ಕುಕನೂರು:
ಯಲಬುರ್ಗಾ ಹಾಗೂ ಕುಕನೂರ ತಾಲೂಕಿನಲ್ಲಿ ಮುಂಗಾರು ಮಳೆಯ ವೈಫಲ್ಯದಿಂದ ರೈತರು ಬೆಳೆ ಹರಗುತ್ತಿದದಾರೆ. ಮಳೆಯಿಂದ ಹಚ್ಚ ಹಸರಿನಿಂದ ಕಂಗೊಳಿಸಬೇಕಿದ್ದ ಬೆಳೆಗಳು ಮಳೆ ಇಲ್ಲದೆ ಕಮರಿವೆ.ಕುಕನೂರು ತಾಲೂಕಿನಲ್ಲಿ ೩೦,೧೦೬ ಹೆಕ್ಟೇರ್ ಬಿತ್ತನೆ ಕ್ಷೇತ್ರ ಹೊಂದಿದ್ದು, ಯಲಬುರ್ಗಾ ಹಾಗೂ ಕುಕನೂರ ತಾಲೂಕಿನಲ್ಲಿ ೮೭,೭೧೪ ಹೆಕ್ಟೇರ್ ಬಿತ್ತನೆ ಆಗಿದೆ.
ಮುಂಗಾರಿನಲ್ಲಿ ಯಲಬುರ್ಗಾ ಹೋಬಳಿ ೮೨೦೦ ಹೆಕ್ಟೇರ್, ಕುಕನೂರ ಹೋಬಳಿ ೧೦,೪೪೪ ಹೆಕ್ಟೇರ್ ಹೆಸರು ಬೆಳೆ ಬಿತ್ತನೆ ಆಗಿದೆ. ಅವಳಿ ತಾಲೂಕಿನಲ್ಲಿ ಮೆಕ್ಕೆಜೋಳ ೩೩೪೮೭, ಸಜ್ಜೆ ೧೯೮೦೩, ತೊಗರಿ ೩೯೧೪, ಹೆಸರು ೧೧೫೫೦, ಅಲಸಂದಿ ೫೭೦, ಶೇಂಗಾ-೪೨೩೭ ಹಾಗೂ ಇತರೆ ಬೆಳೆ ೧೪೧೫೩ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ.ಈಗಾಗಲೇ ಬೆಳೆ ಬಿತ್ತನೆ ಆಗಿ ಒಂದು ತಿಂಗಳು ಗತಿಸಿದ್ದು ಬೆಳೆಗೆ ತಕ್ಕಂತೆ ಮಳೆಯಾಗಿಲ್ಲ. ಇನ್ನೂ ಮಳೆಯಾದರೂ ಬೆಳೆ ಹುಲಸಾಗಿ ಬೆಳೆಯುವುದಿಲ್ಲ ಎಂದು ರೈತರು ಬೆಳೆ ನಾಶ ಮಾಡುತ್ತಿದ್ದಾರೆ. ಒಂದು ಎಕರೆ ಭೂಮಿ ಸಿದ್ಧಪಡಿಸಲು ₹ 600, ಬಿತ್ತನೆ ಬೀಜಕ್ಕೆ ₹ 500, ಗೊಬ್ಬರಕ್ಕೆ ₹ 1400, ಬಿತ್ತನೆಗೆ ₹ 600, ಎಡೆ ಹೊಡೆಯಲು ₹800, ಕಳೆ ತೆಗೆಯಲು ₹ 1000 ಹಾಗೂ ಕೀಟ ನಾಶಕ ಸಿಂಪರಣೆಗೆ ₹ 800 ರೈತರು ಖರ್ಚು ಮಾಡಿದ್ದಾರೆ. ಆದರೆ, ಮಳೆ ಇಲ್ಲದೆ ಭೂಮಿ ಬಾಯ್ತೆರೆದು ನಿಂತಿದೆ.
ಬರಗಾಲ ಘೋಷಿಸಿ:ಮಳೆ ಕೊರೆತೆಯಿಂದ ನಲುಗಿರುವ ಯಲಬುರ್ಗಾ ಹಾಗೂ ಕುಕನೂರು ತಾಲೂಕನ್ನು ಬರಪೀಡಿತವೆಂದು ಘೋಷಿಸಬೇಕೆಂದು ರೈತರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.ಮಳೆ ಕೊರತೆಯಿಂದ 10 ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಹೆಸರು ಬೆಳೆ ಹರಗುತ್ತಿದ್ದೇನೆ. ಇನ್ನೂ ಮಳೆಯಾದರೂ ಸಹ ಬೆಳೆ ಬೆಳೆದರೆ ನಷ್ಟವಾಗುತ್ತದೆ ಎಂದು ರೈತ ಅನಿಲ ಹೇಳಿದರು
.