ಹೊಸಪೇಟೆ; ಹುಬ್ಬಳ್ಳಿ ವಿದ್ಯಾರ್ಥಿನಿ ಹತ್ಯೆ ಪ್ರಕರಣ ಖಂಡಿಸಿ ಬೀದರ್‌ನಲ್ಲಿ ಪ್ರತಿಭಟನೆ ವೇಳೆ ಹಿಂದೂಪರ ಸಂಘಟನೆ ಮುಖಂಡ ವಿರೂಪಾಕ್ಷಿ ಗಾದಗಿ ಎಂಬವರು ಗೃಹಸಚಿವ ಪರಮೇಶ್ವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದು, ಇವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಜಿಲ್ಲಾ ಘಟಕದಿಂದ ಎಸ್ಪಿ ಶ್ರೀಹರಿಬಾಬುಗೆ ಬುಧವಾರ ಮನವಿ ಸಲ್ಲಿಸಿದರು.
ಇದಕ್ಕೂ ಮುನ್ನ ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಪರಿಶಿಷ್ಟ ಸಮುದಾಯದ ಡಾ.ಪರಮೇಶ್ವರ ವಿರುದ್ಧ ಹೇಳಿಕೆ ನೀಡಿರುವ ಹಿಂದೂಪರ ಸಂಘಟನೆ ಮುಖಂಡನ ವಿರುದ್ಧ ಪೊಲೀಸರು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ಸಂಘದ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಬಣ್ಣದಮನೆ ಮಾತನಾಡಿ, ವಿದ್ಯಾರ್ಥಿನಿ ಹತ್ಯೆ ಖಂಡಿಸುತ್ತೇವೆ. ನಮ್ಮ ಸಂಘವೂ ಇಂತಹ ಕೃತ್ಯಗಳನ್ನು ಬೆಂಬಲಿಸುವುದಿಲ್ಲ. ಆದರೆ, ಗೃಹಸಚಿವ ಪರಮೇಶ್ವರ ಬಗ್ಗೆ ಅವಹೇಳನಕಾರಿಯಾಗಿ ಮತ್ತು ವೈಯಕ್ತಿಕ ನಿಂದನೆ ಮಾಡಿರುವುದು ಸರಿಯಲ್ಲ ಎಂದರು.
ವ್ಯಕ್ತಿ ಗೌರವಕ್ಕೆ ಧಕ್ಕೆ ತರುವಂತೆ, ವೈಯಕ್ತಿಕ ನಿಂದನೆ ಮಾಡಿದ್ದಾರೆ. ಈ ಚುನಾವಣಾ ಸಂದರ್ಭದಲ್ಲಿ ಧರ್ಮ, ಧರ್ಮಗಳ ಮಧ್ಯೆ, ಜಾತಿ, ಜಾತಿಗಳ ಮಧ್ಯೆ ವಿಷಬೀಜ ಬಿತ್ತಿ ಕೋಮು ಭಾವನೆ ಹರಡಿ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡಲು ನಿರತರಾಗಿದ್ದಾರೆ. ಸಂವಿಧಾನದ ಆಶಯ ಗಾಳಿಗೆ ತೂರಲಾಗುತ್ತಿದೆ. ಇಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಜಾತಿ ನಿಂದನೆ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ಮುಖಂಡ ಸಣ್ಣಮಾರೆಪ್ಪ ಮಾತನಾಡಿ, ಡಾ.ಅಂಬೇಡ್ಕರ್ ಆಶಯದಂತೆ ಸಮಾಜದಲ್ಲಿ ಸಾಮರಸ್ಯ ಮೂಡಬೇಕು. ಈಗ ಗೃಹ ಸಚಿವರ ವಿರುದ್ಧವೇ ವೈಯಕ್ತಿಕ ನಿಂದನೆ ಮಾಡಲಾಗಿದೆ. ಇಂತಹವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಶಿವಕುಮಾರ, ಕಾರಿಗನೂರು ರಾಮಕೃಷ್ಣ, ರಾಮಚಂದ್ರ, ನೀಲಕಂಠ, ಅಂಬರೀಶ್, ಚಂದ್ರಶೇಖರ್, ಬಳ್ಳಾರಿ ಹನುಮಂತಪ್ಪ ಮತ್ತಿತರರಿದ್ದರು.