- ಕೇಂದ್ರ ಸರ್ಕಾರ ಸದ್ಯಕ್ಕೆ ಇಲ್ಲವೆಂದರೂ ನಮ್ಮ ಪ್ರಯತ್ನ, ಒತ್ತಡ ಹೇರೋದು ನಿಲ್ಲಿಸಿಲ್ಲ: ಸಂಸದೆ ಡಾ.ಪ್ರಭಾ ಹೇಳಿಕೆ- - -
ಶಿವಮೊಗ್ಗ- ಹೊಸಪೇಟೆ ರಾಜ್ಯ ಹೆದ್ದಾರಿ-25 ಅನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಐದು ಸಲ ಭೇಟಿ ಮಾಡಿ, ಕೇಂದ್ರ ಸರ್ಕಾರಕ್ಕೆ ನಿರಂತರ ಮನವಿ ಸಲ್ಲಿಸಲಾಗಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ತಿಳಿಸಿದರು.
ಹರಪನಹಳ್ಳಿ ತಾ. ದುಗ್ಗಾವತಿ ಗ್ರಾಮದಲ್ಲಿ ಸೋಮವಾರ 2024-25ನೇ ಸಾಲಿನ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ (ಡಿಎಂಎಫ್) ಯೋಜನೆಯ 8ನೇ ಹಂತದಡಿ ₹3 ಕೋಟಿ ಅನುದಾನದಲ್ಲಿ ಕೈಗೊಳ್ಳಲಿರುವ ಹೊಸಪೇಟೆ- ಶಿವಮೊಗ್ಗ ರಾಜ್ಯ ಹೆದ್ದಾರಿ-25ರ ರಸ್ತೆ ಅಭವೃದ್ಧಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಮಟ್ಟದಲ್ಲಿ ನಿರಂತರ ಪ್ರಯತ್ನ ನಡೆಸಿದ್ದೇನೆ ಎಂದರು.ಪ್ರಮುಖ ಸಂಪರ್ಕ ರಸ್ತೆಯಾದ ಈ ರಾಜ್ಯ ಹೆದ್ದಾರಿ ನಿತ್ಯ ಸಾವಿರಾರು ವಾಹನ, ಲಕ್ಷಾಂತರ ಜನ ಸಂಚಾರಕ್ಕೆ ಆದರವಾಗಿದೆ. ಇದನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸುವುದರಿಂದ ಸಾರಿಗೆ ವ್ಯವಸ್ಥೆ ಸುಧಾರಿಸುವ ಜೊತೆಗೆ ವ್ಯಾಪಾರ, ವಾಣಿಜ್ಯ, ಗ್ರಾಮೀಣ ಆರ್ಥಿಕ ಚಟುವಟಿಕೆಗೂ ಅನುಕೂಲವಾಗುತ್ತದೆ. ಹೊಸ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಹಾಗೂ ರಾಜ್ಯ ಹೆದ್ದಾರಿಗಳ ಮೇಲ್ದರ್ಜೆಗೇರಿಸುವ ಪ್ರಸ್ತಾವ ಸದ್ಯಕ್ಕೆ ಪರಿಗಣಿಸುತ್ತಿಲ್ಲ ಎಂದು ಕೇಂದ್ರ ಹೇಳಿದೆ. ಆದರೂ, ನಮ್ಮ ಪ್ರಯತ್ನ ನಿಂತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಹರಿಹರ– ಕೊಟ್ಟೂರು ಮಾರ್ಗದಲ್ಲಿ ಸಂಚರಿಸುತ್ತಿರುವ ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ (ಡೆಮು) ರೈಲಿನಲ್ಲಿ ಶೌಚಾಲಯ ವ್ಯವಸ್ಥೆ ಕಲ್ಪಿಸುವಂತೆ ಪ್ರಯಾಣಿಕರಿಂದ ಬೇಡಿಕೆ ಬಂದಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಸಂಬಂಧಿಸಿದ ರೈಲ್ವೆ ಅಧಿಕಾರಿಗಳ ಗಮನಕ್ಕೆ ಈ ವಿಷಯ ತರಲಾಗಿದೆ. ಅಗತ್ಯ ಕ್ರಮ ಕೈಗೊಳ್ಳುವಂತೆ ಹೇಳಿದ್ದೇವೆ. ಅಜ್ಮೀರ್–ಬೆಂಗಳೂರು ಎಕ್ಸ್‌ಪ್ರೆಸ್ ರೈಲಿಗೆ ಹರಪನಹಳ್ಳಿಯಲ್ಲಿ ನಿಲುಗಡೆ ಕಲ್ಪಿಸುವ ಬೇಡಿಕೆಯನ್ನೂ ರೈಲ್ವೆ ಇಲಾಖೆ ಮುಂದಿಡಲಾಗಿದೆ. ಗ್ರಾಮೀಣ ಜನರಿಗೆ ಉತ್ತಮ ರೈಲ್ವೆ ಸಂಪರ್ಕ ಒದಗಿಸುವುದು ನಮ್ಮ ಆದ್ಯತೆ ಎಂದು ತಿಳಿಸಿದರು.
