಅಧ್ಯಕ್ಷರು, ಪದಾಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಿ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದರು.ಜಿ.ಪಂ ಸಿಇಓ ಎನ್.ಹೇಮಂತ್ ಮಾತನಾಡಿ, ಅನ್ನಭಾಗ್ಯ ಯೋಜನೆಯಡಿ 383374 ಕಾರ್ಡುಗಳ ನೋಂದಣಿಯಾಗಿದ್ದು, 1686787 ಸದಸ್ಯರು ಸೌಲಭ್ಯ ಪಡೆಯುತ್ತಿದ್ದಾರೆ. ತಾಂತ್ರಿಕ ಕಾರಣದಿಂದ 8066 ಜನರ ಡಿಬಿಟಿ ಬಾಕಿ ಇದೆ. ಯೋಜನೆ ಪ್ರಾರಂಭದಿಂದ 257,09,26,320 ಲಕ್ಷ ವೆಚ್ಚ ಮಾಡಲಾಗಿದೆ. ಯುವನಿಧಿ ಯೋಜನೆಯಡಿ ಈವರೆಗೆ ಒಟ್ಟು 2836 ಫಲಾನುಭವಿಗಳಿಗೆ ರೂ.32856000 ಕೋಟಿ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.
ಸದಸ್ಯರಾದ ಶಿವಾನಂದ್ ಮಾತನಾಡಿ, ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯುವ ವೇಳೆ ವಯಸ್ಸಾದವರ ಬಯೋಮೆಟ್ರಿಕ್ ಪಡೆಯಲು ಸಾಧ್ಯವಾಗದೇ ಪಡಿತರ ನೀಡಲಾಗುತ್ತಿಲ್ಲ್ಲ. ಇದನ್ನು ಸರಿಪಡಿಸಬೇಕು. ಹಾಗೂ ಬಡವರ ಬಿಪಿಎಲ್ ಕಾರ್ಡ್ನ್ನು ರದ್ದುಪಡಿಸಲಾಗಿದೆ ಇದನ್ನು ಸರಿಪಡಿಸಬೇಕು ಎಂದರು.
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಸೂರಜ್ ಎಂ.ಎನ್.ಹೆಗಡೆ ಮಾತನಾಡಿ, ಶಕ್ತಿ ಯೋಜನೆ ಜಾರಿಯಾದಾಗಿನಿಂದ ಕೆಎಸ್‌ಆರ್‌ಟಿಸಿ ಆದಾಯದಲ್ಲಿ ಹೆಚ್ಚಳವಾಗಿದೆ. ಪ್ರವಾಸೋದ್ಯಮ ಮತ್ತು ಉದ್ಯೋಗ ಕ್ಷೇತ್ರ ಉತ್ತೇಜನಗೊಂಡಿದೆ ಎಂದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸಯೆ ಬಲ್ಕೀಶ್ ಬಾನು, ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್, ಜಿ.ಪಂ.ಸಿಇಓ ಎನ್.ಹೇಮಂತ್, ಗ್ಯಾರಂಟಿ ಯೋಜನೆಗಳ ಅನುಷ್ಟಾನ ತಾಲ್ಲೂಕು ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಫಲಾನುಭವಿಗಳು ಹಾಜರಿದ್ದರು.ಎನ್‌ಪಿಸಿಎಲ್ ತಾಂತ್ರಿಕ ಸಮಸ್ಯೆ ಬಗೆಹರಿಸಿ: ಸಚಿವ ಮಧು
ಗೃಹಲಕ್ಷ್ಮೀಯಲ್ಲೂ ಎನ್‌ಪಿಸಿಎಲ್ ತಾಂತ್ರಿಕ ಕಾರಣದಿಂದ ಹಣ ಜಮೆಯಾಗದ ಫಲಾನುಭವಿಗಳ ಸಂಖ್ಯೆಯನ್ನು ತೆಗೆದುಕೊಂಡು ಸರಿಪಡಿಸಬೇಕು. 15 ದಿನಗಳ ಒಳಗೆ ಈ ಕೆಲಸ ಆಗಬೇಕು. ಪ್ರಾಧಿಕಾರದ ಜಿಲ್ಲಾಧ್ಯಕ್ಷರು ಪ್ರತಿದಿನ ಅನುಸರಣೆ ಕೈಗೊಳ್ಳಬೇಕು ಎಂದರು. ಹಾಗೂ ಮರಣ ಹೊಂದಿದ ಫಲಾನುಭವಿಗಳಿಗೆ ಹಣ ಹೋಗದಂತೆ ಕ್ರಮ ಕೈಗೊಳ್ಳಬೇಕು. ಅಂಗನವಾಡಿ ಮತ್ತು ಸಿಡಿಪಿಓ ಗಳಿಂದ ಮರಣ ಹೊಂದಿದವರ ಮಾಹಿತಿ ಪಡೆದು ಕ್ರಮ ವಹಿಸಬೇಕು ಎಂದರು.