ಕರ್ನಾಟಕ ರಾಜ್ಯದಲ್ಲಿ ದಾವಣಗೆರೆ ಮಧ್ಯ ಕರ್ನಾಟಕವಾಗಿದ್ದು, ದಾವಣಗೆರೆಯಲ್ಲಿಯೇ ಹೈಕೋರ್ಟ್ ಪೀಠವಾಗಬೇಕೆಂದು ಅಗ್ರಹಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ವರದಿಗಾರರ ಕೂಟದಿಂದ ಪತ್ರಿಕಾ ಸಂಪಾದಕರು, ನೂರಾರು ಪತ್ರಕರ್ತರು ಇಲ್ಲಿನ ರಾಂ ಅಂಡ್ ಕೋ ಸರ್ಕಲ್ ನಿಂದ ಬೈಕ್ ಮೂಲಕ ಘೋಷಣೆಗಳನ್ನು ಕೂಗುತ್ತಾ, ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಕರ್ನಾಟಕ ರಾಜ್ಯದಲ್ಲಿ ದಾವಣಗೆರೆ ಮಧ್ಯ ಕರ್ನಾಟಕವಾಗಿದ್ದು, ದಾವಣಗೆರೆಯಲ್ಲಿಯೇ ಹೈಕೋರ್ಟ್ ಪೀಠವಾಗಬೇಕೆಂದು ಅಗ್ರಹಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ವರದಿಗಾರರ ಕೂಟದಿಂದ ಪತ್ರಿಕಾ ಸಂಪಾದಕರು, ನೂರಾರು ಪತ್ರಕರ್ತರು ಇಲ್ಲಿನ ರಾಂ ಅಂಡ್ ಕೋ ಸರ್ಕಲ್ ನಿಂದ ಬೈಕ್ ಮೂಲಕ ಘೋಷಣೆಗಳನ್ನು ಕೂಗುತ್ತಾ, ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಆರ್. ರವಿ ಮಾತನಾಡಿ, ವಾಣಿಜ್ಯ ಹಾಗೂ ಶೈಕ್ಷಣಿಕ ನಗರಿ, ನಾಡಿನ ಕೇಂದ್ರ ಬಿಂದುವಾದ ದಾವಣಗೆರೆಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಮಾಡಬೇಕೆಂಬ ಜಿಲ್ಲಾ ವಕೀಲರ ಸಂಘದ ಬೇಡಿಕೆ ಮತ್ತು ಒತ್ತಾಯಕ್ಕೆ ಜಿಲ್ಲಾ ವರದಿಗಾರರ ಕೂಟವು ಸಂಪೂರ್ಣ ಬೆಂಬಲ ಸೂಚಿಸುತ್ತದೆ ಎಂದರು.
ದಾವಣಗೆರೆಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾದರೆ ದಾವಣಗೆರೆ, ಚಿತ್ರದುರ್ಗ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ವಿಜಯನಗರ ಜಿಲ್ಲೆಗಳಿಗೂ ಅನುಕೂಲವಾಗಲಿದೆ. ಹಿಂದೆ ದಾವಣಗೆರೆಯನ್ನು ರಾಜಧಾನಿ ಮಾಡಬೇಕೆಂಬ ಪ್ರಯತ್ನವೂ ನಡೆದಿತ್ತು, ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ. ಹಾಗಾಗಿ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಿದರೆ ನೆರೆ ಜಿಲ್ಲೆಗಳ ಕಕ್ಷಿದಾರರಿಗೂ ಮತ್ತು ವಕೀಲರಿಗೂ ಸಾಕಷ್ಟು ಅನುಕೂಲವಾಗುತ್ತದೆ ಎಂದು ಹೇಳಿದರು.
ನಗರವಾಣಿ ಸಹ ಸಂಪಾದಕ ಬಿ.ಎನ್.ಮಲ್ಲೇಶ್ ಮಾತನಾಡಿ, ದಾವಣಗೆರೆ ರಾಜಧಾನಿಯಾಗಬೇಕೆಂದು ಎಲ್ಲರೂ ಹೇಳುತ್ತಾರೆ. ಸೂಕ್ತವಾದ ಸ್ಥಳ ಇದಾಗಿದೆ. ಈ ಕುರಿತು ಯಾರೂ ಕೂಡಾ ಈ ಕಡೆಗೆ ಗಮನ ಕೊಡುತ್ತಿಲ್ಲ. ಈಗ ಹೈಕೋರ್ಟ್ ಬೇಕೇಬೇಕು. ಈಗಾಗಲೇ ಬೈಪಾಸ್ ನಲ್ಲಿ ಒಂದು ಕಟ್ಟಡ ಕಟ್ಟಿದ್ದಾರೆ. ಇಲ್ಲಿನ ಎಲ್ಲರೂ ಕೂಡ ಅಲ್ಲಿಗೆ ಹೋಗಲು ಆಗುವುದಿಲ್ಲ. ವಕೀಲರು ಹೋಗಬೇಕು, ಆದರೆ ಕ್ಲಯಂಟ್ಗಳು ಇಲ್ಲಿಂದ ಅಲ್ಲಿಗೆ ಹೋಗಲು 200 ರು. ಕೊಡಬೇಕಾಗುತ್ತದೆ. ಅದಕ್ಕೋಸ್ಕರ ಜಿಲ್ಲಾ ನ್ಯಾಯಾಲಯ ಇಲ್ಲಿಯೇ ಇರಲಿ, ಹೈಕೋರ್ಟ್ ಪೀಠ ಇಲ್ಲಿ ಆದರೆ ಸುತ್ತಮುತ್ತಲ 8-10 ಜಿಲ್ಲೆಗಳಿಗೆ ಸಾಕಷ್ಟು ಅನುಕೂಲವಾಗುತ್ತದೆ. ಜಿಲ್ಲಾ ಮಂತ್ರಿಗಳು ಕೂಡ ಈ ಬಗ್ಗೆ ಚರ್ಚಿಸಿ ಮನವಿಗೆ ಸಹಕರಿಸಬೇಕು ಎಂದರು.
