
ಸಿಂಧನೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಬೇಕು ಮತ್ತು ಸ್ಟಿಂಗ್ ಆಪರೇಷನ್ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಜಾತ್ಯತೀತ ಜನತಾದಳ ಪಕ್ಷದ ನಗರ ಮತ್ತು ಗ್ರಾಮೀಣ ಘಟಕದಿಂದ ಸೋಮವಾರ ಸ್ಥಳೀಯ ಪ್ರವಾಸಿ ಮಂದಿರದಿಂದ ಗಾಂಧಿ ವೃತ್ತದ ಮೂಲಕ ಮಿನಿವಿಧಾನಸೌಧ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಸ್ಟಿಂಗ್ ಆಪರೇಷನ್ ವಿವಾದದ ಕುರಿತು ನ್ಯಾಯಯುತ, ನಿಷ್ಪಕ್ಷಪಾತ ಹಾಗೂ ಕಾಲಮಿತಿಯಲ್ಲಿ ತನಿಖೆ ಮಾಡಬೇಕು. ಈ ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವ ಎಲ್ಲ ವ್ಯಕ್ತಿಗಳನ್ನು ಕಾನೂನಿನ ಪ್ರಕಾರ ಕಟ್ಟುನಿಟ್ಟಾಗಿ ವಿಚಾರಣೆಗೆ ಒಳಪಡಿಸಬೇಕು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಮತ್ತು ಅಗೌರವಯುತ ಭಾಷೆ ಬಳಸಿದ್ದಕ್ಕಾಗಿ ಗೃಹ ಸಚಿವ ಪ್ರಿಯಾಂಕ ಖರ್ಗೆ ಶಿಸ್ತು ಕ್ರಮ ಕೈಗೊಳ್ಳಬೇಕು. ಸಾಂವಿಧಾನಿಕ ಔಚಿತ್ಯ ಮತ್ತು ಸಾರ್ವಜನಿಕ ನಡವಳಿಕೆಯ ಉನ್ನತ ಗುಣಮಟ್ಟವನ್ನು ಎತ್ತಿ ಹಿಡಿಯಬೇಕು. ಹಾಲು, ಮೊಸರು, ತುಪ್ಪ, ಬೆಣ್ಣೆ, ಪನ್ನೀರ್ ಇತರ ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯನ್ನು ತಕ್ಷಣ ಹಿಂಪಡೆಯಲು ಮರು ಪರಿಶೀಲಿಸಿ ಜನಸಾಮಾನ್ಯರಿಗೆ ಹೊರೆಯಾಗದಂತೆ ಬೆಲೆಯನ್ನು ನಿಗದಿ ಪಡಿಸಬೇಕು. ಕೆಎಸ್‌ಆರ್‌ಟಿಸಿ ಹಾಗೂ ಇತರೆ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಹೆಚ್ಚಳವನ್ನು ಹಿಂಪಡೆಯಬೇಕು. ಬರಪೀಡಿತ ರೈತರು, ಗ್ರಾಮೀಣ ಕುಟುಂಬಗಳ ಹಾಗೂ ಜಾನುವಾರು ಸಾಕಾಣಿಕೆಕಾರರಿಗೆ ವಿಶೇಷ ಪರಿಹಾರ ಕ್ರಮಗಳನ್ನು ಘೋಷಿಸಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾನವಿ, ರಾಜ್ಯ ಸರ್ಕಾರದ ಬೆಲೆ ಏರಿಕೆ, ಭ್ರಷ್ಟಾಚಾರ, ಶೂನ್ಯ ಅಭಿವೃದ್ಧಿ, ಗ್ಯಾರಂಟಿ ಯೋಜನೆಗಳಲ್ಲಿ ಅವ್ಯವಹಾರ ಕುರಿತು ತೀವ್ರ ವಾಗ್ದಾಳಿ ನಡೆಸಿದರು.ಜೆಡಿಎಸ್ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ರಶ್ಮಿ ರಾಮೇಗೌಡ, ಕೋರ್ ಕಮಿಟಿ ಸದಸ್ಯೆ ಕನ್ಯಾಕುಮಾರಿ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ, ನಗರ ಘಟಕದ ಅಧ್ಯಕ್ಷ ರವಿಗೌಡ ಪನ್ನೂರು, ಮುಖಂಡರಾದ ಅಭಿಷೇಕ ನಾಡಗೌಡ, ವೆಂಕಟೇಶ ನಂಜಲದಿನ್ನಿ, ನಾಗೇಶ ಹಂಚಿನಾಳ, ಧರ್ಮನಗೌಡ ಮಲ್ಕಾಪುರ, ಸಣ್ಣಶಿವನಗೌಡ ಗೊರೇಬಾಳ, ಲಿಂಗರಾಜ ಪಾಟೀಲ್ ರಾಗಲಪರ್ವಿ, ವೆಂಕೋಬಣ್ಣ ಕಲ್ಲೂರು, ವೀರೇಶ ಯಡಿಯೂರಮಠ, ಪದ್ದಮ್ಮ ಕರಿಯಪ್ಪ, ಶ್ವೇತಾ ಅಭಿಷೇಕ ನಾಡಗೌಡ, ಅಲ್ಲಮಪ್ರಭು ಪೂಜಾರಿ, ಸೈಯ್ಯದ್ ಆಸೀಫ್, ಶಂಕ್ರಗೌಡ ಎಲೆಕೂಡ್ಲಗಿ, ಮಹಿಬೂಬ್, ನಿರುಪಾದಿ ನಾಗಲಾಪೂರ, ವೆಂಕಟೇಶ ಗಿರಿಜಾಲಿ, ಸುಮಿತ್ ತಡಕಲ್, ವೀರೇಶ ನಾಡಗೌಡ, ಮಹಾವೀರ ಜೈನ್ ಭಾಗವಹಿಸಿದ್ದರು.