ಪ್ರತಿಭಟನೆ ನಡೆಸಿದ ಹಿನ್ನೆಲೆ ಕೆಲವು ಹೊತ್ತು ಸುಗಮ ವಾಹನ ಸಂಚಾರಕ್ಕೆ ಅಡಚಣೆಯಾಯಿತಾದರೂ, ಈ ಸಂದರ್ಭದಲ್ಲಿ ಪೊಲೀಸರು ಸೂಕ್ತ ಕ್ರಮ ಕೈಗೊಂಡರು.

ದಾಂಡೇಲಿ: ನಗರದಲ್ಲಿ ಗುಂಡಿಗಳಿಂದ ತೀವ್ರ ಹದಗೆಟ್ಟಿರುವ ಜೆ.ಎನ್. ರಸ್ತೆಯ ದುರಸ್ತಿ ಹಾಗೂ ಧೂಳು ನಿಯಂತ್ರಣಕ್ಕೆ ಆಗ್ರಹಿಸಿ ಅಟಲ್ ಅಭಿಮಾನಿ ಸಂಘಟನೆ ನೇತೃತ್ವದಲ್ಲಿ ಸ್ಥಳೀಯ ವ್ಯಾಪಾರಸ್ಥರು ಹಾಗೂ ಆಟೋ ಚಾಲಕರು ಜೆ.ಎನ್. ರಸ್ತೆಯಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.ಜೆ.ಎನ್. ರಸ್ತೆ ಸಂಪೂರ್ಣ ಗುಂಡಿಗಳಿಂದ ಕೂಡಿದ್ದು, ಸುಗಮ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ. ವಾಹನಗಳು ಸಂಚರಿಸುವಾಗ ರಸ್ತೆಯಿಡೀ ಧೂಳು ಆವರಿಸಿ ಸ್ಥಳೀಯ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ನಿರಂತರ ಧೂಳಿನಿಂದಾಗಿ ಸ್ಥಳೀಯ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅಟಲ್ ಅಭಿಮಾನಿ ಸಂಘಟನೆಯ ಅಧ್ಯಕ್ಷ ವಿಷ್ಣು ನಾಯರ್, ಕರ್ನಾಟಕ ಬಹುಜನ ಚಳವಳಿ ಸಂಘದ ರಾಜ್ಯಾಧ್ಯಕ್ಷ ದೇವೇಂದ್ರ ಮಾದರ ಸೇರಿದಂತೆ ಸ್ಥಳೀಯ ಪ್ರಮುಖರು, ರಸ್ತೆ ದುರಸ್ತಿಯಾಗುವವರೆಗೆ ಧೂಳು ನಿಯಂತ್ರಣಕ್ಕಾಗಿ ಪ್ರತಿದಿನ ಮೂರು ಬಾರಿ ನೀರು ಹಾಯಿಸುವಂತೆ ಹಾಗೂ ರಸ್ತೆ ದುರಸ್ತಿಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಪ್ರತಿಭಟನಾ ಸ್ಥಳಕ್ಕೆ ನಗರಸಭೆ ವ್ಯವಸ್ಥಾಪಕ ಪರಶುರಾಮ ಶಿಂದೆ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ನಾಗೇಂದ್ರ ದೊಡ್ಮನಿ, ನಗರಸಭೆ ಆರೋಗ್ಯ ನಿರೀಕ್ಷಕ ವಿಲಾಸ್ ಅವರು ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು.

ರಸ್ತೆ ದುರಸ್ತಿಯಾಗುವವರೆಗೆ ಪ್ರತಿದಿನ ಮೂರು ಬಾರಿ ರಸ್ತೆಗೆ ನೀರು ಹಾಯಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಪ್ರತಿಭಟನೆ ನಡೆಸಿದ ಹಿನ್ನೆಲೆ ಕೆಲವು ಹೊತ್ತು ಸುಗಮ ವಾಹನ ಸಂಚಾರಕ್ಕೆ ಅಡಚಣೆಯಾಯಿತಾದರೂ, ಈ ಸಂದರ್ಭದಲ್ಲಿ ಪೊಲೀಸರು ಸೂಕ್ತ ಕ್ರಮ ಕೈಗೊಂಡರು.ಪ್ರತಿಭಟನಾ ಸ್ಥಳದಲ್ಲಿ ಸಿಪಿಐ ಶಿವಾನಂದ ಅಂಬಿಗೇರ, ಪಿಎಸ್ಐ ಅಮೀನ್ ಅತ್ತಾರ್ ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು. ಅಟಲ್ ಅಭಿಮಾನಿ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು, ಆಟೋ ಚಾಲಕರು, ಸ್ಥಳೀಯ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.