ಕಾರವಾರ: ಕರ್ಣಾಟಕ ಬ್ಯಾಂಕ್‌ನಲ್ಲಿ ಅವ್ಯವಹಾರ ನಡೆದಿದೆ ಎಂಬ ವದಂತಿಯಿಂದ ಕಾರವಾರ ನಗರದಲ್ಲಿನ ಬ್ಯಾಂಕಿನ ಶಾಖೆಗೆ ಗ್ರಾಹಕರು ಮುಗಿಬಿದ್ದು ಠೇವಣಿ ಹಾಗೂ ಹಣವನ್ನು ಮರಳಿ ಪಡೆದರು.
ಕಾರವಾರ ಅರ್ಬನ್ ಬ್ಯಾಂಕಿನಲ್ಲಿ ಆದ ಅವ್ಯವಹಾರದ ಹಿನ್ನೆಲೆಯಲ್ಲಿ ಬ್ಯಾಂಕಿನಲ್ಲಿದ್ದ ಹಣ, ಠೇವಣಿ ಮರಳಿ ಸಿಗದಿದ್ದರೆ ಎಂಬ ಆತಂಕದಲ್ಲಿ ಗ್ರಾಹಕರು ಬ್ಯಾಂಕಿಗೆ ಮುಗಿಬಿದ್ದರು. ಕರ್ನಾಟಕ ಬ್ಯಾಂಕಿನ ಜಿಲ್ಲೆಯ ಇತರ ಶಾಖೆಗಳಲ್ಲಿ ಗ್ರಾಹಕರು ಕಾರವಾರ ಶಾಖೆಯಲ್ಲಿ ಕಂಡುಬಂದಂತೆ ಮುಗಿಬಿದ್ದಿಲ್ಲ. ಕರ್ಣಾಟಕ ಬ್ಯಾಂಕ್ ಕುರಿತು ಹರಿದಾಡುತ್ತಿರುವ ಸುದ್ದಿಯಲ್ಲಿ ಹುರುಳಿಲ್ಲ: ರಂಜಿತ್ ಶೆಟ್ಟಿ
ಕರ್ಣಾಟಕ ಬ್ಯಾಂಕ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಕೇವಲ ಸುಳ್ಳು ಸುದ್ದಿ ಎಂದು ಬ್ಯಾಂಕಿನ ಕುಮಟಾ ಕ್ಲಸ್ಟರ್ ಹೆಡ್ ರಂಜಿತ್ ಶೆಟ್ಟಿ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಕೆಲವು ದಿನಗಳಿಂದ ಕರ್ನಾಟಕ ಬ್ಯಾಂಕ್ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡುತ್ತಿರುವುದು ಗಮನಕ್ಕೆ ಬಂದಿದೆ. 101 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕರ್ನಾಟಕ ಬ್ಯಾಂಕ್ ಕುರಿತು ವಿವೇಚನಾರಹಿತವಾಗಿ ಪ್ರಕಟಿಸಲಾಗಿರುವ ಈ ಸುದ್ದಿಗಳು ಸಂಪೂರ್ಣವಾಗಿ ದುರುದ್ದೇಶಪೂರಿತವಾಗಿವೆ. ಗ್ರಾಹಕರಲ್ಲಿ ಗೊಂದಲ ಮತ್ತು ಆತಂಕ ಸೃಷ್ಟಿಸುವ ಉದ್ದೇಶದಿಂದ ಕೂಡಿದೆ ಎಂದರು.ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿದೆ. ಕರ್ಣಾಟಕ ಬ್ಯಾಂಕ್ 101 ವರ್ಷಗಳಿಂದಲೂ ನಿರಂತರವಾಗಿ ಲಾಭ ಗಳಿಸುತ್ತಾ ಬಂದಿದೆ. ನಮ್ಮ ಬ್ಯಾಂಕ್‌ನ ಮೊದಲ ಆದ್ಯತೆ ಯಾವಾಗಲೂ ಠೇವಣಿದಾರರ ಹಣದ ಸುರಕ್ಷತೆ ಮತ್ತು ಭದ್ರತೆಯಾಗಿದೆ. ಗ್ರಾಹಕರ ನಂಬಿಕೆ, ವಿಶ್ವಾಸ ಮತ್ತು ಸಾಮಾಜಿಕ ಬದ್ಧತೆಗೆ ಪ್ರಸಿದ್ಧಿಯಾಗಿರುವ ಕರ್ನಾಟಕ ಬ್ಯಾಂಕ್ ಅತ್ಯಂತ ಸುದೃಢವಾಗಿದೆ ಎಂದು ನಾವು ನಮ್ಮ ಗ್ರಾಹಕರಿಗೆ ಸ್ಪಷ್ಟಪಡಿಸಲು ಬಯಸುತ್ತೇವೆ. ಪ್ರಸ್ತುತ, ಕರ್ಣಾಟಕ ಬ್ಯಾಂಕ್ ಶೇ.19.85ಕ್ಕಿಂತ ಹೆಚ್ಚಿನ ಬಂಡವಾಳ ಸಾಮರ್ಥ್ಯ ಅನುಪಾತವನ್ನು ಹೊಂದಿದ್ದು, ಇದು ನಮ್ಮ ಬಲಿಷ್ಠವಾದ ಆರ್ಥಿಕ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದರು.