ನೆಲ್ಯಾಡಿ ಅಸುಪಾಸಿನ ೧೫ ಗ್ರಾಮಗಳನ್ನು ಸೇರಿಸಿಕೊಂಡು ನೆಲ್ಯಾಡಿಯಲ್ಲಿ ಪೂರ್ಣಪ್ರಮಾಣದ ಹೊಸ ಪೊಲೀಸ್ ಠಾಣೆ ರಚನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಶನಿವಾರ ಕೌಕ್ರಾಡಿ ಗ್ರಾ.ಪಂ. ಸಭಾಂಗಣದಲ್ಲಿ ಪೊಲೀಸರು ನಡೆಸಿದ ಸಾರ್ವಜನಿಕರ ಸಭೆಯಲ್ಲಿ ಅಭಿಪ್ರಾಯವ್ಯಕ್ತವಾಗಿದೆ.
೧೫ ಗ್ರಾಮಗಳನ್ನು ಸೇರಿಸಿಕೊಂಡು ಠಾಣೆ ರಚನೆಗೆ ಸಾರ್ವಜನಿಕ ಸಭೆ ಅಭಿಪ್ರಾಯ । ಸರ್ಕಾರಕ್ಕೆ ಪ್ರಸ್ತಾವನೆ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ನೆಲ್ಯಾಡಿ ಅಸುಪಾಸಿನ ೧೫ ಗ್ರಾಮಗಳನ್ನು ಸೇರಿಸಿಕೊಂಡು ನೆಲ್ಯಾಡಿಯಲ್ಲಿ ಪೂರ್ಣಪ್ರಮಾಣದ ಹೊಸ ಪೊಲೀಸ್ ಠಾಣೆ ರಚನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಶನಿವಾರ ಕೌಕ್ರಾಡಿ ಗ್ರಾ.ಪಂ. ಸಭಾಂಗಣದಲ್ಲಿ ಪೊಲೀಸರು ನಡೆಸಿದ ಸಾರ್ವಜನಿಕರ ಸಭೆಯಲ್ಲಿ ಅಭಿಪ್ರಾಯವ್ಯಕ್ತವಾಗಿದೆ.ಇತ್ತೀಚೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿದ್ದ ವೇಳೆ ಕಡಬ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಉಷಾ ಅಂಚನ್, ನೆಲ್ಯಾಡಿಯಲ್ಲಿ ಈಗಿರುವ ಹೊರಠಾಣೆಯನ್ನು ಪೂರ್ಣ ಪ್ರಮಾಣದ ಪೊಲೀಸ್ ಠಾಣೆಯನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಗೃಹ ಸಚಿವರು ಈ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಸೂಚನೆಯಂತೆ ಉಪ್ಪಿನಂಗಡಿ ಪೊಲೀಸರು ಕೌಕ್ರಾಡಿ ಗ್ರಾ.ಪಂ. ಸಭಾಂಗಣದಲ್ಲಿ ಸಾರ್ವಜನಿಕರ ಸಭೆ ನಡೆಸಿ ಅಭಿಪ್ರಾಯ ಪಡೆದುಕೊಂಡರು.೧೫ ಗ್ರಾಮಗಳ ವ್ಯಾಪ್ತಿ:ಪ್ರಸ್ತುತ ನೆಲ್ಯಾಡಿ ಹೊರಠಾಣೆಯು ನೆಲ್ಯಾಡಿ, ಕೊಣಾಲು, ಕೌಕ್ರಾಡಿ, ಇಚ್ಲಂಪಾಡಿ, ಕೊಣಾಜೆ, ಶಿರಾಡಿ ಹಾಗೂ ಸಿರಿಬಾಗಿಲು ಗ್ರಾಮಗಳನ್ನು ಒಳಗೊಂಡಿದ್ದು, ಇದನ್ನು ಪೂರ್ಣಪ್ರಮಾಣದ ಠಾಣೆಯನ್ನಾಗಿ ಪರಿವರ್ತಿಸುವ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಆಲಂತಾಯ, ಗೋಳಿತ್ತೊಟ್ಟು, ಧರ್ಮಸ್ಥಳ ಠಾಣೆ ವ್ಯಾಪ್ತಿಯ ರೆಖ್ಯ, ಶಿಬಾಜೆ, ಶಿಶಿಲ, ಕೊಕ್ಕಡ, ಹತ್ಯಡ್ಕ, ಕಡಬ ಠಾಣಾ ವ್ಯಾಪ್ತಿಯ ಬಲ್ಯ ಗ್ರಾಮ ಸೇರಿ ಒಟ್ಟು ೧೫ ಗ್ರಾಮಗಳ ವ್ಯಾಪ್ತಿ ಸೇರಿಸಿಕೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು.ಈಗಿರುವ ನೆಲ್ಯಾಡಿ ಹೊರಠಾಣೆ ವ್ಯಾಪ್ತಿಯು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿರುವುದರಿಂದ ಹೆಚ್ಚುತ್ತಿರುವ ಅಪಘಾತ ಪ್ರಕರಣ, ಕಳ್ಳತನ ಪ್ರಕರಣ, ಪದೇಪದೆ ನಡೆಯುತ್ತಿರುವ ಆನೆದಾಳಿ ಪ್ರಕರಣ, ಉಪ್ಪಿನಂಗಡಿ ಠಾಣೆಗೆ ಪ್ರತಿ ಗ್ರಾಮಗಳಿಂದ ೧೮ ಕಿ.ಮೀ.ಗಿಂತ ಹೆಚ್ಚಿನ ದೂರ, ಈ ಹಿಂದೆ ಸಿರಿಬಾಗಿಲು ಗ್ರಾಮದಲ್ಲಿ ನಕ್ಸಲ್ ಚಟುವಟಿಕೆ ನಡೆದಿರುವುದು, ಬಹುತೇಕ ಭಾಗ ಕಾಡು ಪ್ರದೇಶಗಳಿಂದ ಆವರಿಸಿರುವುದು ಸೇರಿದಂತೆ ವಿವಿಧ ಕ್ರಿಮಿನಲ್ ಪ್ರಕರಣಗಳ ಹಿನ್ನೆಲೆಯಲ್ಲಿ ನೆಲ್ಯಾಡಿಗೆ ಪೂರ್ಣ ಪ್ರಮಾಣದ ಪೊಲೀಸ್ ಠಾಣೆ ತೀರಾ ಅಗತ್ಯವಾಗಿರುವುದನ್ನು ಪ್ರಸ್ತಾವನೆಯಲ್ಲಿ ಉಲ್ಲೇಖಿಸುವಂತೆಯೂ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದರು.ಶೇ.೪೧ರಷ್ಟು ಕ್ರಿಮಿನಲ್ ಪ್ರಕರಣ:ಆರಂಭದಲ್ಲಿ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಉಪ್ಪಿನಂಗಡಿ ಠಾಣೆಯ ಪಿಎಸ್‌ಐ ಗುರುನಾಥ್ ಹಾದಿಮನಿ, ಉಪ್ಪಿನಂಗಡಿ ಠಾಣೆ ವ್ಯಾಪ್ತಿಗೆ ೨೨ ಗ್ರಾಮಗಳು ಬರುತ್ತಿದ್ದು, ಇದರಲ್ಲಿ ನೆಲ್ಯಾಡಿ ಹೊರಠಾಣೆ ವ್ಯಾಪ್ತಿಯ ೭ ಗ್ರಾಮಗಳೂ ಸೇರಿಕೊಂಡಿವೆ. ಉಪ್ಪಿನಂಗಡಿ ಠಾಣೆಯಲ್ಲಿ ದಾಖಲಾಗುವ ಕ್ರಿಮಿನಲ್ ಪ್ರಕರಣಗಳಲ್ಲಿ ಶೇ.೪೧ ನೆಲ್ಯಾಡಿ ಹೊರಠಾಣೆ ವ್ಯಾಪ್ತಿಯಲ್ಲಿಯೇ ನಡೆಯುತ್ತಿದೆ. ಈ ಭಾಗದ ಗ್ರಾಮಸ್ಥರು ಉಪ್ಪಿನಂಗಡಿ ಠಾಣೆಗೆ ಬರಬೇಕಾದಲ್ಲಿ ೧೮ ಕಿ.ಮೀ. ಪ್ರಯಾಣ ಮಾಡಬೇಕಾಗಿದೆ ಎಂದರು.ಕೌಕ್ರಾಡಿ ಗ್ರಾ.ಪಂ. ಪಿಡಿಒ ದೇವಿಕಾ ಮಾತನಾಡಿ, ನೆಲ್ಯಾಡಿಯಲ್ಲಿರುವ ಹೊರಠಾಣೆಯನ್ನು ಪೂರ್ಣಪ್ರಮಾಣದ ಠಾಣೆಯನ್ನಾಗಿ ಪರಿವರ್ತಿಸುವಂತೆ ಪ್ರತೀ ಗ್ರಾಮಸಭೆಯಲ್ಲೂ ಗ್ರಾಮಸ್ಥರಿಂದ ಬೇಡಿಕೆ ಬರುತ್ತಿತ್ತು. ಕೌಕ್ರಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನೆಲ್ಯಾಡಿ ಪೊಲೀಸ್ ಠಾಣೆಗೆ ಜಾಗವೂ ಕಾದಿರಿಸಲಾಗಿದೆ. ಆದ್ದರಿಂದ ಆದಷ್ಟೂ ಶೀಘ್ರ ನೆಲ್ಯಾಡಿಯಲ್ಲಿ ಪೂರ್ಣಪ್ರಮಾಣದ ಪೊಲೀಸ್ ಠಾಣೆ ಆಗಬೇಕೆಂದು ಹೇಳಿದರು.ಉಪ್ಪಿನಂಗಡಿ ಠಾಣೆ ಪಿಎಸ್‌ಐ ಕೌಶಿಕ್(ತನಿಖೆ-೨) ಇದ್ದರು. ಜಿ.ಪಂ. ಮಾಜಿ ಸದಸ್ಯರಾದ ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ ನೆಲ್ಯಾಡಿ, ತಾ.ಪಂ. ಮಾಜಿ ಸದಸ್ಯೆಯರಾದ ಉಷಾ ಅಂಚನ್ ನೆಲ್ಯಾಡಿ, ಆಶಾಲಕ್ಷ್ಮಣ್ ಗುಂಡ್ಯ, ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷ ಸಲಾಂ ಬಿಲಾಲ್, ಸದಸ್ಯ ರವಿಪ್ರಸಾದ್ ಶೆಟ್ಟಿ, ಪುತ್ತೂರು ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಅ ಮತ್ತಿತರರು ಸಲಹೆ ಸೂಚನೆ ನೀಡಿದರು.ಕೌಕ್ರಾಡಿ ಗ್ರಾ.ಪಂ. ಸದಸ್ಯ ಲೋಕೇಶ್ ಬಾಣಜಾಲು ಸ್ವಾಗತಿಸಿ ನಿರೂಪಿಸಿದರು. ಉಪ್ಪಿನಂಗಡಿ ಠಾಣೆ ಬರಹಗಾರ ಸತೀಶ್, ನೆಲ್ಯಾಡಿ ಹೊರಠಾಣೆ ಹೆಡ್‌ಕಾನ್‌ಸ್ಟೇಬಲ್‌ಗಳಾದ ಪ್ರವೀಣ್, ದಯಾನಂದ, ಉಪ್ಪಿನಂಗಡಿ ಠಾಣೆ ಕಾನ್‌ಸ್ಟೇಬಲ್‌ಗಳಾದ ಸದಾಶಿವ ದೊಡಮನಿ, ನಾಗರಾಜ್ ಸಹಕರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.