- ನಿಷೇಧಾಜ್ಞೆ ನಡುವೆಯೂ ನಗರದಲ್ಲೇ ಪ್ರತಿಭಟನೆ
- ದುರ್ಗದಬೈಲ್‌ನಿಂದ ಇಂಡಿಪಂಪ್ ವರೆಗೆ ಮೆರವಣಿಗೆ, ಮಾನವ ಸರಪಳಿ ನಿರ್ಮಿಸಿ ಆಕ್ರೋಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಕಬ್ಬಿಗೆ ಪ್ರತಿ ಟನ್‌ಗೆ ಕನಿಷ್ಠ ₹5,500 ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟಕ್ಕೆ ಹುಬ್ಬಳ್ಳಿಯ ರೈತರು ಬೆಂಬಲ ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿಭಟನೆಗೆ ನಿಷೇಧಾಜ್ಞೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ರೈತರು ನಗರ ಪ್ರದೇಶದಲ್ಲೇ ಹೋರಾಟ ನಡೆಸಿದರು. ಬೆಳಗ್ಗೆ ಸುಮಾರು 11 ಗಂಟೆಗೆ ದುರ್ಗದಬೈಲ್ ವೃತ್ತದಲ್ಲಿ ಜಮಾಯಿಸಿದದರು. ಬಳಿಕ ಚನ್ನಪೇಟೆ, ಗೌಳಿಗಲ್ಲಿ, ದಿನಸಿ ಮಾರುಕಟ್ಟೆ ಮಾರ್ಗವಾಗಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಬಳಿಕ ದುರ್ಗದಬೈಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ಸಂಚಾರಕ್ಕೆ ಕೆಲಕಾಲ ತಡೆ ಒಡ್ಡಿದ ರೈತರು, ಇಂಡಿಪಂಪ್ ವೃತ್ತಕ್ಕೆ ತೆರಳಿ ಧರಣಿ ನಡೆಸಿದರು. ನೆತ್ತಿ ಸುಡುವ ಬಿಸಿಲಿನಲ್ಲೂ ಮಾನವ ಸರಪಳಿ ನಿರ್ಮಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಇಂಡಿಪಂಪ್ ವೃತ್ತದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ವಾಹನಗಳಿಗೆ ಪರ‍್ಯಾಯ ಮಾರ್ಗ ಕಲ್ಪಿಸಲಾಗಿತ್ತಾದರೂ, ಕೆಲ ಆಯಕಟ್ಟಿನ ಪ್ರದೇಶಗಳಲ್ಲಿ ವಾಹನ ದಟ್ಟಣೆ ಉಂಟಾಗಿ ಸವಾರರು ಪರದಾಡಿದರು.
ಇಂಡಿಪಂಪ್ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದ ವೇಳೆ ರಸ್ತೆಗೆ ಅಡ್ಡಲಾಗಿ ಇರಿಸಿದ್ದ ಬೃಹತ್ ಪೈಪ್ ತೆರವುಗೊಳಿಸಲು ಪೊಲೀಸರು ಮುಂದಾದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ತೀವ್ರ ವಾಗ್ವಾದ ನಡೆಯಿತು. ಡಿಸಿಪಿ ರವೀಶ್ ಸಿ.ಆರ್. ಹಾಗೂ ಎಸಿಪಿ ಯು.ಬಿ. ಚಿಕ್ಕಮಠ ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದರು. ಈ ವೇಳೆ ತಳ್ಳಾಟ-ನೂಕಾಟ ನಡೆದು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಬಳಿಕ ರೈತ ಮುಖಂಡರು ಪ್ರತಿಭಟನೆಯ ನೇತೃತ್ವ ವಹಿಸಿರುವುದು ಶಶಿಕಾಂತ ಗುರೂಜಿ ಅವರಿಗೆ ಕರೆ ಮಾಡಿದ ಡಿಸಿಪಿ ರವೀಶ್ ಅವರಿಗೆ ನೀಡಿದರು. ಆಗ ಪೊಲೀಸ್ ಅಧಿಕಾರಿಗಳ ಮಾತುಕತೆ ನಡೆದ ನಂತರ, ಹಗಲು-ರಾತ್ರಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಶನಿವಾರ ಸಂಜೆ 6 ಗಂಟೆಯ ವರೆಗೆ ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಯಿತು.