ಪುತ್ತೂರು: ಸಂವಿದಾನದ ಆಶಯ ಮತ್ತು ಕಾನೂನಿನ ಅರಿವಿನಿಂದ ಪ್ರತಿಯೊಬ್ಬರೂ ಬದುಕಲು ಕಲಿತರೆ ಆದರ್ಶ ಸಂಸಾರ ಆದರ್ಶ ಸಮಾಜ ನಿರ್ಮಾಣ ಸಾಧ್ಯವಿದೆ. ಪೃಥ್ವಿಗೆ ಸಮಾನವಾಗಿರುವ ಸ್ತ್ರೀಯರ ಸಶಕ್ತತೆ ಮತ್ತು ಸುರಕ್ಷತೆಗೆ ಕಾನೂನು ಅರಿವು ಅಗತ್ಯ ಎಂದು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ತಿಳಿಸಿದರು.ಅವರು ಪುತ್ತೂರು ಕಾನೂನು ಸೇವೆಗಳ ಸಮಿತಿ, ಜನ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ಪುತ್ತೂರು ನ್ಯಾಯಾಲಯ ಸಭಾಂಗಣದಲ್ಲಿ ಕಾನೂನು ಸಾಕ್ಷರತಾ ಅಭಿಯಾನದಡಿ ಶನಿವಾರ ನಡೆದ ಮಹಿಳೆಯರ ಮತ್ತು ಮಕ್ಕಳ ರಕ್ಷಣೆ, ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಮಾಲಿನ್ಯ ತಡೆ ಕಾನೂನು ಅರಿವು ಕಾರ್ಯಕ್ರಮವನ್ನು ಪರಿಸರ ಸ್ನೇಹಿ ಸ್ಯಾನಿಟರಿ ವಸ್ತುಗಳನ್ನು ಬಳಸುತ್ತಿರುವ ತಾರುಣ್ಯ, ಸಾವಿತ್ರಿ ಯವರಿಗೆ ಕಾನೂನು ಅರಿವು ಪುಸ್ತಕಗಳನ್ನು ವಿತರಿಸಿ ಕಾನೂನು ಸಂವಾದಕ್ಕೆ ಚಾಲನೆ ನೀಡಿ ಮಾಹಿತಿ ನೀಡಿದರು.ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಮಾತನಾಡಿ ಮಹಿಳೆಯರ ರಕ್ಷಣೆಗೆ ಇರುವ ಕಾನೂನುಗಳ ಮಾಹಿತಿ ನೀಡಿದರು. ಪುತ್ತೂರು ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಮಹಿಳಾ ಕಾನೂನು ಸಾಕ್ಷರತಾ ಅಭಿಯಾನ ರಾಜ್ಯಕ್ಕೆ ಮಾದರಿಯಾಗಿದ್ದು ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುವುದು ಅಗತ್ಯವಿದೆ ಎಂದು ನರೇಗಾ ಮಾಜಿ ಒಂಬುಡ್ಸ್ ಮೆನ್ ಶೀನ ಶೆಟ್ಟಿ ಅಭಿಪ್ರಾಯಪಟ್ಟರು. ವಕೀಲರ ಸಂಘದ ಕಾರ್ಯದರ್ಶಿ ಸ್ವಾತಿ ರೈ, ಕೋಶಾಧಿಕಾರಿ ಭಾರತಿ, ಸಹಾಯಕ ಅಭಿರಕ್ಷಕಿ ಅಶ್ವಿನಿ ಪ್ಯಾನೆಲ್ ವಕೀಲರಾದ ಉದಯ ಚಂದ್ರ, ಪ್ರೇಮಲತಾ, ರಮ್ಲತ್, ರಾಜೇಶ್ವರಿ, ಅಕ್ಷಿತ್, ಅಬ್ದುಲ್ ರಹಿಮಾನ್ ಸಂವಾದದಲ್ಲಿ ಭಾಗವಹಿಸಿದರು. ಟ್ರಸ್ಟ್ ನಿರ್ದೇಶಕರು ಸಾಕ್ಷರತಾ ಅಭಿಯಾನ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾನೂನು ಸೇವೆಗಳ ಸಮಿತಿ ಸಿಬ್ಬಂದಿ ಗಳಾದ ಜ್ಯೋತಿ, ಹೇಮಂತ್, ಪಡ್ನರು ಅಂಗನವಾಡಿ ಕಾರ್ಯಕರ್ತೆ ದೇವಿಕಾ, ಗ್ರಾಮ ಸ್ವರಾಜ್ ಸಂಯೋಜಕ ಚೇತನ್ ಕುಮಾರ್, ಸಾಂತ್ವನ ಕೇಂದ್ರ ಸಮಾಲೋಚಕಿ ನಿಶಾ ಕಾರ್ಯ ಕ್ರಮದ ಯಶಸ್ವಿ ಸಂಯೋಜನೆಗೆ ಸಹಕರಿಸಿದರು. ನಪಟ್ಟೂರು ಶಾಲಾ ಅಂಗನವಾಡಿ ಕೇಂದ್ರದ ಸ್ತ್ರೀ ಶಕ್ತಿ ಗುಂಪುಗಳ ಸದಸ್ಯರು, ಬನ್ನೂರು ಗ್ರಾಮ ಪಂಚಾಯತ್ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಸಮಾಜ ಕಾರ್ಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.