ಭತ್ತದ ಬೆಳೆಗಾಗಿ ನಾಲೆಗಳಲ್ಲಿ ನೀರು ಹರಿಸಲು ಆಗ್ರಹಿಸಿ ಕಬಿನಿ ಅಚ್ಚುಕಟ್ಟು ರೈತರ ಒತ್ತಾಯ

KannadaprabhaNewsNetwork |  
Published : Nov 25, 2026, 01:15 AM IST
7 | Kannada Prabha

ಸಾರಾಂಶ

ಬರಗಾಲದ ಸಂಕಷ್ಟದಲ್ಲಿರುವ ರೈತರು ಆಸರೆಯಾಗಿ ಬಂದ ಕಬಿನಿ ಜಲಾಶಯ ಭರ್ತಿ ನೋಡಿ ರೈತರು ಭತ್ತದ ನಾಟಿ ಮಾಡಿ ಬೆಳೆ ಚೆನ್ನಾಗಿ ಬಂದಿದೆ. ಆದರೆ, ಈಗ ನಾಲೆಗಳಲ್ಲಿ ನೀರು ನಿಲ್ಲಿಸಿರುವ ಕಾರಣ ಬತ್ತ ಒಣಗುತ್ತಿರುವುದನ್ನು ನೋಡಿ ರೈತರು ಕಂಗಲಾಗಿದ್ದಾರೆ. ನಾಲೆಗಳಿಗೆ ಕೂಡಲೇ ನೀರು ಹರಿಸಿ.

ಕನ್ನಡಪ್ರಭ ವಾರ್ತೆ ಮೈಸೂರು

ಬೆಳೆದು ನಿಂತಿರುವ ಭತ್ತದ ಬೆಳೆಗಾಗಿ ನಾಲೆಗಳಲ್ಲಿ ನೀರು ಹರಿಸಲು ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರ ಸಂಘದ ನೇತೃತ್ವದಲ್ಲಿ ಕಬಿನಿ ಅಚ್ಚುಕಟ್ಟು ರೈತರ ಮಂಗಳವಾರ ಪ್ರತಿಭಟಿಸಿದರು.

ನಗರದ ಗನ್ ಹೌಸ್ ವೃತ್ತದಲ್ಲಿ ಮೆರವಣಿಗೆ ಹೊರಡ ನೂರಾರು ರೈತರು, ಕಾಡಾ ಕಟ್ಟಡದಲ್ಲಿರುವ ಕಾವೇರಿ ಮುಖ್ಯ ಎಂಜಿನಿಯರ್ ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸಲು ಮುಂದಾದರು. ಈ ವೇಳೆ ಪೊಲೀಸರು ಕಚೇರಿ ಒಳಗೆ ಹೋಗದಂತೆ ತಡೆ ಒಡ್ಡಿದರು. ಇದರಿಂದ ಕೆಲಕಾಲ ವಾಗ್ವಾದ ನಡೆಯಿತು. ನಂತರ ಕಚೇರಿ ಬಳಿಗೆ ತೆರಳು ಪೊಲೀಸರು ಅನುಮತಿ ನೀಡಿದರು. ಮುಖ್ಯ ಎಂಜಿನಿಯರ್ ಕಚೇರಿ ವರಾಂಡದಲ್ಲಿ ರೈತರು ಕುಳಿತು ಪ್ರತಿಭಟಿಸಿದರು.

ಬರಗಾಲದ ಸಂಕಷ್ಟದಲ್ಲಿರುವ ರೈತರು ಆಸರೆಯಾಗಿ ಬಂದ ಕಬಿನಿ ಜಲಾಶಯ ಭರ್ತಿ ನೋಡಿ ರೈತರು ಭತ್ತದ ನಾಟಿ ಮಾಡಿ ಬೆಳೆ ಚೆನ್ನಾಗಿ ಬಂದಿದೆ. ಆದರೆ, ಈಗ ನಾಲೆಗಳಲ್ಲಿ ನೀರು ನಿಲ್ಲಿಸಿರುವ ಕಾರಣ ಬತ್ತ ಒಣಗುತ್ತಿರುವುದನ್ನು ನೋಡಿ ರೈತರು ಕಂಗಲಾಗಿದ್ದಾರೆ. ನಾಲೆಗಳಿಗೆ ಕೂಡಲೇ ನೀರು ಹರಿಸಿ ಎಂದು ಅವರು ಒತ್ತಾಯಿಸಿದರು.

ಈ ವೇಳೆ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಸರ್ಕಾರದ ದ್ವಂದ್ವ ನಿಲುವಿನಿಂದ ರೈತರು ಬೀದಿ ಪಾಲಾಗುತ್ತಿದ್ದಾರೆ. ಕಬಿನಿ ಜಲಾಶಯ ಭರ್ತಿಯಾದಗ ಸಕಾಲಕ್ಕೆ ಕೆರೆಕಟ್ಟೆಗಳನ್ನು ತುಂಬಿಸಿ ನಾಲೆಗಳಿಗೆ ನೀರು ಹರಿಸಿದರೆ ಈ ಭಾಗದ ರೈತರು ಸರ್ಕಾರಕ್ಕೆ ಶಾಪ ಹಾಕುವುದು ತಪ್ಪುತ್ತಿತ್ತು. ಕಬಿನಿ ಜಲಾಶಯಕ್ಕೆ ಬಂದ ನೀರನ್ನು ಉಳಿಸಿಕೊಳ್ಳದೆ ತಮಿಳುನಾಡಿಗೆ ಹರಿಸುವ ಮೂಲಕ ಕಾವೇರಿ ಭಾಗದ ರೈತರನ್ನು ಬೀದಿ ಪಾಲು ಮಾಡಿದ್ದಾರೆ ಎಂದು ಕಿಡಿಕಾರಿದರು.

ಕಾವೇರಿ ನೀರಾವರಿ ನಿಗಮದ ಹಲವು ಅಧಿಕಾರಿಗಳ ಗುಲಾಮಗಿರಿ ಆಡಳಿತದಿಂದ ರೈತ ಸಂಕಷ್ಟ ಅನುಭವಿಸುವಂತಾಗಿದೆ. ಕೂಡಲೇ ನಾಲೆಗಳಿಗೆ ನೀರು ಹರಿಸಬೇಕು. ಬತ್ತದ ಫಸಲನ್ನು ಉಳಿಸಬೇಕು. ಸಿಂಧೂ ನದಿಯ ವಿವಾದದ ರೀತಿಯಲ್ಲಿ ಭಾರತ ಸರ್ಕಾರ ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿದ ರೀತಿಯಲ್ಲಿ ರಾಜ್ಯ ಸರ್ಕಾರವು ಅದನ್ನೇ ಪಾಲಿಸಿದರೆ ನಮ್ಮ ರೈತರ ಹಿತ ಕಾಪಾಡಬಹುದಿತ್ತು. ತಮಿಳುನಾಡಿನ ಮುಖ್ಯಮಂತ್ರಿಯ ಸ್ನೇಹಕ್ಕಾಗಿ ಕಾವೇರಿ ಭಾಗದ ರೈತರು ಸಂಕಷ್ಟ ಪಡುವಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಮುಖ್ಯ ಎಂಜಿನಿಯರ್ ಸುನಿಲ್ ಕುಮಾರ್ ರೈತರ ಸಮಸ್ಯೆ ಕೇಳಿದ ನಂತರ ಮಾತನಾಡಿ, ಕಬಿನಿ ಜಲಾಶಯದಲ್ಲಿರುವ ನೀರು ಮುಂದಿನ ಏಪ್ರಿಲ್ ತನಕ ಕುಡಿಯುವ ನೀರಿಗಾಗಿ ಬಳಸಬೇಕಾಗಿದೆ. ಆದರೂ ಸರ್ಕಾರದ ಮುಖ್ಯಸ್ಥರ ಜೊತೆ ಚರ್ಚೆ ಮಾಡಿ ಶೀಘ್ರದಲ್ಲಿಯೇ ನಿಮ್ಮ ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ಕಬಿನಿ ವೃತ್ತ ಅಧೀಕ್ಷಕ ಎಂಜಿನಿಯರ್ ರಘುಪತಿ ಅವರು, ನಾಲೆಗಳಿಗೆ ನೀರು ಕುಡಿಯುವ ನೀರಿಗಾಗಿ ಬಳಸಲು ಯಾವುದೇ ತೊಂದರೆ ಆಗುವುದಿಲ್ಲ. ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ರೈತರ ಹಿತ ಕಾಪಾಡಲಾಗುವುದು ಎಂದು ಹೇಳಿದರು. ನೀರಾವರಿ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಕೈಬಿಟ್ಟರು.

ರೈತ ಮುಖಂಡರಾದ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಕೆ.ಜಿ. ಗುರುಸ್ವಾಮಿ, ಕುರುಬೂರು ಸಿದ್ದೇಶ್, ವರಕೊಡು ನಾಗೇಶ, ಪ್ರದೀಪ್, ಪರಶಿವಮೂರ್ತಿ, ಪ್ರಸಾದ್ ನಾಯಕ, ಗೌರಿಶಂಕರ್, ಮಂಜುನಾಥ್, ಕೋಟೆ ಸುನೀಲ್, ಮಹದೇವಸ್ವಾಮಿ, ಬಸವರಾಜ, ಕೆಂಡಗಣಪ್ಪ, ನಂಜುಂಡಸ್ವಾಮಿ, ನಿಲಸೋಗೆ ಉಮೇಶ್, ಶ್ರೀಕಂಠ, ಗುರುಸ್ವಾಮಿ, ಸೋಮಣ್ಣ, ಯೋಗೇಶ್, ಸುರೇಶ್ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಲ್ಪಸಂಖ್ಯಾತರ ಮಕ್ಕಳ ಶಿಕ್ಷಣಕ್ಕೆ ವಿಶೇಷ ಗಮನ: ನಿಸಾರ್ ಅಹಮದ್
ರವಿ ಹಂಜ್‌ ಗಡಿಪಾರಿಗೆ ಬಸವಾಭಿಮಾನಿಗಳ ಆಗ್ರಹ