ಹುಬ್ಬಳ್ಳಿ: ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದ ಯೋಜನೆಗಳನ್ನು ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದ ಬೆಂಗೇರಿಯ ಸಂತೆ ಮೈದಾನದಲ್ಲಿ ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾ ಆಡಳಿತ ಮತ್ತು ಜಿಪಂ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಧಾರವಾಡ ಜಿಲ್ಲೆಯ ವಿವಿಧ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣಾ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕೇಂದ್ರ ಸರ್ಕಾರದ ಇ-ಶ್ರಮ ಪೋರ್ಟಲ್‌ನಲ್ಲಿ ಸುಮಾರು 1.80 ಕೋಟಿ ಅಧಿಕ ಜನರು ನೋಂದಣಿಯಾಗಿದ್ದಾರೆ. ಸುಮಾರು 1.60 ಕೋಟಿ ಅಸಂಘಟಿತ ವಲಯದ ಕುಟುಂಬಗಳು ನೋಂದಣಿಯಾಗಿವೆ. ಅದರಲ್ಲಿ ಸುಮಾರು 35 ರಿಂದ 40 ಲಕ್ಷ ಕಟ್ಟಡ ಕಾರ್ಮಿಕರಿದ್ದು, ಸಾರಿಗೆ ಕಾರ್ಮಿಕರನ್ನು ಸಹ ಅಸಂಘಟಿತ ವಲಯಕ್ಕೆ ಸೇರ್ಪಡೆ ಮಾಡಲಾಗಿದೆ ಎಂದರು.
ಧಾರವಾಡ ಜಿಲ್ಲೆಯಲ್ಲಿ ಈವರೆಗೆ 43 ಅಪಘಾತ ಪ್ರಕರಣಗಳಲ್ಲಿ ಒಟ್ಟು ₹1.82 ಕೋಟಿ ಪರಿಹಾರ ವಿತರಿಸಲಾಗಿದೆ. ಅಲ್ಲದೇ 29 ವಿದ್ಯಾರ್ಥಿಗಳಿಗೆ ₹2.90 ಲಕ್ಷ ಶೈಕ್ಷಣಿಕ ಧನಸಹಾಯ ಪಾವತಿ ಮಾಡಲಾಗಿದೆ ಎಂದ ಅವರು, ಈವರೆಗೆ ರಾಜ್ಯಾದ್ಯಂತ 10,50,095 ಕಾರ್ಮಿಕರು ನೋಂದಣಿಯಾಗಿದ್ದು, ಧಾರವಾಡ ಜಿಲ್ಲೆಗೆ ಸಂಬಂಧಿಸಿದಂತೆ 1,51,675 ಕಾರ್ಮಿಕರನ್ನು ನೋಂದಾಯಿಸಿ ಸ್ಮಾರ್ಟ್‌ಕಾರ್ಡ್ ವಿತರಿಸಲಾಗುತ್ತಿದೆ ಎಂದರು.ಸ್ವಿಗ್ಗಿ, ಜೊಮ್ಯಾಟೊ, ರ್‍ಯಾಪಿಡೋ ಸೇರಿದಂತೆ ವಿವಿಧ ಇ-ಕಾಮರ್ಸ್ ವಲಯದ ಕಾರ್ಮಿಕರಿಗೆ ಯೋಜನೆ ರೂಪಿಸಲಾಗುತ್ತಿದೆ. ಗಿಗ್ ಕಾರ್ಮಿಕರಿಗೆ ತಲಾ ₹2 ಲಕ್ಷ ಅಪಘಾತ ಪರಿಹಾರ ಹಾಗೂ ಜೀವ ವಿಮಾ ಸೌಲಭ್ಯ ಸೇರಿದಂತೆ ಒಟ್ಟು ₹4 ಲಕ್ಷ ವಿಮಾ ಸೌಲಭ್ಯ ಒದಗಿಸಲಾಗುವುದು. 30,266 ಕಾರ್ಮಿಕರನ್ನು ನೋಂದಾಯಿಸಲಾಗಿದ್ದು, ಧಾರವಾಡ ಜಿಲ್ಲೆಗೆ ಸಂಬಂಧಿಸಿದಂತೆ 1,377 ಕಾರ್ಮಿಕರನ್ನು ನೋಂದಾಯಿಸಿ ಸ್ಮಾರ್ಟ್‌ಕಾರ್ಡ್ ವಿತರಿಸಲಾಗುತ್ತಿದೆ ಎಂದರು.
