ಕನ್ನಡಪ್ರಭ ವಾರ್ತೆ ದಾವಣಗೆರೆ
ಈ ಸಂದರ್ಭದಲ್ಲಿ ಮಾತನಾಡಿದ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಟಿ.ಜಿ. ರವಿಕುಮಾರ್, ಇಂದಿನ ದಿನಗಳಲ್ಲಿ ಹೃದಯ ಸಂಬಂಧಿತ ಕಾಯಿಲೆಗಳು ಹೆಚ್ಚುತ್ತಿದ್ದು, ಸಕಾಲಿಕ ತಪಾಸಣೆ ಮತ್ತು ಚಿಕಿತ್ಸೆ ಅತ್ಯಂತ ಅವಶ್ಯಕವಾಗಿದೆ. ದಾವಣಗೆರೆಯಂತಹ ನಗರಗಳಲ್ಲಿ ಅತ್ಯಾಧುನಿಕ ಹೃದ್ರೋಗ ಚಿಕಿತ್ಸಾ ಸೌಲಭ್ಯಗಳು ಲಭ್ಯವಿರುವುದು ಬಹಳ ಮುಖ್ಯ. ಹೃದಯಾಘಾತದಂತಹ ತುರ್ತು ಸಂದರ್ಭಗಳಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆತರೆ ಅಮೂಲ್ಯ ಜೀವಗಳನ್ನು ಉಳಿಸಬಹುದು. ಬೆಂಗಳೂರು ಸೇರಿದಂತೆ ದೂರದ ನಗರಗಳಿಗೆ ತೆರಳುವ ಅನಿವಾರ್ಯತೆಯನ್ನು ಕಡಿಮೆ ಮಾಡಿ, ನಮ್ಮ ಭಾಗದ ಜನರಿಗೆ ಗುಣಮಟ್ಟದ ಹೃದ್ರೋಗ ಚಿಕಿತ್ಸೆಯನ್ನು ಒದಗಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಹೃದಯದ ಆರೋಗ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಕ್ಕೂ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಹೃದ್ರೋಗ ತಜ್ಞ ಡಾ. ಲೋಹಿತಾಶ್ವ ಮಾತನಾಡಿ, ಆಸ್ಪತ್ರೆಯ ಕ್ಯಾಥ್ಲ್ಯಾಬ್ ನಲ್ಲಿ ಹೃದಯದ ರಕ್ತನಾಳಗಳ ತಪಾಸಣೆಗಾಗಿ ಆಂಜಿಯೋಗ್ರಫಿ, ಬ್ಲಾಕೇಜ್ ನಿವಾರಣೆಗಾಗಿ ಆಂಜಿಯೋಪ್ಲಾಸ್ಟಿ ಮತ್ತು ಸ್ಟೆಂಟಿಂಗ್, ಹೃದಯಾಘಾತದ ತುರ್ತು ಚಿಕಿತ್ಸೆಯಾದ ಪ್ರೈಮರಿ ಆಂಜಿಯೋಪ್ಲಾಸ್ಟಿ, ಪೇಸ್ಮೇಕರ್ ಅಳವಡಿಕೆ ಸೇರಿದಂತೆ ವಿವಿಧ ಇಂಟರ್ವೆನ್ಷನಲ್ ಹೃದ್ರೋಗ ಚಿಕಿತ್ಸಾ ಸೌಲಭ್ಯಗಳು ಲಭ್ಯವಿರಲಿವೆ. ಹೃದಯಾಘಾತದ ಲಕ್ಷಣಗಳನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯಕೀಯ ನೆರವು ಪಡೆಯುವುದು ಅತ್ಯಂತ ಮುಖ್ಯ ಎಂದು ತಿಳಿಸಿದರು.ಬೆಂಗಳೂರಿನ ಮಣಿಪಾಲ್ ಹಾಸ್ಪಿಟಲ್ಸ್, ಓಲ್ಡ್ ಏರ್ಪೋರ್ಟ್ ರಸ್ತೆಯ ಮಾರ್ಕೆಟಿಂಗ್ ಮುಖ್ಯಸ್ಥರು ಮಲ್ಲಿಕಾರ್ಜುನ್ ಅವರು ಮಾತನಾಡಿ, ಆರೋಗ್ಯ ಸೇವೆಯಲ್ಲಿನ ಬದ್ಧತೆ, ಉತ್ತಮ ಮೂಲಸೌಕರ್ಯ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಪರಿಗಣಿಸಿ, ಮಣಿಪಾಲ್ ಹಾಸ್ಪಿಟಲ್ಸ್ ವತಿಯಿಂದ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಈ ಭಾಗದಲ್ಲಿ ಸುಧಾರಿತ ಹೃದಯ ಚಿಕಿತ್ಸಾ ಸೇವೆಗಳನ್ನು ಒದಗಿಸಲು ಸೂಕ್ತ ಕೇಂದ್ರವಾಗಿ ಗುರುತಿಸಲಾಗಿದೆ. ಆರೈಕೆ ಆಸ್ಪತ್ರೆಯ ಸಹಯೋಗದೊಂದಿಗೆ ಈ ಭಾಗದ ಜನರಿಗೆ ಅತ್ಯಾಧುನಿಕ ಹೃದಯ ಚಿಕಿತ್ಸಾ ಸೌಲಭ್ಯಗಳನ್ನು ಅವರ ಸಮೀಪದಲ್ಲಿಯೇ ಒದಗಿಸುವುದು ನಮ್ಮ ಉದ್ದೇಶವಾಗಿದೆ. ಈ ಸಹಭಾಗಿತ್ವವು ಈ ಭಾಗದ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ.
ಆಸ್ಪತ್ರೆ ಇತರೆ ವೈದ್ಯರು, ಸಿಬ್ಬಂದಿ ಇತರರು ಇದ್ದರು.