ವಿಜಯ ಕರ್ನಾಟಕದ ಸ್ಥಾನಿಕ ಸಂಪಾದಕ ಸದಾನಂದ ಹೆಗಡೆ ಮಾತನಾಡಿ, ದಾವಣಗೆರೆಗೆ ಹೈಕೋರ್ಟ್ ಪೀಠ ಕೊಡಲು ಇದೊಂದು ಸದಾವಕಾಶವಾಗಿದೆ. ಇಲ್ಲಿ ಮೂಲಸೌಲಭ್ಯವನ್ನು ಬೆಳೆಸುತ್ತಾ ಹೋದಾಗ, ಮುಂದೊಂದು ದಿನ ಮಧ್ಯ ಕರ್ನಾಟಕದಲ್ಲಿರುವ ಈ ದಾವಣಗೆರೆ ರಾಜಧಾನಿ ಆಗಲು ಇದೊಂದು ಪ್ರಾಥಮಿಕ ಪ್ರಯತ್ನವಾಗುತ್ತದೆ ಎಂದರು.
ಸಂಯುಕ್ತ ಕರ್ನಾಟಕದ ಸ್ಥಾನಿಕ ಸಂಪಾದಕ ಮಂಜುನಾಥ ಗೌರಕ್ಕಳ ಮಾತನಾಡಿ, ಎಲ್ಲರ ಬೇಡಿಕೆಯೊಂದೇ ಆಗಿದೆ. ದಾವಣಗೆರೆ ಕೇಂದ್ರದಲ್ಲಿ ಹೈಕೋರ್ಟ್ ಪೀಠ ಆಗಲೇಬೇಕು. ಈಗಾಗಲೇ ಶಿವಮೊಗ್ಗ, ಮಂಗಳೂರಿನಲ್ಲಿ ಹೈಕೋರ್ಟ್ ಪೀಠವಾಗಬೇಕು ಎಂದು ಚರ್ಚೆ ನಡೀತಿದೆ. ಶಿವಮೊಗ್ಗಕ್ಕಿಂತ ದಾವಣಗೆರೆಗೆ ಆದರೆ ಮಧ್ಯ ಕರ್ನಾಟಕದ 8-10 ಜಿಲ್ಲೆಗಳ ಅಭಿಪ್ರಾಯವಾಗಿದೆ. ತಕ್ಷಣ ಸರ್ಕಾರ, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಒಕ್ಕೊರಲಿನಿಂದ ಸರ್ಕಾರಕ್ಕೆ ಅಗ್ರಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ, ಎನ್.ವಿ.ಬದರಿನಾಥ, ಜೆ.ಎಸ್.ವೀರೇಶ್, ಆರ್.ಎಸ್.ತಿಪ್ಪೇಸ್ವಾಮಿ, ಕೆ.ಏಕಾಂತಪ್ಪ, ಫಕ್ರುದ್ದೀನ್, ಮಧುನಾಗರಾಜ ಕುಂದವಾಡ, ಎಂ.ವೈ.ಸತೀಶ್, ಬಸವರಾಜ ದೊಡ್ಡಮನಿ, ಮಂಜುನಾಥ ಕಾಡಜ್ಜಿ, ಚನ್ನಬಸವ ಶೀಲವಂತ್, ಬಿ.ಬಿ.ಮಲ್ಲೇಶ್, ಪುನೀತ್ಕುಮಾರ್, ಕರಿಬಸವರಾಜು, ಮಹೇಶ ಕಾಶಿಪುರ, ಕೆ.ಎನ್.ಮಲ್ಲಿಕಾರ್ಜುನ, ಮಲ್ಲಿಕಾರ್ಜುನ ಕೈದಾಳೆ, ಶಿವರಾಜ್, ಕಿರಣ್ ಕುಮಾರ, ಶಂಭು, ವಿನಾಯಕ ಪೂಜಾರಿ, ವಿಷ್ಣುಕುಮಾರ, ಪ್ರಕಾಶ್, ರಮೇಶ ಜಾಗೀರ್ದಾರ್, ಎಚ್.ಎನ್.ಪ್ರಕಾಶ್, ಎಚ್ಎಂಪಿ ಕುಮಾರ್, ಯಶವಂತ್, ಭಾರತಿ, ಮುದ್ದಯ್ಯ, ಪವನ್ ಕುಮಾರ, ಗಣೇಶ ಕಮ್ಲಾಪುರ, ಪಿ.ಎಸ್.ಲೋಕೇಶ, ವಸಂತ್ ಕುಮಾರ್, ಅಣ್ಣೇಶ, ಹನುಮಂತರಾವ್, ರಾಕೇಶ್, ರಮೇಶ, ಸಂಜಯ್, ರಾಮು, ವಿಶ್ವನಾಥ ಮೈಲಾಳ್, ಸಿಕಂದರ್, ವಿವೇಕ್, ವಿಶ್ವನಾಥ್, ಶಿವಕುಮಾರ, ಭಾಸ್ಕರ್ ಸೇರಿದಂತೆ ಮುದ್ರಣ, ದೃಶ್ಯ ಮಾಧ್ಯಮದ ಪತ್ರಕರ್ತರು, ಕ್ಯಾಮರಾ ಮ್ಯಾನ್ಗಳು, ಸಂಘದ ಪದಾಧಿಕಾರಿಗಳು, ಸದಸ್ಯರುಗಳು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.