ಹರಪನಹಳ್ಳಿ ಕ್ಷೇತ್ರ ಶಾಸಕಿ ಲತಾ ಮಲ್ಲಿಕಾರ್ಜುನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಂಜಿನಪ್ಪ, ಮುಖಂಡರಾದ ಕರೆಗೌಡ ನಿಂಗಪ್ಪ, ರಾಟಿ ದಾದಾಪೀರ್, ಉದಯಶಂಕರ ಸೇರಿದಂತೆ ದುಗ್ಗಾವತಿ ಸುತ್ತಲಿನ ಗ್ರಾಮಗಳ ಮುಖಂಡರು, ಗ್ರಾಮಸ್ಥರು ಇದ್ದರು.
(ಬಾಕ್ಸ್)
- ಕೇಂದ್ರದ ನೀತಿ ನಿರೂಪಣೆ, ಜನರ ಸಮಸ್ಯೆ ಬಗ್ಗೆ ಸಂಸತ್ತಲ್ಲಿ ಪ್ರಸ್ತಾಪ: ಡಾ.ಪ್ರಭಾ
ಹರಪನಹಳ್ಳಿ ತಾ. ದುಗ್ಗಾವತಿ ಗ್ರಾಮದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ (ಡಿಎಂಎಫ್) ಯೋಜನೆಯ 8ನೇ ಹಂತದಡಿ ₹3 ಕೋಟಿ ಅನುದಾನದ ಹೊಸಪೇಟೆ- ಶಿವಮೊಗ್ಗ ರಾಜ್ಯ ಹೆದ್ದಾರಿ-25ರ ರಸ್ತೆ ಅಭವೃದ್ಧಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ನಿಗದಿತ ಮಾನದಂಡಕ್ಕೆ ಅನುಗುಣವಾಗಿ ಕಟ್ಟುನಿಟ್ಟಾಗಿ ಪರಿಶೀಲಿಸಬೇಕು ಎಂದರು.
ಮಹಿಳಾ ಮೀಸಲಾತಿ ಕಾಯ್ದೆ ಅನುಷ್ಠಾನ ಹಾಗೂ ಕ್ಷೇತ್ರ ಮರುವಿಂಗಡಣೆ ಕುರಿತು ಸ್ಪಷ್ಟತೆ ಅಗತ್ಯವಿದೆ. ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಿಸುವ ಪ್ರಸ್ತಾವದ ವೇಳೆ ರಾಜ್ಯಗಳ ಪ್ರಾತಿನಿಧ್ಯಕ್ಕೆ ಯಾವುದೇ ಅನ್ಯಾಯ ಆಗದಂತೆ ಎಚ್ಚರ ವಹಿಸಬೇಕು. ಅಭಿವೃದ್ಧಿ ಕಾರ್ಯಗಳ ಜೊತೆಗೆ ಜನರ ಹಕ್ಕುಗಳು, ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಯ ರಕ್ಷಣೆಗೆ ನಿರಂತರ ಧ್ವನಿ ಎತ್ತಲಾಗುವುದು. ತಮ್ಮ ಕ್ಷೇತ್ರದ ಪ್ರತಿಯೊಂದು ಗ್ರಾಮದ ಅಭಿವೃದ್ಧಿಗೆ ಬದ್ಧತೆಯಿಂದ ಕೆಲಸ ಮಾಡುತ್ತೇವೆ ಎಂದು ಸಂಸದೆ ಡಾ.ಪ್ರಭಾ ಭರವಸೆ ನೀಡಿದರು.
- - --23ಕೆಡಿವಿಜಿ1:
ದುಗ್ಗಾವತಿಯಲ್ಲಿ 2024-25ನೇ ಸಾಲಿನ ಡಿಎಂಎಫ್ ಯೋಜನೆಯ 8ನೇ ಹಂತದಡಿ ₹3 ಕೋಟಿ ಅನುದಾನದ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ-25ರ ರಸ್ತೆ ಅಭವೃದ್ಧಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಭೂಮಿಪೂಜೆ ನೆರವೇರಿಸಿದರು. ಹರಪನಹಳ್ಳಿ ಕ್ಷೇತ್ರ ಶಾಸಕರಾದ ಲತಾ ಮಲ್ಲಿಕಾರ್ಜುನ ಇತರರು ಇದ್ದರು.