20ಕ್ಕೂ ಅಧಿಕ ನೌಕರರನ್ನು ಹೊಂದಿರುವ ಕಂಪನಿಗಳು ಗ್ರ್ಯಾಚುಟಿ ನೀಡುವುದು ಕಡ್ಡಾಯವಾಗಿದೆ. ಈಗಾಗಲೇ 6 ಸಾವಿರ ಕಂಪನಿಗಳು ನೋಂದಣಿಯಾಗಿವೆ. ಸುಮಾರು 65 ಲಕ್ಷ ಕಾರ್ಮಿಕರಿಗೆ ಉಪಯೋಗವಾಗಿದೆ. ಅಂಬೇಡ್ಕರ ಕಾರ್ಮಿಕ ಸಹಾಯಹಸ್ತ ಯೋಜನೆಯಡಿ 91 ಅಸಂಘಟಿತ ವರ್ಗಗಳ ಕಾರ್ಮಿಕರನ್ನು ಗುರುತಿಸಲಾಗಿದೆ. ಇಲ್ಲಿಯ ವರೆಗೆ ರಾಜ್ಯದಲ್ಲಿ 25,45,607 ಕಾರ್ಮಿಕರು ನೋಂದಣಿಯಾಗಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ 1,12,295 ಕಾರ್ಮಿಕರು ನೋಂದಣಿಯಾಗಿದ್ದು, ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ ಎಂದು ವಿವರಿಸಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಕಾರ್ಮಿಕರಿಗೆ ಸ್ಮಾರ್ಟ್‌ಕಾರ್ಡ್ ವಿತರಣೆ ಕಾರ್ಯಕ್ರಮಕ್ಕೆ ಹು-ಧಾ ಸೆಂಟ್ರಲ್ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಕ್ಕೆ ಸಚಿವ ಲಾಡ್ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಸರ್ಕಾರ ಬರುತ್ತೆ ಹೋಗುತ್ತೆ, ನಾಯಕರು ಬರುತ್ತಾರೆ ಹೋಗುತ್ತಾರೆ. ಚುನಾವಣೆಯಲ್ಲಿ ಮಾತ್ರ ರಾಜಕಾರಣ ಮಾಡಬೇಕು. ಅಧಿಕಾರದಲ್ಲಿದ್ದಾಗ ಕಟ್ಟಕಡೆಯ ಜನರಿಗೂ ಯೋಜನೆ ಮುಟ್ಟಿಸುವ ಕೆಲಸ ಮಾಡಬೇಕಿದೆ. ಜನಪರ ಕಾರ್ಯಕ್ರಮಕ್ಕೆ ನಮ್ಮ ಬೆಂಬಲ ಸದಾ ಇರಲಿದೆ ಎಂದರು.
ಅದಕ್ಕೂ ಮುನ್ನ ವಿವಿಧ ಯೋಜನೆಗಳಲ್ಲಿ ನೋಂದಣಿಯಾಗಿದ್ದ ಫಲಾನುಭವಿಗಳಿಗೆ ಸ್ಮಾರ್ಟ್‌ಕಾರ್ಡ್ ಹಾಗೂ ಪರಿಹಾರ ಧನದ ಚೆಕ್ ವಿತರಿಸಲಾಯಿತು.ಹೆಸ್ಕಾಂ ಸಂಸ್ಥೆಯ ಅಧ್ಯಕ್ಷ ಸೈಯದ್ ಅಜೀಮ್‌ಫೀರ್ ಎಸ್. ಖಾದ್ರಿ, ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಡಿಸಿ ದಿವ್ಯಪ್ರಭು, ಜಿಪಂ ಸಿಇಒ ಭುವನೇಶ ಪಾಟೀಲ, ಎಸ್‌ಪಿ ಡಾ. ಗೋಪಾಲ ಬ್ಯಾಕೋಡ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಎಸ್.ಆರ್. ಪಾಟೀಲ, ಸಚಿನ ಹಳೇಮನಿ, ಕಾರ್ಮಿಕ ಇಲಾಖೆಯ ಆಯುಕ್ತ ಡಾ. ಎಚ್.ಎನ್. ಗೋಪಾಲಕೃಷ್ಣ, ಡಾ. ಎಸ್.ಬಿ. ರವಿಕುಮಾರ, ಡಿ.ಜಿ. ನಾಗೇಶ, ಮುಖಂಡರಾದ ವಸಂತ ಲದ್ವಾ, ಅನಿಲಕುಮಾರ ಪಾಟೀಲ, ಮಹೇಂದ್ರ ಸಿಂಘಿ, ಗಿರೀಶ ಅಕ್ಕೇರಿ ಸೇರಿದಂತೆ ಹಲವರಿದ್ದರು.
ಪರಸ್ಪರ ಕಾಲೆಳೆದ ನಾಯಕರು: ವೇದಿಕೆ ಕಾರ್ಯಕ್ರಮದಲ್ಲಿ ಸಚಿವ ಸಂತೋಷ ಲಾಡ್ ಭಾಷಣ ಆರಂಭಿಸುತ್ತಿದ್ದಂತೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ಮುಟ್ಟುತ್ತಿವೆ ಇಲ್ಲವೋ? ಎಂದು ಸಭೀಕರಿಗೆ ಪ್ರಶ್ನೆ ಹಾಕಿದರು. ಆಗ ಮಧ್ಯ ಪ್ರವೇಶಿಸಿದ ಶಾಸಕ ಮಹೇಶ ಟೆಂಗಿನಕಾಯಿ ಪ್ರತಿ ತಿಂಗಳು ಸರಿಯಾಗಿ ಗ್ಯಾರಂಟಿ ಯೋಜನೆಯ ಹಣ ಬರುತ್ತಿಲ್ಲ ಅಂತಾ ಸಚಿವರ ಕಾಲೆಳೆದರು. ತಿಂಗಳಾ ಬರುತ್ತಿಲ್ಲ ಎಂಬ ವಾದ ಸರಿ ಇದೆ. ಆದರೆ, ಎರಡು ತಿಂಗಳಿಗೊಮ್ಮೆಯಾದರೂ ನಾವು ಹಾಕುತ್ತಿದ್ದೇವೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ನರೇಗಾ ದುಡ್ಡನ್ನು ಸರಿಯಾಗಿ ನೀಡುತ್ತಿಲ್ಲ. ಅದನ್ನು ಸರಿಯಾಗಿ ಕೇಂದ್ರ ಸರ್ಕಾರ ಹಾಕಬೇಕು ಎಂದು ಟೆಂಗಿನಕಾಯಿ ಅವರಿಗೆ ಲಾಡ್ ಟಾಂಗ್ ನೀಡಿದರು.